ADVERTISEMENT

ಸ್ವರ್ಗದ ಬಾಗಿಲಲ್ಲಿ ದರ್ಶನ

​ಪ್ರಜಾವಾಣಿ ವಾರ್ತೆ
Published 15 ಜನವರಿ 2021, 4:10 IST
Last Updated 15 ಜನವರಿ 2021, 4:10 IST
ಮುದುಗೆರೆಯಲ್ಲಿನ ಶ್ರೀಲಕ್ಷ್ಮಿ ಚನ್ನಕೇಶವ ಸ್ವಾಮಿ ಮೂರ್ತಿ
ಮುದುಗೆರೆಯಲ್ಲಿನ ಶ್ರೀಲಕ್ಷ್ಮಿ ಚನ್ನಕೇಶವ ಸ್ವಾಮಿ ಮೂರ್ತಿ   

ಗೌರಿಬಿದನೂರು: ತಾಲ್ಲೂಕಿನ ಮುದುಗೆರೆಯ ಪುರಾಣ ಪ್ರಸಿದ್ಧಿ ಲಕ್ಷ್ಮಿ ಚನ್ನಕೇಶವ ಸ್ವಾಮಿ ದೇವಾಲಯದಲ್ಲಿ ಗುರುವಾರ ಮಕರ ಸಂಕ್ರಾಂತಿ ‌ಹಬ್ಬದ ಅಂಗವಾಗಿ ದೇವಾಲಯದ ಬಲಭಾಗದಲ್ಲಿರುವ ಸ್ವರ್ಗದ ಬಾಗಿಲನ್ನು ತೆರೆದು ಅದರ ಮೂಲಕ ಭಕ್ತಾದಿಗಳು ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು.

ಬಣ್ಣ ಬಣ್ಣದ ಹೂವುಗಳಿಂದ ಅಲಂಕರಿಸಲಾಗಿದ್ದ ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ಪೂಜಾ ಕೈಂಕರ್ಯಗಳು ಆರಂಭಗೊಂಡಿದ್ದು, 11.30ರ‌ ನಂತರ ಪ್ರತಿ ವರ್ಷಕ್ಕೆ ಒಮ್ಮೆ ತೆರೆಯುವ ಸ್ವರ್ಗದ ಬಾಗಿಲನ್ನು ತೆರೆದು ದ್ವಾರದಲ್ಲಿ ಉತ್ಸವ ಮೂರ್ತಿಯನ್ನು ಇರಿಸಿ ಇದರಡಿಯಲ್ಲಿ ಭಕ್ತಾದಿಗಳು ತೆರಳಿ ಗರ್ಭ ಗುಡಿಯಲ್ಲಿನ ಚನ್ನಕೇಶವ ಸ್ವಾಮಿಯ‌ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು.

ಬೆಳಿಗ್ಗೆಯಿಂದಲೇ ನೂರಾರು ಭಕ್ತಾದಿಗಳು ಸಾಲಿನಲ್ಲಿ ನಿಂತು ಸ್ವರ್ಗದ ಬಾಗಿಲಿನ ಮೂಲಕ ದೇವರ ದರ್ಶನ ಪಡೆದರು.

ADVERTISEMENT

‘ಪ್ರತಿ ಸಂಕ್ರಮಣ ಮಕರ ಸಂಕ್ರಾಂತಿ ಹಬ್ಬದಂದು ದೇವಾಲಯದಲ್ಲಿ ವಿಶೇಷ ಪೂಜೆಗಳೊಂದಿಗೆ ವರ್ಷದಲ್ಲಿ ಒಮ್ಮೆ ಸ್ವರ್ಗದ ಬಾಗಿಲನ್ನು ತೆರೆಯಲಾಗುತ್ತದೆ. ಇದರ ಮೂಲಕ ದಕ್ಷಿಣಾರ್ಧದಿಂದ ಉತ್ತರಾಯಣಕ್ಕೆ ಸಾಗುವ ಸೂರ್ಯನ ಕಿರಣಗಳು ಗರ್ಭ ಗುಡಿಯಲ್ಲಿನ ಚನ್ನಕೇಶವ ಸ್ವಾಮಿಯ ಪಾದಗಳಿಗೆ ಸ್ಪರ್ಶಿಸುತ್ತವೆ. ಇದನ್ನು ನೋಡಲು ಭಕ್ತಾದಿಗಳು ಸಾಗರೋಪಾದಿಯಲ್ಲಿ ಸೇರುತ್ತಾರೆ. ಪ್ರತಿ ವರ್ಷದಂತೆ ಈ ಬಾರಿಯೂ ದೇವಾಲಯದಲ್ಲಿ ಸ್ವರ್ಗದ ಬಾಗಿಲನ್ನು ತೆರೆದು ದೇವರ ದರ್ಶನಕ್ಕೆ ಭಕ್ತಾದಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಸಂಜೆ ಈ‌ ಬಾಗಿಲನ್ನು ಮುಚ್ಚಿ ಮತ್ತೆ ಮುಂದಿನ ವರ್ಷ ಮಕರ ಸಂಕ್ರಾಂತಿಯಂದು ತೆರೆಯಲಾಗುವುದು’ ಎಂದು ಪ್ರಧಾನ ಅರ್ಚಕರಾದ ವಿದ್ಯಾಸಾಗರ್(ಬಾಬು) ಹೇಳಿದರು.

ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಮುಖಂಡರಾದ ಸಿ.ಆರ್.ನರಸಿಂಹಮೂರ್ತಿ, ಕೆ.ಕೆಂಪರಾಜು, ಎಂ.ಎಸ್. ರಾಜಶೇಖರ್, ನಾಗಪ್ಪ, ಕೆ.ಎಚ್. ಪುಟ್ಟಸ್ವಾಮಿಗೌಡ, ಜೆ.ಕಾಂತರಾಜು ಸೇವಾ ಕಾರ್ಯದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.