ADVERTISEMENT

ಡಿಕೆಶಿ ಅವರೇ ನಿಮಗೆ ಲೂಟಿ ಮಾಡಿ ಅಭ್ಯಾಸವಿದೆ. ನನಗೂ ಹೇಳಿಕೊಡಿ: ಕೆ.ಎಸ್.ಈಶ್ವರಪ್ಪ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಟೀಕೆಗೆ ತಿರುಗೇಟು

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2020, 11:55 IST
Last Updated 27 ಏಪ್ರಿಲ್ 2020, 11:55 IST
ಕೆ.ಎಸ್. ಈಶ್ವರಪ್ಪ
ಕೆ.ಎಸ್. ಈಶ್ವರಪ್ಪ   

ಚಿಕ್ಕಬಳ್ಳಾಪುರ: ’ಡಿ.ಕೆ. ಶಿವಕುಮಾರ್ ಅವರೇ ಹೊಸದಾಗಿ ಕೆಪಿಸಿಸಿ ಅಧ್ಯಕ್ಷರಾಗಿರುವುದು ತೋರಿಸಿಕೊಳ್ಳಲು ನಾಟಕವಾಡಬೇಡಿ. ನಿಮಗೆ ಲೂಟಿ ಮಾಡಿ ಅಭ್ಯಾಸವಿದೆ. ಅದನ್ನು ನನಗೂ ಹೇಳಿಕೊಡಿ‘ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಅವರು ಡಿಕೆಶಿ ಅವರಿಗೆ ತಿರುಗೇಟು ನೀಡಿದರು.

’ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ‘ ಎಂಬ ಡಿಕೆಶಿ ಅವರ ಆರೋಪ ಕುರಿತಂತೆ ಈಶ್ವರಪ್ಪ ಅವರು ತಾಲ್ಲೂಕಿನ ಶಿಡ್ಲಘಟ್ಟದಲ್ಲಿ ಸೋಮವಾರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.

’ಇಷ್ಟು ವರ್ಷ ಲೂಟಿ ಮಾಡಿ ನಿಮಗೆ ಅನುಭವ ಇದೆಯಲ್ಲ, ನರೇಗಾದಲ್ಲಿ ಎಲ್ಲೆಲ್ಲಿ ಲೂಟಿ ಮಾಡಿದ್ದೀರಿ ಜನಕ್ಕೆ ಹೇಳಿ. ನಾವು ಬಿಗಿ ಮಾಡುತ್ತೇವೆ. ಅದು ಬಿಟ್ಟು ಬರೀ ರಾಜಕಾರಣ ಮಾಡುತ್ತ ಹೋಗಬೇಡಿ. ಈ ಇಲಾಖೆಗೆ ನಾನು ಹೊಸದಾಗಿ ಬಂದಿರುವೆ. ಎಲ್ಲೆಲ್ಲಿ ಲೂಟಿ ಮಾಡಿದ್ದೇವೆ ಎಂದು ತೋರಿಸಿ, ಚರ್ಚೆಗೆ ಬನ್ನಿ‘ ಎಂದು ಪ್ರತಿ ಸವಾಲು ಹಾಕಿದರು.

ADVERTISEMENT

’ನರೇಗಾದಲ್ಲೂ ರಾಜಕೀಯ ಮಾಡಲು ಏಕೆ ಪ್ರಯತ್ನ ಮಾಡುತ್ತೀರಿ? ಜನ ಕೆಲಸವಿಲ್ಲದೆ ಒದ್ದಾಡುತ್ತಿದ್ದಾರೆ. ಅವರಿಗೆ ಕೆಲಸ ಕೊಡಲು ನಾವು ಪ್ರಯತ್ನಿಸುತ್ತಿದ್ದೇವೆ. ಬರೀ ಹೇಳಿಕೆ ಕೊಟ್ಟು ತೃಪ್ತಿಪಟ್ಟುಕೊಳ್ಳಬೇಡಿ. ಹೇಳಿಕೆಗಳಿಂದ ಏನೂ ಲಾಭವಿಲ್ಲ. ನನ್ನಿಂದ ಒಂದೇ ಒಂದು ಪೈಸೆ ತಪ್ಪಾಗಿದ್ದರೆ ತೋರಿಸಿ‘ ಎಂದರು.

’ಕೊರೊನಾ ಸೋಂಕಿನ ಭೀತಿಗೆ ನರೇಗಾ ಕೆಲಸ ಮಾಡಬೇಕೆ ಬೇಡವೇ ಎಂದು ಜನರಲ್ಲಿ ಗೊಂದಲವಿತ್ತು. ಕೆಲಸ ಮಾಡಿದರೆ ಏನೂ ಸಮಸ್ಯೆ ಆಗಲ್ಲ, ಅಂತರ ಕಾಯ್ದುಕೊಂಡು ಕೆಲಸ ಮಾಡಿ ಎಂದು ಸೂಚಿಸಿದ್ದೇವೆ. ಈಗಾಗಲೇ 6,021 ಗ್ರಾಮ ಪಂಚಾಯಿತಿಗಳ ಪೈಕಿ 5,400ಕ್ಕೂ ಹೆಚ್ಚು ಪಂಚಾಯಿತಿಗಳಲ್ಲಿ ನರೇಗಾ ಕೆಲಸ ಆರಂಭವಾಗಿದೆ. ಜನರು ಖುಷಿಯಿಂದ ಕೆಲಸ ಮಾಡುತ್ತಿದ್ದಾರೆ‘ ಎಂದು ಹೇಳಿದರು.

’ರಾಜ್ಯದಲ್ಲಿ ಅಂತರ್ಜಲ ಹೆಚ್ಚಿಸಬೇಕು ಸರ್ಕಾರ ನಿರ್ಧರಿಸಿದೆ. ಅದಕ್ಕಾಗಿ ರವಿಶಂಕರ್‌ ಗುರೂಜಿ ಅವರ ಆರ್ಟ್‌ ಆಫ್‌ ಲೀವಿಂಗ್‌ ಸಂಸ್ಥೆ ಜತೆ ಸರ್ಕಾರ ಒಡಂಬಡಿಕೆ ಮಾಡಿಕೊಂಡಿದೆ. ಈ ಯೋಜನೆಯಲ್ಲಿ ಈ ಬಾರಿ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಸೇರಿದಂತೆ ಒಂಬತ್ತು ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ‘ ಎಂದು ತಿಳಿಸಿದರು.

’ನರೇಗಾದಲ್ಲಿ ಆಗಿರುವ ಕಾಮಗಾರಿಗಳನ್ನು ಪರಿಶೀಲಿಸಿ ಮಾಡಬೇಕಾದ ಕಾರ್ಯಯೋಜನೆ ರೂಪಿಸುವ ಸಲುವಾಗಿ ಜಿಲ್ಲೆಗಳ ಪ್ರವಾಸ ಕೈಗೊಂಡಿರುವೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.