ADVERTISEMENT

ಬಾಗೇಪಲ್ಲಿ: ತಿರುಮಲ ತೇಜಸ್ಸಿನ ಗಡಿದಂ ಲಕ್ಷ್ಮಿವೆಂಕಟರಮಣಸ್ವಾಮಿ

ಯಜ್ಞ ಯಾಗಾದಿಗಳು ನಡೆಸುತ್ತಿದ್ದ ಶ್ರೀಮಂತ ಪ್ರದೇಶ; ಏಕಾದಶಿಗೆ ವಿಶೇಷ ಪೂಜೆ

ಪಿ.ಎಸ್.ರಾಜೇಶ್
Published 6 ಜನವರಿ 2020, 4:41 IST
Last Updated 6 ಜನವರಿ 2020, 4:41 IST
ಬಾಗೇಪಲ್ಲಿಯ ಗಡಿದಂ ಶ್ರೀಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯದ ಹೊರನೋಟ
ಬಾಗೇಪಲ್ಲಿಯ ಗಡಿದಂ ಶ್ರೀಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯದ ಹೊರನೋಟ   
""

ಬಾಗೇಪಲ್ಲಿ: ತಾಲ್ಲೂಕಿನ ಕೇಂದ್ರ ಸ್ಥಾನದಿಂದ 3 ಕಿ.ಮೀ. ದೂರದಲ್ಲಿನ ದೇವರಗುಡಿಪಲ್ಲಿ (ಗಡಿದಂ) ಗ್ರಾಮದ ಭೂನೀಳಾ ಸಮೇತ ಲಕ್ಷ್ಮೀವೆಂಕಟರಮಣಸ್ವಾಮಿಯು ತಿರುಮಲದಲ್ಲಿರುವ ತಿಮ್ಮಪ್ಪನ ತೇಜಸ್ಸನ್ನು ಹೊಂದಿದೆ.

ಇದು ಯಜ್ಞ ಯಾಗಾದಿಗಳು ನಡೆಸುತ್ತಿದ್ದ ಶ್ರೀಮಂತ ಪ್ರದೇಶವಾಗಿತ್ತು. ಈ ಕ್ಷೇತ್ರ ಜನುಮೇಜಯರಾಯನ ಕಾಲದಲ್ಲಿ ಪವಿತ್ರ ಕ್ಷೇತ್ರವಾಗಿತ್ತು ಎಂಬ ಪ್ರತೀತಿ ಇದೆ. ವಿಜಯನಗರ ಮಹಾರಾಜ ಕೃಷ್ಣದೇವರಾಯರ ಕಾಲದಲ್ಲಿ ಈ ಸ್ಥಳಕ್ಕೆ ಕೃಷ್ಣರಾಯ ಸಮುದ್ರ ಎಂಬ ಹೆಸರಿತ್ತು ಎಂದು ಇತಿಹಾಸ ತಿಳಿಸುತ್ತದೆ.

ಈ ಸ್ಥಳದಲ್ಲಿ ಶ್ರೀನಿವಾಸ ಹಾಗೂ ತಿರುವೆಂಗಡನಾಥ ದೇವರನ್ನು ಆರಾಧಿಸಲಾಗುತ್ತಿದೆ. ದೇವಾಲಯಕ್ಕೆ ಭದ್ರವಾದ ಕೋಟೆ ಇದೆ. ಶಾಸನಗಳ ಪ್ರಕಾರ ದೇವಾಲಯಕ್ಕೆ 2 ಹೆಸರುಗಳಿವೆ. ಉತ್ತರ ದಿಕ್ಕಿನಲ್ಲಿ ಪ್ರತ್ಯೇಕವಾದ ದ್ವಾರ ನಿರ್ಮಿಸಲಾಗಿದೆ. ಹಿಂದೆ ಸಣ್ಣ ಗುಡಿಯಾಗಿದ್ದ ಸ್ಥಳವು ವಿಜಯನಗರದ ಅರಸರ ಕಾಲದಲ್ಲಿ ಕಲ್ಲಿನ ದೇವಾಲಯದ ಸ್ವರೂಪ ಪಡೆದುಕೊಂಡಿದೆ.

