ADVERTISEMENT

ಚಿಕ್ಕಬಳ್ಳಾಪುರ | ಗೋಮಾಳ ಅತಿಕ್ರಮಣ ಆರೋಪ ಸುಳ್ಳು

ಹಿಂದೂ ಜಾಗರಣ ವೇದಿಕೆ ಆರೋಪ ಅಲ್ಲಗಳೆದ ಸಾಮಾಜಿಕ ಕಾರ್ಯಕರ್ತ ಎ.ಟಿ.ಕೃಷ್ಣನ್

​ಪ್ರಜಾವಾಣಿ ವಾರ್ತೆ
Published 2 ಜುಲೈ 2020, 12:56 IST
Last Updated 2 ಜುಲೈ 2020, 12:56 IST

ಚಿಕ್ಕಬಳ್ಳಾಪುರ: ‘ಚಿಕ್ಕಬಳ್ಳಾಪುರ ತಾಲ್ಲೂಕಿನ ಆವಲಗುರ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಿಕೆರೆ ಗ್ರಾಮದ ಸರ್ವೇ ನಂಬರ್ 10 ರಲ್ಲಿ ಕ್ರೈಸ್ತ ಮಿಷನರಿ 170 ಗೋಮಾಳ ಜಾಗ ಅತಿಕ್ರಮಣ ಮಾಡಿದೆ ಎಂಬ ಹಿಂದೂ ಜಾಗರಣ ವೇದಿಕೆ ಆರೋಪ ಸುಳ್ಳು’ ಎಂದು ಸಾಮಾಜಿಕ ಕಾರ್ಯಕರ್ತ ಎ.ಟಿ.ಕೃಷ್ಣನ್‌ ಹೇಳಿದರು.

ಗುರುವಾರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಕ್ರಿಶ್ಚಿಯನ್‌ಗೆ ಮತಾಂತರವಾಗಿದ್ದ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಸುಂದ್ರಣ್ಣ ಎಂಬುವರು 1960ರಲ್ಲಿ ಈ ಭಾಗದಲ್ಲಿ ಬರಗಾಲ ಕಾಣಿಸಿಕೊಂಡ ಸಮಯದಲ್ಲಿ ಸೋಸೆಪಾಳ್ಯದ ಬೆಟ್ಟದ ಮೇಲೆ ಹೋಗಿ ಪ್ರಾರ್ಥನೆ ಸಲ್ಲಿಸಿ, ಶಿಲುಬೆ ನೆಟ್ಟಿದ್ದರು’ ಎಂದು ತಿಳಿಸಿದರು.

‘ಸುಂದ್ರಣ್ಣ ಅವರ ನೆನಪಿಗಾಗಿ ಇಂದಿಗೂ ಆ ಶಿಲುಬೆ ಉಳಿಸಿಕೊಂಡು ಬರಲಾಗಿದೆ. ಬೆಟ್ಟದ ಮೇಲೆ ವರ್ಷದಲ್ಲಿ ಒಂದು ಬಾರಿ ಶುಭ ಶುಕ್ರವಾರ ಸಮಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವೊಂದು ಮಾತ್ರ ನಡೆಯುತ್ತದೆ. ಉಳಿದಂತೆ ಅಲ್ಲಿ ಯಾವುದೇ ಚಟುವಟಿಕೆಗಳು ನಡೆಯುವುದಿಲ್ಲ. ಬೆಟ್ಟದ ಮೇಲೆ ಹೋಗಲು ಮೆಟ್ಟಿಲುಗಳಾಗಲಿ, ಯಾವುದೇ ಕಟ್ಟಡಗಳಾಗಲಿ ನಿರ್ಮಿಸಿಲ್ಲ’ ಎಂದರು.

ADVERTISEMENT

‘ಅರಿಕೆರೆ ಗ್ರಾಮದ ಸರ್ವೇ ನಂಬರ್ 10 ರಲ್ಲಿಯೇ ಜಿಲ್ಲಾಡಳಿತ ಶಾಲೆ, ಕುಡಿಯುವ ನೀರಿನ ಘಟಕ, ಹಾಲಿನ ಡೇರಿ, ಸ್ಮಶಾನಕ್ಕೆ ಜಾಗ ಮಂಜೂರು ಮಾಡಿದೆ. ಆಶ್ರಯ ಯೋಜನೆಗಾಗಿಒಂದೂವರೆ ಎಕರೆ ನೀಡಿದೆ. ಅಲ್ಲಿ ಹನುಮಂತಪುರ, ಅರಿಕೆರೆ ಗ್ರಾಮದ ಹಿಂದೂ ಕುಟುಂಬಗಳೇ ನಿವೇಶನ ಪಡೆದು ಮನೆಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ’ ಎಂದು ಹೇಳಿದರು.

‘ಸೊಸೇಪಾಳ್ಯದ ಬೆಟ್ಟದ ಮೇಲಿನ ಶಿಲುಬೆಯಿಂದ ಈವರೆಗೆ ಪ್ರಾಣಿಗಳಿಗಾಗಲಿ, ಮನುಷ್ಯರಿಗಾಗಲಿ ಯಾವುದೇ ರೀತಿಯ ತೊಂದರೆ ಉಂಟಾಗಿಲ್ಲ. ಆ ಪ್ರದೇಶದಲ್ಲಿ ಮತಾಂತರ ಕಾರ್ಯವೂ ನಡೆಯುತ್ತಿಲ್ಲ. ಸ್ಥಳೀಯ ಗ್ರಾಮಸ್ಥರಿಂದ ಈವರೆಗೆ ಯಾವುದೇ ಆಕ್ಷೇಪಗಳು ವ್ಯಕ್ತವಾಗಿಲ್ಲ’ ಎಂದು ತಿಳಿಸಿದರು.

‘ಆದರೂ, ಕೆಲ ಸಂಘಟನೆಯವರು ಉದ್ದೇಶಪೂರ್ವಕವಾಗಿ ಕ್ರಿಶ್ಚಿಯನ್ ಸಮುದಾಯದವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಶಿಲುಬೆ ತೆರವುಗೊಳಿಸಲು ಒತ್ತಾಯಿಸುತ್ತ ಸಮಾಜದ ಸಾಮರಸ್ಯ ಕೆಡಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಇವತ್ತು ಜಿಲ್ಲೆಯಲ್ಲಿ ಸಾಮಾಜಿಕ ಸಾಮರಸ್ಯ ಕಾಪಾಡಿಕೊಳ್ಳುವ, ಧಾರ್ಮಿಕ ನಂಬಿಕೆಗಳನ್ನು ಗೌರವಿಸುವ ಕೆಲಸವಾಗಬೇಕಿದೆ. ಆದ್ದರಿಂದ, ಈ ಸುಳ್ಳು ಆರೋಪಗಳ ಬಗ್ಗೆ ಮತ್ತು ವಸ್ತುಸ್ಥಿತಿ ಕುರಿತು ಜಿಲ್ಲಾಧಿಕಾರಿ ಅವರಿಗೆ ಕಂದಾಯ ದಾಖಲೆ ಸಮೇತ ಮನವಿ ಸಲ್ಲಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.