ADVERTISEMENT

ಡಿಡಿಪಿಐ ಕಚೇರಿ ಎದುರು ಶಿಕ್ಷಕರ ಪ್ರತಿಭಟನೆ

ಕಚೇರಿ ಸಿಬ್ಬಂದಿ, ಶಿಕ್ಷಕಿಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಾನಸಿಕ ಹಿಂಸೆ ನೀಡುವ ಆರೋಪ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2019, 15:45 IST
Last Updated 29 ಆಗಸ್ಟ್ 2019, 15:45 IST
ಡಿಡಿಪಿಐ ಕಚೇರಿ ಎದುರು ಶಿಕ್ಷಕರು ಪ್ರತಿಭಟನೆ ನಡೆಸಿದರು.
ಡಿಡಿಪಿಐ ಕಚೇರಿ ಎದುರು ಶಿಕ್ಷಕರು ಪ್ರತಿಭಟನೆ ನಡೆಸಿದರು.   

ಚಿಕ್ಕಬಳ್ಳಾಪುರ: ಸಾರ್ವಜನಿಕ ಶಿಕ್ಷಣ ಸಂಸ್ಥೆ ಉಪ ನಿರ್ದೇಶಕ (ಡಿಡಿಪಿಐ) ಎಸ್.ಜಿ.ನಾಗೇಶ್‌ ಅವರು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಹಾಗೂ ಶಿಕ್ಷಕಿಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವ ಜತೆಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ನಗರದ ಡಿಡಿಪಿಐ ಕಚೇರಿ ಎದುರು ಶಿಕ್ಷಕರು ಗುರುವಾರ ಪ್ರತಿಭಟನೆ ನಡೆಸಿದರು.

ಡಿಡಿಪಿಐ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುವ ಕಂಪ್ಯೂಟರ್ ಆಪರೇಟರ್ ಫರ್ಜಾನಾ ಎಂಬುವರನ್ನು ಡಿಡಿಪಿಐ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮಹಿಳೆಯರು ಎಂಬ ಕನಿಷ್ಠ ಪರಿಜ್ಞಾನವಿಲ್ಲದೆ ಶಿಕ್ಷಕಿಯರೊಂದಿಗೆ ಏಕವಚನದಲ್ಲಿ ಮಾತನಾಡುತ್ತಿದ್ದಾರೆ. ಕೂಡಲೇ ಅವರು ಕ್ಷಮೆಯಾಚಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

ಈ ವೇಳೆ ಮಾತನಾಡಿದ ಕಂಪ್ಯೂಟರ್ ಆಪರೇಟರ್ ಫರ್ಜಾನಾ, ‘ಬೆಳಗ್ಗೆ ಕಚೇರಿಗೆ ಬಂದ ಡಿಡಿಪಿಐ ಅವರನ್ನು ತಿಂಡಿ ಆಯಿತೇ ಎಂದು ಪ್ರಶ್ನಿಸಿದಾಗ ತಪ್ಪಾಗಿ ಭಾವಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಯಾಕೆ ಎಂದು ಪ್ರಶ್ನಿಸಲೂ ಅವಕಾಶ ನೀಡದೆ ಕಿಡಿಕಾರಿದ್ದಾರೆ’ ಎಂದು ಪ್ರತಿಭಟನೆ ವೇಳೆ ಕಣ್ಣೀರು ಹಾಕಿದರು.

ADVERTISEMENT

ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಬಂದ ಡಿಡಿಪಿಐ ನಾಗೇಶ್ ಅವರು, ‘ನಾನು ಯಾರಿಗೂ ಅವಾಚ್ಯ ಶಬ್ದಗಳಿಂದ ಮಾತನಾಡಿಲ್ಲ. ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಎಲ್ಲರ ಸಹಕಾರದೊಂದಿಗೆ ಶ್ರಮಿಸಲಾಗುತ್ತಿದೆ. ಫರ್ಜಾನಾ ಅವರು ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಸಮಜಾಯಿಷಿ ನೀಡಲು ಮುಂದಾದರು.

ಈ ಸಂದರ್ಭದಲ್ಲಿ ರೊಚ್ಚಿಗೆದ್ದ ಪ್ರತಿಭಟನಾಕಾರರು ಡಿಡಿಪಿಐ ಅವರನ್ನು ತರಾಟೆಗೆ ತೆಗೆದುಕೊಂಡರು. ‘ಕಚೇರಿ ಕೆಲಸದ ಬಗ್ಗೆ ರಾತ್ರಿ ವೇಳೆ ಮಹಿಳೆಯರಿಗೆ ಕರೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸುವ ಅಗತ್ಯವಾದರೂ ಏನಿದೆ’ ಎಂದು ಶಿಕ್ಷಕಿಯರು ಪ್ರಶ್ನಿಸಿದಾಗ ನಾಗೇಶ್‌ ಅವರು ಉತ್ತರಿಸಲು ತಡವರಿಸಿದರು. ಈ ವೇಳೆ ಅವರು, ‘ನನ್ನ ಭಾಷೆ ಸರಿ ಇಲ್ಲವಾದರೆ ಅದನ್ನು ಸರಿಪಡಿಸಿಕೊಳ್ಳುತ್ತೇನೆ’ ಎಂದು ತಿಳಿಸಿ ಅಲ್ಲಿಂದ ನಿರ್ಗಮಿಸಿದರು.

ಬಳಿಕ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಅವರಿಗೆ ಈ ಕುರಿತು ದೂರು ಸಲ್ಲಿಸಲಾಗುವುದು ಎಂದು ತಿಳಿಸಿದರು. ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ನಾರಾಯಣಸ್ವಾಮಿ, ತಾಲ್ಲೂಕು ಘಟಕದ ಅಧ್ಯಕ್ಷ ರಾಮಶೇಷಪ್ಪ, ಕಾರ್ಯದರ್ಶಿ ನಾಗರಾಜ್, ಶಿಕ್ಷಕರಾದ ಸುನಿಲ್, ಅಮರ್, ಶ್ರೀನಿವಾಸ್, ಕೃಷ್ಣಮೂರ್ತಿ, ಆಯಿಷಾ ಬೇಗಂ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.