ಶಿಡ್ಲಘಟ್ಟ: ಸಂಚಾರ ನಿಯಂತ್ರಣಕ್ಕಾಗಿ ತಾಲ್ಲೂಕಿನ ಎಚ್.ಕ್ರಾಸ್‌ನಲ್ಲಿ ಮುಖ್ಯ ವೃತ್ತದಲ್ಲಿ ಅಳವಡಿಸಿರುವ ಸಿಗ್ನಲ್ ದೀಪಗಳು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ, ಜನಸಾಮಾನ್ಯರು ಅಪಾಯಕ್ಕೆ ಸಿಲುಕುತ್ತಿದ್ದಾರೆ. ವಾಹನ ಸವಾರರು, ಮನಸೋ ಇಚ್ಚೆ ಚಾಲನೆ ಮಾಡುತ್ತಿದ್ದು, ಯಾವ ಸಮಯಕ್ಕೆ ಅಪಘಾತಗಳು ಸಂಭವಿಸುತ್ತವೋ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಾರೆ.
ಕೋಲಾರ, ಚಿಂತಾಮಣಿ, ವಿಜಯಪುರ, ಹೊಸಕೋಟೆ ಕಡೆಗಳಿಂದ ಬರುವ ವಾಹನಗಳು, ಸಂಚರಿಸುವಂತಹ ಮುಖ್ಯ ವೃತ್ತವಾಗಿದ್ದು, ಇಲ್ಲಿ ವಾಹನಗಳ ದಟ್ಟಣೆಯೂ ಹೆಚ್ಚಾಗಿದೆ. ಇದು ಶಿಡ್ಲಘಟ್ಟ ತಾಲ್ಲೂಕಿನ ಪ್ರಮುಖ ವ್ಯಾಪಾರ ಕೇಂದ್ರವಾಗಿ, ಹೊಸಕೋಟೆ ಮತ್ತು ಶಿಡ್ಲಘಟ್ಟ ತಾಲ್ಲೂಕುಗಳ ಜನರನ್ನು ಒಟ್ಟಿಗೆ ಸೇರಿಸುವಂತಹ ಜಾಗವೂ ಆಗಿದೆ.
ಚಿಂತಾಮಣಿಯಿಂದ ಬೆಂಗಳೂರಿನ ಕಡೆಗೆ, ಕೋಲಾರದಿಂದ ಚಿಕ್ಕಬಳ್ಳಾಪುರದ ಕಡೆಗೆ ಸಂಚರಿಸುವ ವಾಹನಗಳು ಇದೇ ರಸ್ತೆಯಲ್ಲೆ ಹೋಗಬೇಕು. ಬಸ್ಸುಗಳು ಸೇರಿದಂತೆ ಸರಕು ಸಾಗಾಣಿಕೆಯ ವಾಹನ, ಶಾಲಾ, ಕಾಲೇಜುಗಳ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರ ಮಾಡುವುದರಿಂದ ವಾಹನಗಳ ದಟ್ಟಣೆ ನಿಯಂತ್ರಣ ಮಾಡಲು ಸಿಗ್ನಲ್ ದೀಪಗಳನ್ನು ಅಳವಡಿಕೆ ಮಾಡಿದ್ದರೂ ದೀಪಗಳು ಕಾರ್ಯ ನಿರ್ವಹಿಸುತ್ತಿಲ್ಲದ ಕಾರಣ ವಾಹನ ಸವಾರರು ತಮಗಿಷ್ಟ ಬಂದಂತೆ ಹೋಗುತ್ತಾರೆ.
ಪಾದಚಾರಿಗಳು, ದ್ವಿಚಕ್ರ ವಾಹನಗಳ ಸವಾರರು ರಸ್ತೆ ದಾಟಬೇಕಾದರೆ ಸಾಹಸ ಮಾಡಬೇಕಾಗಿದೆ. ರಸ್ತೆ ದಾಟುವಾಗ ಹಲವರು ಅಪಘಾತಗಳಿಗೆ ತುತ್ತಾಗಿ ಅಂಗವಿಕಲರಾಗಿದ್ದಾರೆ. ರಾತ್ರಿಯಲ್ಲಂತೂ ಇಲ್ಲಿ ರಸ್ತೆ ದಾಟುವುದು ದುಸ್ಸಾಹಸವಾಗುತ್ತಿದೆ. ಇಲ್ಲಿನ ಸಿಗ್ನಲ್ ದೀಪ ಸರಿಪಡಿಸಿ, ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಬೇಕು ಎಂದು ಸ್ಥಳೀಯರಾದ ಶ್ರೀನಿವಾಸ್, ನರಸಿಂಹಮೂರ್ತಿ, ರಾಘವೇಂದ್ರ ಒತ್ತಾಯಿಸಿದರು.
ಪ್ರತಿ ಶನಿವಾರ ಇಲ್ಲಿ ವಾರದ ಸಂತೆ ನಡೆಯುತ್ತದೆ. ಸುತ್ತಮುತ್ತಲಿನ ಊರುಗಳಿಂದ ಸಾವಿರಾರು ಜನ ಬರುತ್ತಾರೆ. ಇಲ್ಲಿ ಸಂಚಾರ ದಟ್ಟಣೆ ಸಮಸ್ಯೆಯೂ ಜಾಸ್ತಿಯಾಗುತ್ತದೆ. ಇಲ್ಲಿ ಪೊಲೀಸ್ ಚೌಕಿ ನಿರ್ಮಾಣ ಮಾಡಿ, ವಾಹನ ಸುಗಮವಾಗಿ ಸಂಚರಿಸುವುದಕ್ಕೆ ವ್ಯವಸ್ಥೆ ಮಾಡಿದರೆ ಪ್ರಯಾಣಿಕರು ಅಪಾಯಕ್ಕೆ ಸಿಲುಕುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಸ್ಥಳೀಯ ವ್ಯಾಪಾರಿ ಹರೀಶ್ ಹೇಳಿದರು.
ಸೂಕ್ತ ಪೊಲೀಸ್ ವ್ಯವಸ್ಥೆ ಅಗತ್ಯ: ಇಲ್ಲಿನ ಸರ್ಕಲ್‌ನಲ್ಲಿ ಪೊಲೀಸರನ್ನು ನಿಯೋಜನೆ ಮಾಡಬೇಕು. ಇಲ್ಲಿಂದ ಸಂಚರಿಸುವ ಮುಖ್ಯರಸ್ತೆಗಳು, ರಾಜ್ಯ ಹೆದ್ದಾರಿಗಳಾಗಿದ್ದು ಹೊರರಾಜ್ಯಗಳಿಂದ ಬರುವ ಅಪರಿಚಿತರು, ಅನುಮಾನಾಸ್ಪದವಾಗಿ ಸಂಚರಿಸುವವರ ಮೇಲೆ ನಿಗಾವಹಿಸಬೇಕಿದೆ. ಸರಗಳ್ಳತನ ಮಾಡುವವರು ಸೇರಿದಂತೆ ಅಪರಾಧ ಕೃತ್ಯಗಳನ್ನು ಎಸಗುವವರ ಮೇಲೆ ನಿಗಾವಹಿಸುವುದಕ್ಕೂ ಅನುಕೂಲವಾಗಲಿದೆ ಎಂದು ಸ್ಥಳೀಯರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.