ADVERTISEMENT

ಸ್ವಾಮಿ ವಿವೇಕಾನಂದರು ವ್ಯಕ್ತಿಯಲ್ಲ ಶಕ್ತಿ

ರಾಷ್ಟ್ರೀಯ ಯುವ ಸಪ್ತಾಹ ಹಾಗೂ ವಿವೇಕ ಜ್ಞಾನ ಕೇಂದ್ರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2020, 11:40 IST
Last Updated 12 ಜನವರಿ 2020, 11:40 IST
ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಆರತಿ ಆನಂದ್ ಅವರು ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಆರತಿ ಆನಂದ್ ಅವರು ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.   

ಚಿಕ್ಕಬಳ್ಳಾಪುರ: ’ಸ್ವಾಮಿ ವಿವೇಕಾನಂದರು ವ್ಯಕ್ತಿಯಲ್ಲ ಅವರೊಂದು ಶಕ್ತಿ. ಆದ್ದರಿಂದ ಅವರ ಜೀವನ ಮತ್ತು ತತ್ವಾದರ್ಶಗಳು ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು‘ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರತಿ ಆನಂದ್ ತಿಳಿಸಿದರು.

ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಅಂಗವಾಗಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕಾಲೇಜು ಶಿಕ್ಷಣ ಇಲಾಖೆ, ಸಹಯೋಗದಲ್ಲಿ ಹಮ್ಮಿಕೊಂಡಿದ್ದ ’ರಾಷ್ಟ್ರೀಯ ಯುವ ಸಪ್ತಾಹ ಹಾಗೂ ವಿವೇಕ ಜ್ಞಾನ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

’ಸ್ವಾಮಿ ವಿವೇಕಾನಂದರ ತತ್ವಾದರ್ಶಗಳು ಇಂದಿಗೂ ಪ್ರಸ್ತುತ. ಇಂದಿನ ಯುವಜನಾಂಗ ಸ್ವಾಮಿ ವಿವೇಕಾನಂದ, ಗೌತಮ ಬುದ್ಧ, ಅಂಬೇಡ್ಕರ್, ಗಾಂಧೀಜಿಯಂತಹ ಮಹಾನ್ ನಾಯಕರನ್ನು ಆದರ್ಶವಾಗಿ ತೆಗೆದುಕೊಳ್ಳಬೇಕು‘ ಎಂದು ಹೇಳಿದರು.

ADVERTISEMENT

’ಜೀವನದಲ್ಲಿ ಬರುವ ಸಮಸ್ಯೆಗಳಿಗೆ ಬೆನ್ನು ತಿರುಗಿಸಿ ಓಡಿದರೆ, ಸಮಸ್ಯೆಗಳು ನಮ್ಮನ್ನು ಹಿಂಬಾಲಿಸಿಕೊಂಡು ಬರುತ್ತವೆ. ಸಮಸ್ಯೆಗಳಿಗೆ ಎದೆ ಕೊಟ್ಟು ನಿಂತಾಗ ಅವುಗಳಿಂದ ಮುಕ್ತಿ ಹೊಂದಲು ಸಾಧ್ಯ. ಪೋಷಕರು ತಮ್ಮ ಮಕ್ಕಳ ಮೇಲೆ ಸಾಕಷ್ಟು ಭರವಸೆಗಳನ್ನಿಟ್ಟು ಶಾಲಾ, ಕಾಲೇಜುಗಳಿಗೆ ಕಳುಹಿಸಿರುತ್ತಾರೆ. ಮಕ್ಕಳು ಪೋಷಕರ ನಂಬಿಕೆ ಹುಸಿ ಮಾಡದೆ ಗುರಿಯತ್ತ ಸಾಗಬೇಕು‘ ಎಂದರು.

’ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಕೆಲವರು ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥಮಾಡುವುದು ಕಂಡುಬರುತ್ತಿದೆ. ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯನ್ನು ಓದಿ ತಿಳಿಸಿಕೊಂಡಾಗ ಮಾತ್ರ ಸಮಯ ಪಾಲನೆ ಬಗ್ಗೆ ಅರ್ಥಮಾಡಿಕೊಳ್ಳಲು ಸಾಧ್ಯ‘ ಎಂದು ಹೇಳಿದರು.

ಪೇರೇಸಂದ್ರದ ಶಾಂತಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೋಡಿರಂಗಪ್ಪ ಮಾತನಾಡಿ, ‘ವಿವೇಕಾನಂದರ ವಿಚಾರ ಧಾರೆಗಳು ಉಳಿಯಬೇಕಾದರೆ ಅದು ಯುವಕರಿಂದ ಮಾತ್ರ ಸಾಧ್ಯ. ಯುವಜನತೆ ಬುದ್ಧಿವಂತಿಕೆಯ ಜತೆಗೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್ ವಿತರಣೆ ಮಾಡಲಾಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಟಿ ಜಯಲಕ್ಷ್ಮೀ , ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಜಿ.ಡಿ ಚಂದ್ರಯ್ಯ, ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನಾಗರಾಜಯ್ಯ, ಹಾಗೂ ಕಾಲೇಜಿನ ಉಪನ್ಯಾನಸಕರಾದ ರಂಗಸ್ವಾಮಿ, ವಸಂತ್ ಕುಮಾರ್, ಪ್ರೇಮ್ ಕುಮಾರ್, ಸುಜಾತ, ಪದ್ಮಕುಮಾರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.