ADVERTISEMENT

ಮೂವರು ಮನೆಗಳ್ಳರ ಬಂಧನ: ₹8.5 ಲಕ್ಷ ಮೌಲ್ಯದ ಚಿನ್ನಾಭರಣ ವಶ

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 4:47 IST
Last Updated 26 ಜನವರಿ 2023, 4:47 IST
ಬಂಧಿತ ಆರೋಪಿಗಳಿಂದ ಚಿಂತಾಮಣಿ ಪೊಲೀಸರು ವಶಕ್ಕೆ ಪಡೆದಿರುವ ಚಿನ್ನಾಭರಣ
ಬಂಧಿತ ಆರೋಪಿಗಳಿಂದ ಚಿಂತಾಮಣಿ ಪೊಲೀಸರು ವಶಕ್ಕೆ ಪಡೆದಿರುವ ಚಿನ್ನಾಭರಣ   

ಚಿಂತಾಮಣಿ: ನಗರದಲ್ಲಿ ಮನೆಗಳ್ಳತನದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಗಸ್ತಿನಲ್ಲಿದ್ದ ಚಿಂತಾಮಣಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ₹6.5 ಲಕ್ಷ ಮೌಲ್ಯದ 125 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಕೊಡಿಗೇಹಳ್ಳಿಯ ಜಗನ್ನಾಥ್ ಹಾಗೂ ಚಿಕ್ಕಬಳ್ಳಾಪುರ ತಾಲ್ಲೂಕಿನ ಆರೂರು ಗ್ರಾಮದ ಮೋಹನ್ ಬಂಧಿತರು.

ಇತ್ತೀಚೆಗೆ ನಗರದಲ್ಲಿ ನಡೆದಿದ್ದ ಕಳವು ಮತ್ತು ಮಹಿಳೆಯರ ಕುತ್ತಿಗೆಯಿಂದ ಸರ ಕಳ್ಳತನ ಪ್ರಕರಣಗಳ ತನಿಖೆಗೆ ನಗರ ಠಾಣೆಯ ಇನ್‌ಸ್ಪೆಕ್ಟರ್ ವೈ.ಆರ್. ರಂಗಶಾಮಯ್ಯ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು.

ADVERTISEMENT

ಜ. 20ರಂದು ತನಿಖಾ ತಂಡವು ಬಾಗೇಪಲ್ಲಿ ವೃತ್ತದ ಬಳಿ ಗಸ್ತು ತಿರುಗುತ್ತಿತ್ತು. ಈ ವೇಳೆ ಇಬ್ಬರು ಆರೋಪಿಗಳು ಕೈಯರ್ ಟಾರ್ಚ್ ಮತ್ತು ಪಿಂಚ್‌ಬಾರ್ ಹಿಡಿದು ಅನುಮಾನಾಸ್ಪದವಾಗಿ ತಿರುಗುತ್ತಿದ್ದರು. ಸಮವಸ್ತ್ರದಲ್ಲಿದ್ದ ಪೊಲೀಸರನ್ನು ಕಂಡು ಓಡಲು ಯತ್ನಿಸಿದ್ದರು. ಈ ವೇಳೆ ಅವರನ್ನು ಬೆನ್ನಟ್ಟಿ ಹಿಡಿದು ವಿಚಾರಣೆಗೆ ಒಳಪಡಿಸಿದಾಗ, ತಾವು ಮನೆಗಳ್ಳತನದಲ್ಲಿ ತೊಡಗಿದ್ದ ಗ್ಯಾಂಗ್ ಎಂದು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಈ ಇಬ್ಬರು ಆರೋಪಿಗಳು ಪಾವಗಡ, ಕೊರಟಗೆರೆ, ತುಮಕೂರು ಸೇರಿದಂತೆ ಇನ್ನಿತರ ಕಡೆಗಳಲ್ಲಿ ಜನ ಸಾಮಾನ್ಯರು ಮತ್ತು ಮಹಿಳೆಯರ ಗಮನ ಬೇರೆಡೆ ಸೆಳೆದು ಎಟಿಎಂ ಕಾರ್ಡ್‌ಗಳನ್ನು ಕದ್ದು ಖಾತೆಗೆ ಕನ್ನ ಹಾಕಿರುವುದು ಕಂಡುಬಂದಿದೆ ಎಂದು ಎಎಸ್‌ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇನ್ನು ಮಹಿಳೆಯರ ಗಮನ ಬೇರೆಡೆ ಸೆಳೆದು ಕುತ್ತಿಗೆಯಲ್ಲಿದ್ದ ಚಿನ್ನಾಭರಣ ಕದಿಯುತ್ತಿದ್ದ ಅನಂತಪುರ ಜಿಲ್ಲೆಯ ಹಿಂದೂಪುರ ನಗರದ ನಿವಾಸಿ ಸಜ್ಜದ್ ಅಲಿಯನ್ನು ಬಟ್ಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಯಿಂದ 1.85 ಲಕ್ಷ ಮೌಲ್ಯದ 31 ಗ್ರಾಂ ಚಿನ್ನದ ಸರವನ್ನು ವಶಕ್ಕೆ ಪಡೆಯಲಾಗಿದೆ. ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಪಿಎಸ್ಐ ಯರ್ರಪ್ಪ, ಸಿಬ್ಬಂದಿ ವಿಶ್ವನಾಥ್, ಜಗದೀಶ್, ಮಂಜುನಾಥ್, ಚೌಡರೆಡ್ಡಿ, ಸುನಿತಾ, ರವೀಂದ್ರ, ಶ್ರನಿವಾಸಮೂರ್ತಿ, ಕೃಷ್ಣಮೂರ್ತಿ ಪತ್ತೆದಾರಿ ತಂಡದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.