ADVERTISEMENT

ಅಗಳಗಂಡಿ: ಕೃಷಿಕನಿಗೆ ಗಂಭೀರ ಗಾಯ

ಕಾಡುಕೋಣಗಳ ಹಾವಳಿ ತಡೆಗಟ್ಟಲು ಗ್ರಾಮಸ್ಥರ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2018, 7:10 IST
Last Updated 6 ಏಪ್ರಿಲ್ 2018, 7:10 IST

ಕೊಪ್ಪ: ತಾಲ್ಲೂಕಿನ ಅಗಳಗಂಡಿ ಪಂಚಾ ಯಿತಿ ವ್ಯಾಪ್ತಿಯಲ್ಲಿ ಕಾಡುಕೋಣಗಳ ಹಾವಳಿ ಹೆಚ್ಚುತ್ತಿದ್ದು, ಸ್ಥಳೀಯ ಕೃಷಿಕ ನಿಲುವಾನೆ ರಮೇಶ್ ಎಂಬವರು ಕಾಡುಕೋಣ ದಾಳಿಯಿಂದ ಗಂಭೀರ ಗಾಯಗೊಂಡಿದ್ದಾರೆ.ಪಂಚಾಯಿತಿ ವ್ಯಾಪ್ತಿಯ ಅಗಳಗಂಡಿ, ಅರೇಹಳ್ಳ, ಹೊಳೆ ಗೋಡು, ಹೆಗ್ಗಾರುಕೊಡಿಗೆ, ಬಾಳೆ ಮನೆ, ಹುಲಿಗರಡಿ ಸುತ್ತಮುತ್ತ 10-15ರಷ್ಟಿರುವ ಭಾರಿ ಗಾತ್ರದ ಕಾಡುಕೋಣಗಳ 7-8 ಹಿಂಡು ಸಂಚರಿಸುತ್ತಿದ್ದು, ಯಡ್ನಕುಡಿಗೆಯ ಸೀತಾರಾಮ ಭಟ್, ಈಚಲಗುಡ್ಡೆ ರಮೇಶ್, ನಿಲುವಾನೆ ಮಲ್ಲೇಶ್, ಅರೇ ಹಳ್ಳ ನಾಗರಾಜ್, ಕೊಂಬಟ್ಟಿ ತ್ಯಾಗರಾಜ್ ಇನ್ನಿತರ ಕೃಷಿಕರ ತೋಟ ಗದ್ದೆಗಳಿಗೆ ದಾಳಿಯಿಟ್ಟು ಅಡಿಕೆ, ಕಾಫಿ, ಕಾಳುಮೆಣಸು, ಹಾಲುವಾಣ, ಬಾಳೆ ಇನ್ನಿತರ ಬೆಳೆಗಳನ್ನು ನಾಶ ಮಾಡಿವೆ. ಹಲವಾರು ಕೃಷಿಕರನ್ನು ತಿವಿದು ತೀವ್ರವಾಗಿ ಗಾಯಗೊಳಿಸಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಸೋಮವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮಾಧ್ಯಮದವರೆದುರು ಸಂತ್ರಸ್ತ ಕೃಷಿಕ ಈಚಲಗುಡ್ಡೆ ರಮೇಶ್ ಮಾತನಾಡಿ, ‘ತೋಟದ ರಕ್ಷಣೆಗೆ ಹಾಕಿರುವ ಐಬೆಕ್ಸ್ ಬೇಲಿಗೆ ಮೈ ತಾಕದಷ್ಟು ಎತ್ತರದಿಂದ ಜಿಗಿದು ತೋಟ ದೊಳಗೆ ನುಗ್ಗುವ ಕಾಡು ಕೋಣಗಳು ಕಾಫಿ ಗಿಡಗಳನ್ನು ಕೊಂಬಿನಿಂದ ಕಿತ್ತು ನಾಶ ಮಾಡುತ್ತವೆ. ಅಡಿಕೆ, ಬಾಳೆ ಗಿಡಗಳನ್ನು ಮುರಿದು ಸುಳಿ ತಿನ್ನುತ್ತವೆ. ಇವುಗಳಿಂದ ನಮಗೆ ರಕ್ಷಣೆ ಇಲ್ಲವಾಗಿದೆ’ ಎಂದರು.

ಅರೇಹಳ್ಳ ನಾಗರಾಜ್ ಮಾತ ನಾಡಿ, ‘ಮಂಗಗಳ ಹಾವಳಿ ತಡೆ ಯಲು ತೋಟದ ಸುತ್ತ ಕಟ್ಟಿದ್ದ ನೆಟ್ [ಬಲೆ] ಹರಿದು ಒಳನುಗ್ಗಿರುವ ಕಾಡುಕೋ ಣಗಳು ಅಪಾರ ಪ್ರಮಾಣದ ಬೆಳೆ ಧ್ವಂಸ ಮಾಡಿವೆ’ ಎಂದರು.

