ADVERTISEMENT

ಶಿಕ್ಷಕ–ಮಕ್ಕಳ ಸಮಾಗಮಕ್ಕೆ ‘ವಿದ್ಯಾಗಮ’

ಕೋವಿಡ್ ರಜೆಯಲ್ಲಿ ನಿರಂತರ ಕಲಿಕೆಗೆ ಹೊಸ ಕಲಿಕಾ ಕಾರ್ಯಕ್ರಮ

ಎಂ.ರಾಮಕೃಷ್ಣಪ್ಪ
Published 7 ಆಗಸ್ಟ್ 2020, 3:11 IST
Last Updated 7 ಆಗಸ್ಟ್ 2020, 3:11 IST

ಚಿಂತಾಮಣಿ: ಕೊರೊನಾ ಕಾರಣಕ್ಕೆ ಶಾಲೆಯಿಂದ ವಂಚಿತವಾಗಿರುವ ಮಕ್ಕಳ ಕಲಿಕೆಗೆ ಆನ್‌ಲೈನ್ ಶಿಕ್ಷಣ ಹೊರತುಪಡಿಸಿ, ಸಾರ್ವಜನಿಕ ಶಿಕ್ಷಣ ಇಲಾಖೆ ‘ವಿದ್ಯಾಗಮ’ ವೇದಿಕೆ ರೂಪಿಸಲು ಮುಂದಾಗಿದೆ.

ಶಾಲೆಗಳು ಆರಂಭವಾಗದ ಕಾರಣ ಆನ್‌ಲೈನ್‌ ತರಗತಿಗಳು ನಡೆಯುತ್ತಿವೆ. ಚಂದನ ವಾಹಿನಿಯಲ್ಲಿ ಸೇತುಬಂಧ ಕಾರ್ಯಕ್ರಮದ ಮೂಲಕ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪಾಠ ಬೋಧಿಸಲಾಗುತ್ತಿದೆ. ಆದರೆ, ಇವು ಏಕಮುಖವಾಗಿರುವ ಕಾರಣ ಶಿಕ್ಷಕರು ಮಕ್ಕಳನ್ನು ವಾರಕ್ಕೊಮ್ಮೆಯಾದರೂ ಭೇಟಿ ಮಾಡುವುದಕ್ಕಾಗಿ ವಿದ್ಯಾಗಮ ಕಲಿಕಾ ಕಾರ್ಯಕ್ರಮ ಸಹಕಾರಿಯಾಗಲಿದೆ.

ಕೋವಿಡ್- 19ನಿಂದಾಗಿ ಇದುವರೆಗೆ ಶಾಲೆಗಳು ಆರಂಭವಾಗಿಲ್ಲ. ಆಗಸ್ಟ್ 31ರವರೆಗೂ ಶಾಲೆಗಳಿಗೆ ರಜೆ ವಿಸ್ತರಿಸಲಾಗಿದೆ. ಈ ಅವಧಿಯಲ್ಲಿ ನಿರಂತರ ಕಲಿಕೆಗಾಗಿ ಕೆಲವು ಮಾರ್ಗಸೂಚಿಗಳನ್ನು ಇಲಾಖೆ ನೀಡಿರುವ ಆದೇಶದಲ್ಲಿ ತಿಳಿಸಿದೆ.

ADVERTISEMENT

ಸ್ಮಾರ್ಟ್‌ ಫೋನ್‌, ಟಿವಿ ಸೌಲಭ್ಯ ಇಲ್ಲದ ಮಕ್ಕಳು ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಉದ್ದೇಶದಿಂದಲೂ ಈ ನೂತನ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಕೋವಿಡ್‌ ಅವಧಿಯಲ್ಲಿ ಶಾಲಾ ಮಕ್ಕಳು ಹಾಗೂ ಶಿಕ್ಷಕರ ನಡುವೆ ಭೌತಿಕ ಭೇಟಿ ಕಲ್ಪಿಸಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂಬುದು ಶಿಕ್ಷಕರ ಅಭಿಪ್ರಾಯ.

ಈಗಾಗಲೇ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಣೆ ಮಾಡಲಾಗುತ್ತಿದೆ. ವಾರದ ನಂತರ ಶಿಕ್ಷಕರು ಮತ್ತೆ ಮಕ್ಕಳನ್ನು ಭೇಟಿ ಮಾಡಿ ಕಲಿಕೆಯ ಪ್ರಗತಿ ಪರಿಶೀಲಿಸುತ್ತಾರೆ. ಶಾಲೆಗಳು ಆರಂಭವಾಗುವವರೆಗೂ ಈ ಪ್ರಕ್ರಿಯೆ ಮುಂದುವರಿಯುತ್ತದೆ. ಶಿಕ್ಷಕರು ಶಾಲೆಗಳಿಗೆ ಹಾಜರಾಗಬೇಕು. ವಿದ್ಯಾರ್ಥಿಗಳ ಹಿಂದಿನ ವರ್ಷದ ಸಾಧನೆ ಆಧರಿಸಿ ಮುಂದಿನ ತರಗತಿಗಳಿಗೆ ತೇರ್ಗಡೆ ಮಾಡುತ್ತಾರೆ. ನಂತರ ದಾಖಲಾತಿ ಆರಂಭಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ತಿಳಿಸಿದರು.

ಕಾಲ್ಪನಿಕ ಕೋಣೆ: ಮಕ್ಕಳನ್ನು ಶಾಲೆಯೊಂದಿಗೆ ನಿರಂತರ ಸಂಪರ್ಕದಲ್ಲಿಡುವುದು, ಸ್ವಯಂ ಕಲಿಕೆ ಪ್ರೇರೇಪಿಸುವುದು ವಿದ್ಯಾಗಮ ಯೋಜನೆಯ ಉದ್ದೇಶ. ಪ್ರತಿ ಶಾಲೆಯಲ್ಲಿ 20-25 ಮಕ್ಕಳಿಗೆ ಒಬ್ಬ ಮಾರ್ಗದರ್ಶಿ ಶಿಕ್ಷಕರನ್ನು ನೇಮಿಸಿ ಕಾಲ್ಪನಿಕ ಕಲಿಕಾ ಕೋಣೆ ರೂಪಿಸುವುದು. ಶಾಲೆಯಲ್ಲಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಂಖ್ಯೆಗೆ ಅನುಗುಣವಾಗಿ ಕಲಿಕಾ ಕೋಣೆಯ ಮಕ್ಕಳ ಸಂಖ್ಯೆಯಲ್ಲಿ ಬದಲಾವಣೆ ಮಾಡಿಕೊಳ್ಳಬಹುದು ಎಂದು ಮುಖ್ಯ ಶಿಕ್ಷಕ ಸುಬ್ಬಾರೆಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.