ADVERTISEMENT
ಭೂನೀಳಾ ಸಮೇತ ಲಕ್ಷ್ಮಿವೆಂಕಟರಮಣಸ್ವಾಮಿ ಮೂರ್ತಿ

ಮುಖ್ಯವಾದ ಗೋಡೆಗಳನ್ನು ಭದ್ರವಾದ ತಳಹದಿಯ ಕಲ್ಲುಗಳಿಂದ ನಿರ್ಮಿಸಲಾಗಿದೆ. ಗರ್ಭಗುಡಿ, ಸುಖನಾಸಿಗಳನ್ನು ನೋಡಿದರೆ ಇದು 14ನೇ ಶತಮಾನದಲ್ಲಿ ನಿರ್ಮಾಣವಾದ ದೇವಾಲಯ ಎಂದು ತಿಳಿದು ಬರುತ್ತದೆ. ವಿಜಯನಗರದ ಅರಸರು ಇದೇ ದೇವಾಲಯವನ್ನು ಪ್ರಮುಖ ಸ್ಥಳವನ್ನಾಗಿ ಮಾಡಿಕೊಂಡಿದ್ದರು ಎಂಬುದು ಇತಿಹಾಸ ತಜ್ಞರ ಅಭಿಪ್ರಾಯ.

ಅಷ್ಟಕೋನಾಕಾರದಲ್ಲಿ ದೇಗುವ ಇದ್ದು, ನವರಂಗದ ಭಾಗವು ಲಂಬ ಚತುರಸ್ತ ಕಂಬಗಳಿಂದ ಕೂಡಿದೆ. ಗರ್ಭಗುಡಿಯಲ್ಲಿರುವ ವೆಂಕಟರಮಣಸ್ವಾಮಿಯ ಮೂಲ ವಿಗ್ರಹವನ್ನು ಗರುಡ ಪೀಠದ ಮೇಲೆ ನಿಲ್ಲಿಸಲಾಗಿದೆ. ಅಕ್ಕಪಕ್ಕದಲ್ಲಿ ಶ್ರೀದೇವಿ, ಭೂದೇವಿ ಶೋಭಿಸುತ್ತಿದ್ದಾರೆ. ಪ್ರಭಾವಳಿಯಲ್ಲಿ ವಿಷ್ಣುವಿನ ದಶಾವತಾರಗಳಕೆತ್ತನೆ ಇದೆ.

ದೇವಾಲಯದ ಸುತ್ತಲೂ 4 ಗೋಪುರಗಳಿವೆ. ಪೂರ್ವ ದಿಕ್ಕಿನಲ್ಲಿಮನ ಗೋಪುರ 108 ಅಡಿಗಳ ಉದ್ದ ಇದೆ. ವಿಶಾಲವಾದ ಪ್ರಾಂಗಣ, ಕಲ್ಲುಗಳ ಪಡಸಾಲೆ ಇದ್ದು, ಮದುವೆ, ನಾಮಕರಣ ‌ಕಾರ್ಯಗಳು ನಡೆಯುತ್ತವೆ. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಬೆಂಗಳೂರು, ತಿರುಪತಿ, ಕಡಪ ಸೇರಿದಂತೆ ಅನೇಕ ಕಡೆಗಳಿಂದ ಭಕ್ತರು ದೇವರ ದರ್ಶನಕ್ಕೆ ಬರುವರು.

ವಿಶೇಷ ಎಂದರೆ ವೈಶಾಖ ಶುದ್ಧ ಹುಣ್ಣಿಮೆಯಲ್ಲಿ ರಥೋತ್ಸವ ನಡೆಯುತ್ತದೆ. ವೈಕುಂಠ ಏಕಾದಶಿ, ಶ್ರಾವಣ ಶನಿವಾರಗಳಲ್ಲಿ ದೇವಾಲಯದ ಪ್ರಧಾನ ಅರ್ಚಕ ಕೆ.ಪ್ರಕಾಶ್ ರಾವ್ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಯುತ್ತವೆ.

ಮುಜರಾಯಿ ಇಲಾಖೆಗೆ ಸೇರಿರುವ ದೇಗುಲಕ್ಕೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ಉದ್ದದ ಮರದಸ್ತಂಭ ಮಾಡಿಸಿದ್ದಾರೆ. ಪ್ರತಿವರ್ಷ ಉಚಿತ ಸಾಮೂಹಿಕ ವಿವಾಹಗಳ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ದೇವಾಲಯದ ಮುಂದೆ ಕಲ್ಯಾಣಿ, ಜಿಂಕೆವನ, ಪ್ರಾಣಿ ಸಂಗ್ರಾಹಾಲಯ ಸೇರಿದಂತೆ ಪ್ರವಾಸೋದ್ಯಮ ತಾಣವನ್ನಾಗಿ ಮಾಡಬೇಕು ಎನ್ನುವುದು ಭಕ್ತರ ಆಪೇಕ್ಷೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.