ADVERTISEMENT

ಯಡ್ನಕುಡಿಗೆ ಸೀತಾರಾಮ ಭಟ್ ಮಾತನಾಡಿ, ‘ಗ್ರಾಮೀಣ ಭಾಗದ ಮಕ್ಕಳು ಕಾಡಿನ ಮಧ್ಯೆ 2 ಕಿ.ಮೀ.ನಷ್ಟು ಕಾಲುದಾರಿಯಲ್ಲಿ ನಡೆದು ಶಾಲೆಗೆ ಬರಬೇಕಿದೆ. ಕಾಡುಕೋಣಗಳ ಹಾವಳಿಯಿಂದಾಗಿ ಆತಂಕಗೊಂಡಿರುವ ಶಾಲಾ ಮಕ್ಕಳು, ಮಹಿಳೆಯರು, ವೃದ್ಧರು ಮನೆ ಬಿಟ್ಟು ಹೊರಬರದಂತಾಗಿದೆ’ ಎಂದರು.

ಕಾಡುಕೋಣ ತಿವಿತದಿಂದ ಗಾಯ ಗೊಂಡಿರುವ ನಿವಾನೆ ರಮೇಶ್ ಅವರ ಪತ್ನಿ ಇಂದಿರಾ ಮಾತನಾಡಿ, ‘ತೋಟಕ್ಕೆ ತೆರಳಿದ್ದ ಪತಿ  ಮನೆಗೆ ಹಿಂತಿರುಗುವ ದಾರಿಯಲ್ಲಿ ಕಾಡುಕೋಣಗಳ ಹಿಂಡು ದಾಳಿ ನಡೆಸಿದ್ದರಿಂದ ಅವರ ಬಲಗೈ ಮುರಿದಿದ್ದು, ಬಲಗಾಲು, ಭುಜ, ಬೆನ್ನಿಗೆ ಗಂಭೀರ ಗಾಯಗೊಂಡು ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 3 ತಿಂಗಳು ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಚಿಕಿತ್ಸೆಗೆ ₹ 1 ಲಕ್ಷಕ್ಕಿಂತ ಹೆಚ್ಚು ಖರ್ಚಾಗಿದೆ’ ಎಂದರು.

ಸ್ಥಳೀಯ ಮುಖಂಡ ರಾಜ್ಯ ಭೂ ಬ್ಯಾಂಕ್ ಮಾಜಿ ನಿರ್ದೇಶಕ ಬಾಳೆಮನೆ ನಟರಾಜ್ ಮಾತನಾಡಿ, ‘ಈ ಭಾಗದ ರೈತರ ಜೀವನಾಧಾರಿತ ಅಡಿಕೆ ಬೆಳೆಗೆ ಹಳದಿ ಎಲೆ ರೋಗ ಬಂದು ತೋಟಗಳೆಲ್ಲ ನಾಶ ಹೊಂದಿದ್ದರಿಂದ ಪರ್ಯಾಯವಾಗಿ ಬೆಳೆದಿರುವ ಕಾಫಿ ಮತ್ತಿತರ ಉಪ ಬೆಳೆಗಳೂ ಕಾಡು ಕೋಣಗಳ ಹಾವಳಿಗೆ ತುತ್ತಾಗಿವೆ. ಅರಣ್ಯ ಇಲಾಖೆಗೆ ಹಲವು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ನೀಡುವ ಜೊತೆಗೆ ಕಾಡುಕೋಣಗಳ ಹಾವಳಿಯನ್ನು ಶಾಶ್ವತವಾಗಿ ತಡೆಗಟ್ಟಲು ಸಂಬಂಧಪಟ್ಟ ಇಲಾಖೆಗಳು ಕ್ರಮಕೈಗೊಳ್ಳಬೇಕು’ ಎಂದರು.‌

**

ಅರಣ್ಯ ಇಲಾಖೆ ಮತ್ತು ತಹಶೀಲ್ದಾರರಿಗೆ ಪತ್ರ ಬರೆಯಲು ಹಾಗೂ ಶೀಘ್ರದಲ್ಲೇ ರೈತರ ಸಮ್ಮುಖದಲ್ಲಿ ಸಭೆ ಕರೆದು ಸಮಸ್ಯೆ ಬಗ್ಗೆ ಚರ್ಚಿಸಲು ತೀರ್ಮಾನಿಸಲಾಗಿದೆ  – ಆತ್ಮಾರಾಮ್, ಅಗಳಗಂಡಿ ಗ್ರಾಮ ಪಂಚಾಯಿತಿ ಸದಸ್ಯ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.