ADVERTISEMENT

ಬೆಳಗಿನ ಇಬ್ಬನಿಗೆ ಚುಮು ಚುಮು ಚಳಿ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2022, 4:10 IST
Last Updated 31 ಡಿಸೆಂಬರ್ 2022, 4:10 IST
ಶಿಡ್ಲಘಟ್ಟದಲ್ಲಿ ಶುಕ್ರವಾರ ಬೆಳಿಗ್ಗೆ ಆವರಿಸಿರುವ ದಟ್ಟ ಮಂಜಿನ ನಡುವೆಯೇ ಶಾಲೆ ಬಸ್ಸಿಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳು
ಶಿಡ್ಲಘಟ್ಟದಲ್ಲಿ ಶುಕ್ರವಾರ ಬೆಳಿಗ್ಗೆ ಆವರಿಸಿರುವ ದಟ್ಟ ಮಂಜಿನ ನಡುವೆಯೇ ಶಾಲೆ ಬಸ್ಸಿಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳು   

ಶಿಡ್ಲಘಟ್ಟ: ತಾಲ್ಲೂಕಿನ ಎಲ್ಲೆಡೆ ಶುಕ್ರವಾರ ಮುಂಜಾನೆ ದಟ್ಟ ಮಂಜು ಆವರಿಸಿತ್ತು. ಮುಂಜಾವಿನ ಮಂಜು ಮನಸ್ಸಿಗೆ ಹಿತ ನೀಡಿದರೂ, ಮೈಕೊರೆಯುವಂತಿದ್ದ ಚುಮುಚುಮು ಚಳಿಯಿಂದ ಬೆಳಿಗ್ಗೆ ಕೆಲಸಕ್ಕೆ ಹೋಗುವವರಿಗೆ ತೊಂದರೆಯೂ ಆಯಿತು.

ಕಳೆದ ಎರಡು ದಿನಗಳಿಂದ ಸೂರ್ಯೋದಯ ತಡವಾಗುತ್ತಿದ್ದು, ಮಂಜು ಆವರಿಸತೊಡಗಿದೆ. ದಟ್ಟ ಮಂಜು ಆವರಿಸಿದ್ದರಿಂದಾಗಿ ಬೆಳಿಗ್ಗೆ 8
ಗಂಟೆಯಾದರೂ, ವಾಹನಗಳು ದೀಪ ಹಾಕಿಕೊಂಡು ಹೋಗುವ ಸ್ಥಿತಿಯಿದೆ. ವಾಕಿಂಗ್ ಹೋಗುವವರು ಸ್ವೆಟರ್, ಶಾಲೆಗೆ ಹೋಗುವವರು ಟೊಪ್ಪಿಗಳಲ್ಲಿ ಬಂಧಿಯಾದರೆ, ಆಲದ ಮರ ಮಂಜಿನ ಮರದಂತೆ ಭಾಸವಾಗುತಿತ್ತು. ನಗರದ ಕಟ್ಟಡಗಳೆಲ್ಲ ಮಂಜಿನ ಮುಸುಕಿನಲ್ಲಿ ಮುಳುಗಿದ್ದವು. ಅಲ್ಲಲ್ಲಿ ನಿಂತ ತೆಂಗಿನ ಮರಗಳು ಮಾತ್ರ ತಮ್ಮ ಇರುವನ್ನು ತೋರಗೊಡುವಂತೆ ಭಾಸವಾಗುತ್ತಿದ್ದವು.

ಮುಂಜಾನೆಯ ಪ್ರಕೃತಿ ಆರಾಧಕರು, ವಾಯು ಸಂಚಾರಿಗಳಿಗೆ ಮಂಜಿನ ಆಗಮನ ಆಹ್ಲಾದ ತಂದರೆ, ಮುಂಜಾನೆ ಕಾಯಕದಲ್ಲಿ ನಿರತರಾದ ಹಾಲು, ಪೇಪರ್ ಹಂಚುವರು ಮತ್ತು ಇತರರಿಗೆ ಬೇಸರ ಮೂಡಿಸಿಸಿತ್ತು.

ADVERTISEMENT

ಹಸಿರು ಹಲ್ಲು ಹಾಸಿನ ಮೇಲೆ ಇಬ್ಬನಿಯ ಹನಿಗಳು...: ಬೆಳಿಗ್ಗೆ ನಿದ್ದೆಯಿಂದ ಎದ್ದು ಹೊರಗೆ ಬಂದವರಿಗೆ ಮತ್ತೊಂದು ಬಿಳಿಯ ಕನಸಿನ ಲೋಕ ಕಣ್ಮುಂದೆ ತೆರೆದುಗೊಂಡಿತ್ತು. ಅದು ಕನಸಲ್ಲ, ಉದ್ದಕ್ಕೂ ಹಬ್ಬಿದ ಇಬ್ಬನಿಯ ಇಹದ ಲೋಕ ಎಂದು ತಿಳಿಯಲು ಕೆಲ ಕ್ಷಣ ಬೇಕಾದವು.

ದಾರಿಯುದ್ದಕ್ಕೂ ಬೆಳೆದ ಹುಲ್ಲು, ಗರಿಕೆ, ವನ ಕುಸುಮಗಳ ಮೇಲೆ ಇಬ್ಬನಿಯು ಮುತ್ತುಗಳಂತೆ ಕಂಗೊಳಿಸುತ್ತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.