ADVERTISEMENT

ಕಣ್ಣುಗಳೇ ಸದೃಢ ಶರೀರಕ್ಕೆ ಕನ್ನಡಿ

‘21ನೇ ವಿಶ್ವ ದೃಷ್ಟಿ ದಿನ’ದ ನಿಮಿತ್ತ ಕಣ್ಣಿನ ಆರೋಗ್ಯ ಜಾಗೃತಿ ವಾಹನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2020, 15:50 IST
Last Updated 8 ಅಕ್ಟೋಬರ್ 2020, 15:50 IST
ಕಣ್ಣಿನ ಆರೋಗ್ಯ ಜಾಗೃತಿ ವಾಹನಕ್ಕೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರಮೇಶ್ ಚಾಲನೆ ನೀಡಿದರು. 
ಕಣ್ಣಿನ ಆರೋಗ್ಯ ಜಾಗೃತಿ ವಾಹನಕ್ಕೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರಮೇಶ್ ಚಾಲನೆ ನೀಡಿದರು.    

ಚಿಕ್ಕಬಳ್ಳಾಪುರ: ‘ಮನುಷ್ಯನ ಅವಯವಗಳಲ್ಲಿ ಕಣ್ಣು ಬಲು ಸೂಕ್ಷ್ಮ ಅಂಗ. ಪ್ರತಿಯೊಬ್ಬರಲ್ಲಿಯೂ ಕಣ್ಣಿನ ದೃಷ್ಟಿಯ ಬಗ್ಗೆ ಅರಿವಿರಬೇಕು. ಆಗ ಮಾತ್ರ ಕಣ್ಣಿನ ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ರಮೇಶ್ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಗುರುವಾರ ‘ದೃಷ್ಟಿಯಲ್ಲಿ ಭರವಸೆ’ ಎಂಬ ಘೋಷವಾಕ್ಯದಡಿ ಹಮ್ಮಿಕೊಂಡಿದ್ದ ‘21ನೇ ವಿಶ್ವ ದೃಷ್ಟಿ ದಿನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಣ್ಣುಗಳೇ ಸದೃಢ ಶರೀರಕ್ಕೆ ಕನ್ನಡಿ. ಕಣ್ಣಿನಲ್ಲಿರುವ ಅಕ್ಷಿಪಟಲ ಕ್ಯಾಮೆರಾ ಇದ್ದಂತೆ. ಅಕ್ಷಿಪಟಲ ಸದಾ ಶುಚಿಯಾಗಿಟ್ಟುಕೊಳ್ಳಬೇಕು. ಮಧುಮೇಹ ಒಮ್ಮೆ ಬಂದರೆ ಅದು ಶಮನವಾಗದ ರೋಗ. ಹಾಗಾಗಿ ಮಧುಮೇಹ ಮೊದಲೇ ಬಾರದ ನಿಟ್ಟಿನಲ್ಲಿ ಜೀವನ ಶೈಲಿಯನ್ನು ಪ್ರತಿಯೊಬ್ಬರು ಬದಲಾಯಿಸಿಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

‘ಕಣ್ಣಿನ ಸೋಂಕು, ವಿಟಮಿನ್ ಎ ಕೊರತೆ, ಅಪೌಷ್ಠಿಕತೆ, ಅಕ್ಷಿಪಟಲದ ಗಾಯ, ಅನುವಂಶಿಕ ನ್ಯೂನ್ಯತೆಗಳು ದೃಷ್ಟಿ ದೋಷಗಳಿಗೆ ಮುಖ್ಯ ಕಾರಣಗಳಾಗಿವೆ. ಇಂತಹ ಸಮಸ್ಯೆಗಳು ಕಾಣಿಸಿಕೊಂಡ ತಕ್ಷಣವೇ ಕಣ್ಣಿನ ತಜ್ಞರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಉತ್ತಮ. ಕಣ್ಣಿನ ವಿಚಾರದಲ್ಲಿ ನಿರ್ಲಕ್ಷ್ಯ ಸಲ್ಲದು’ ಎಂದರು.

