ADVERTISEMENT

ಚೇಳೂರು: ತಾಲ್ಲೂಕು ಕಚೇರಿ 2 ಬಾರಿ ಉದ್ಘಾಟನೆ!

ಒಂದು ಬಾರಿ ಶಾಸಕ ಸುಬ್ಬಾರೆಡ್ಡಿ, ಮತ್ತೊಮ್ಮೆ ಸಚಿವ ಕೆ.ಸುಧಾಕರ್ ಚಾಲನೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2023, 5:45 IST
Last Updated 29 ಮಾರ್ಚ್ 2023, 5:45 IST
ಚೇಳೂರು ತಾಲ್ಲೂಕು ಕಚೇರಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಉದ್ಘಾಟಿಸುತ್ತಿರುವುದು
ಚೇಳೂರು ತಾಲ್ಲೂಕು ಕಚೇರಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಉದ್ಘಾಟಿಸುತ್ತಿರುವುದು   

ಚೇಳೂರು: ನೂತನ ತಾಲ್ಲೂಕು ಕಚೇರಿ ಉದ್ಘಾಟನೆ ಎರಡು ಪಕ್ಷಗಳ ನಡುವೆ ಎರಡು ಬಾರಿ ನಡೆಯಿತು.

ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ಮಂಗಳವಾರ ಚೇಳೂರು ತಾಲ್ಲೂಕು ಕಚೇರಿ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಉದ್ಘಾಟನೆ ಮಾಡಬೇಕಾಗಿತ್ತು. ಅಧ್ಯಕ್ಷತೆಯನ್ನು ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ವಹಿಸಬೇಕಾಗಿತ್ತು.

ADVERTISEMENT

ಆದರೆ ನಿಗದಿತ ಸಮಯಕ್ಕೆ ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಾಲ್ಲೂಕು ಕಚೇರಿ ಬಳಿ ಆಗಮಿಸಿದ್ದರು. ಆದರೆ ಸಚಿವರು ಶೃಂಗೇರಿಗೆ ತೆರಳಿದ್ದು ಉದ್ಘಾಟನೆಗೆ ಬರುವಾಗ ತಡವಾಗುತ್ತದೆ. ಮಧ್ಯಾಹ್ನ ಎರಡು ಗಂಟೆಗೆ ಬರುತ್ತಾರೆಂದು ಬಾಗೇಪಲ್ಲಿ ತಹಶೀಲ್ದಾರ್ ಶಾಸಕರ ಗಮನಕ್ಕೆ ತಂದರು. ಬೇಸತ್ತ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಹಾಗೂ ಶಾಸಕರ ಬೆಂಬಲಿಗರು ಗಲಾಟೆ ಮಾಡಿ ಉದ್ಘಾಟನೆ ಮಾಡಲು
ಮುಂದಾದರು.

ಪೊಲೀಸರು ಮಧ್ಯ ಪ್ರವೇಶಿಸಿ ಶಿಷ್ಟಾಚಾರ ಉಲ್ಲಂಘನೆ ಮಾಡಬಾರದು ಎಂದು ಅಡ್ಡಿಪಡಿಸಿದರು. ಆಗ ಕಾರ್ಯಕರ್ತರು ಸಹನೆ ಕಳೆದು ತಾಲ್ಲೂಕು ಕಚೇರಿ ಕಟ್ಟಡಕ್ಕೆ ಉದ್ಘಾಟನೆ ಟೇಪನ್ನು ತೆಗೆದುಕೊಂಡು ಸ್ವತಃ ಕಾರ್ಯಕರ್ತರೇ ಕಟ್ಟಿ ಶಾಸಕರಿಂದ ಉದ್ಘಾಟನೆ ನೆರವೇರಿಸಿದರು.