‘ಪ್ರಾಥಮಿಕ ಹಂತದಲ್ಲಿಯೇ ಈ ದೃಷ್ಟಿ ಸಮಸ್ಯೆಯನ್ನು ನಿವಾರಿಸುವ ಸಲುವಾಗಿ ಆಶಾ ಕಾರ್ಯಕರ್ತೆಯರು, ನರ್ಸ್‍ಗಳು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆ ಇರುವವರು ಪ್ರತಿ ಮೂರು ತಿಂಗಳಿಗೊಮ್ಮೆ ನೇತ್ರ ತಜ್ಞರಲ್ಲಿ ಕಣ್ಣುಗಳನ್ನು ಪರೀಕ್ಷಿಸಿಕೊಳ್ಳಬೇಕು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ 3,600 ಕಣ್ಣಿನ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿದೆ. ಇಡೀ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ದಾನ ಮಾಡಿದ ಕಣ್ಣುಗಳ ಅಕ್ಷಿಪಟಲಗಳ ಕಸಿ ಮಾಡಿದ ಹೆಮ್ಮೆ ಜಿಲ್ಲೆಗಿದೆ. ಈವರೆಗೆ ಐದು ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ’ ಎಂದು ತಿಳಿಸಿದರು.

‘ಮಧುಮೇಹ ರೋಗಿಗಳಿಗೆ 54 ಲೇಸರ್ ಶಸ್ತ್ರಚಿಕಿತ್ಸೆಯನ್ನು ಹಾಗೂ ಜಿಲ್ಲಾ, ತಾಲ್ಲೂಕು ಆಸ್ಪತ್ರೆಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಸೇರಿ ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದಡಿ 2019-20ನೇ ಸಾಲಿನಲ್ಲಿ 7,091 ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿದೆ’ ಎಂದರು.

‘ಪ್ರಸಕ್ತ ಸಾಲಿನಲ್ಲಿ ಕೋವಿಡ್-19 ನಿಂದಾಗಿ ನೇತ್ರ ಸಮಸ್ಯೆಯುಳ್ಳ ಶಾಲಾ ಮಕ್ಕಳಿಗೆ ಉಚಿತ ಕನ್ನಡಕಗಳ ವಿತರಣೆ ಕಾರ್ಯಕ್ಕೆ ಹಿನ್ನಡೆಯಾಗಿದೆ. ಮುಂದಿನ ದಿನಗಳಲ್ಲಿ ಅದನ್ನು ಚುರುಕುಗೊಳಿಸಲಾಗುವುದು. ಹಿರಿಯ ನಾಗರಿಕರಿಗೆ ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ ಪ್ರಗತಿಯಲ್ಲಿದೆ’ ಎಂದು ಹೇಳಿದರು.

‘ವಿಶೇಷವಾಗಿ ಮಧುಮೇಹಿಗಳು ಕಣ್ಣು ಮಂಜಾಗಿ ಕಾಣುತ್ತಿದ್ದರೆ, ಹಗುರವಾಗಿ ಪರಿಗಣಿಸುವಂತಿಲ್ಲ. ವಯಸ್ಸಾದ ಬಳಿಕ ಅದು ದೊಡ್ಡ ಸಮಸ್ಯೆಯಾಗುತ್ತದೆ. ಆದ್ದರಿಂದ, ಮಧುಮೇಹಿಗಳು ನಿಯಮಿತವಾಗಿ ತಜ್ಞ ವೈದ್ಯರ ಬಳಿ ನೇತ್ರ ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಶಿವಕುಮಾರ್, ನೇತ್ರ ತಜ್ಞರಾದ ಡಾ.ಜೆ.ಬಿ. ಮಹೇಶ್, ಡಾ.ಚೇತನ್, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.