ನಂತರ ಶಾಸಕ ಮಾತನಾಡಿ, ‘ಸಚಿವರು ಬರುವುದನ್ನು ಸರಿಯಾಗಿ ತಿಳಿಸದ ಕಾರಣ ಎರಡು ಬಾರಿ ನನಗೆ ಉದ್ಘಾಟನೆಗೆ ಕರೆದು ಕಾರ್ಯಕ್ರಮ ಮುಂದೂಡಲಾಯಿತು ಎಂದು ಹೇಳಿದ್ದಾರೆ. ಶಾಸಕರು ಎಂದರೆ ಏನೆಂದು ತಿಳಿದಿದ್ದೀರಿ. ನೀವು ಹೇಳಿದಂತೆ ನಡೆಯಬೇಕಾ. ಇಷ್ಟ ಬಂದಾಗ ಕರೆಯುವುದು ಮತ್ತೆ ಕಾರ್ಯಕ್ರಮ ಮುಂದೂಡಲಾಯಿತು ಎಂದು ಹೇಳುವುದು ಸರಿಯೇ’ ಎಂದು ಬೇಸರ ವ್ಯಕ್ತಪಡಿಸಿದರು.

ಶಾಸಕರು ಹಾಗೂ ಉಸ್ತುವಾರಿ ಸಚಿವರನ್ನು ಕರೆಸಿ ಪೂರ್ವಭಾವಿ ಸಭೆ ನಡೆಸಿ ಚರ್ಚೆ ಮಾಡಿ ಎಲ್ಲರನ್ನು ಕರೆಯಬೇಕಿತ್ತು. ಆದರೆ ಯಾರನ್ನು ಸರಿಯಾಗಿ ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘನೆ ಮಾಡಿ ಜಿಲ್ಲಾಧಿಕಾರಿ ನಿರ್ಲಕ್ಷ್ಯತೆಯಿಂದ ಈ ಕಾರ್ಯಕ್ರಮವನ್ನು ಸಚಿವರಿಗೆ ಅನುಕೂಲಕರವಾಗುವ ರೀತಿಯಲ್ಲಿ ಇಷ್ಟ ಬಂದ ಸಮಯದಲ್ಲಿ ಉದ್ಘಾಟನೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ ಎಂದರು.

ಮೂರು ಗಂಟೆ ಸಮಯಕ್ಕೆ ಸರಿಯಾಗಿ ಹೆಲಿಕಾಪ್ಟರ್ ಮೂಲಕ ಬಂದಿಳಿದ ಸಚಿವ ಕೆ.ಸುಧಾಕರ್, ಚೇಳೂರು ತಾಲ್ಲೂಕು ಕಚೇರಿಯನ್ನು 2ನೇ ಬಾರಿಗೆ ಉದ್ಘಾಟಿಸಿದರು.

ನಂತರ ಮಾತನಾಡಿ, ‘ತಾಲ್ಲೂಕಿಗೆ ಮುಂದಿನ ದಿನಗಳಲ್ಲಿ ವಿಧಾನಸೌಧ ಕಟ್ಟಡಕ್ಕೆ ₹10ಕೋಟಿ ಅನುದಾನ ಕೊಡಲಾಗುವುದು. ತಾಲ್ಲೂಕು ಮಟ್ಟದ ಆಸ್ಪತ್ರೆ ಮಂಜುರಾತಿ ಮಾಡಿ ಚೇಳೂರು ತಾಲ್ಲೂಕು ಸಮಗ್ರ ಅಭಿವೃದ್ಧಿಗೆ ಕೈ ಜೋಡಿಸಲಾಗುವುದು’ ಎಂದು ಭರವಸೆ ನೀಡಿದರು.

ಜಿಲ್ಲಾಧಿಕಾರಿ ನಾಗರಾಜ, ಸಿಇಒ. ಪ್ರಕಾಶ್, ಎಸ್.ಪಿ.ನಾಗೇಶ್ ತಹಶೀಲ್ದಾರ್ ರಾಮಲಕ್ಷ್ಮಯ್ಯ, ನಿವೃತ್ತ ಡಿವೈಎಸ್‌ಪಿ ಟಿ. ಕೋನಪ್ಪರೆಡ್ಡಿ, ಚೇಳೂರು ಸರ್ಕಲ್‌ ಇನ್‌ಸ್ಪೆಕ್ಟರ್ ರವಿಕುಮಾರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.