ADVERTISEMENT

ಅಭಿವೃದ್ಧಿಗೆ 12.50 ಕೋಟಿ ಅನುದಾನ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 10:25 IST
Last Updated 11 ಅಕ್ಟೋಬರ್ 2011, 10:25 IST

ಚಿಕ್ಕಮಗಳೂರು: ದತ್ತ ಪೀಠ ಅಭಿವೃದ್ಧಿಗೆ ನೀಲನಕ್ಷೆ ಸಿದ್ಧವಾಗಿದ್ದು, ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ 12.50 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಅನು ಮೋದನೆ ಸಿಕ್ಕಿದೆ ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು.

ಕಾಮಗಾರಿಗೆ ಮಂಜೂರಾಗಿರುವ ಅನುದಾನ ದಲ್ಲಿ ಈಗಾಗಲೇ ಮೂರನೇ ಒಂದರಷ್ಟು ಹಣ ಬಿಡುಗಡೆಯಾಗಿದೆ. ನ್ಯಾಯಾಲಯದಲ್ಲಿರುವ 200 ಮೀಟರ್ ವ್ಯಾಪ್ತಿಯ ವಿವಾದಿತ ಪ್ರದೇಶ ಹೊರತುಪಡಿಸಿ, ಉಳಿದೆಡೆ ಅಭಿವೃದ್ಧಿ ನಡೆಯಲಿದೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸುಸಜ್ಜಿತ ಯಾತ್ರಿ ನಿವಾಸ, ವಾಣಿಜ್ಯ ಮಳಿಗೆ ಹಾಗೂ ಮಾಣಿಕ್ಯಧಾರ ಬಳಿ ವೀಕ್ಷಣಾ ಗೋಪುರ, ಆಹಾರ ಸಮುಚ್ಛಯ (ಫುಡ್‌ಕೋರ್ಟ್), ತೆರವು ಗೊಳಿಸಬಹುದಾದ ತಾತ್ಕಾಲಿಕ ಶೆಡ್, ಪಾರ್ಕಿಂಗ್ ಜೋನ್, ವಾಣಿಜ್ಯ ಮಳಿಗೆ, ಡಾರ್ಮೆಟ್ರಿ, ಸಾಮೂ ಹಿಕ ಶೌಚಾಲಯ, ಪ್ರಕೃತಿಗೆ ಪೂರಕವಾಗುವಂತೆ ಗಾಳಿಕೆರೆ ಸುಂದರ ವಿನ್ಯಾಸಗೊಳಿಸುವುದು ನೀಲನಕ್ಷೆಯಲ್ಲಿ ಸೇರಿದೆ ಎಂದರು.

ಲೋಕೋಪಯೋಗಿ ಇಲಾಖೆ ಮೂಲಕ ಟೆಂಡರ್ ಕರೆದು, ಆರ್‌ಸಿ ಆರ್ಕಿಟೆಕ್ಟ್ ತಾಂತ್ರಿಕ ಸಲಹೆಯಂತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ. ಸುಪ್ರೀಂಕೋರ್ಟ್‌ನಲ್ಲಿರುವ ವಿವಾದಿತ ಪ್ರದೇಶ ಈ ನೀಲನಕ್ಷೆಗೆ ಸೇರಿಲ್ಲ. ಈಗಾಗಲೇ ಸುಪ್ರೀಂಕೋರ್ಟ್ ನಿರ್ದೇಶನ, ಕೇಂದ್ರ ಪುರಾತತ್ವ ಇಲಾಖೆ ಮಾರ್ಗ ದರ್ಶನ, ರಾಜ್ಯ ಮುಜರಾಯಿ ಇಲಾಖೆ ಅನುದಾನ ದಲ್ಲಿ ವಿವಾದಿತ ಪ್ರದೇಶದ ಕಾಮಗಾರಿ ಪ್ರತ್ಯೇಕ ವಾಗಿ ನಡೆಯುತ್ತಿದೆ. ನವೆಂಬರ್ 31ರೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರರು ಜಿಲ್ಲಾ ಉಸ್ತುವಾರಿ ಸಚಿವರು ಕರೆದಿದ್ದ ಸಭೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದರು.

ಪಶ್ಚಿಮಘಟ್ಟ ರಸ್ತೆ ಅಭಿವೃದ್ಧಿ ಅನುದಾನದಡಿ ಕ್ಷೇತ್ರಕ್ಕೆ 4 ಕೋಟಿ ರೂಪಾಯಿ ಬಂದಿದ್ದು, ಅದನ್ನು ಕೆಮ್ಮಣ್ಣುಗುಂಡಿ ರಸ್ತೆ ಕ್ರಾಸ್‌ನಿಂದ ದತ್ತಪೀಠದವ ರೆಗಿನ ರಸ್ತೆ ಕಾಂಕ್ರಿಟ್ ಕಾಮಗಾರಿಗೆ ನೀಡಲಾಗಿದೆ. ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಘೋಷಿಸಿರುವ 5 ಕೋಟಿ ರೂಪಾಯಿ ವಿಶೇಷ ಅನುದಾನವನ್ನು ಇದೇ ರಸ್ತೆಗೆ ಬಳಸಿ, ಕಾಮಗಾರಿ ಪೂರ್ಣಗೊಳಿಸುವ ಉದ್ದೇಶವಿದೆ. ನಿರಂತರ ಪ್ರಯತ್ನ ನಡೆಸಿದ ಫಲವಾಗಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ಸಿಕ್ಕಿದೆ ಎಂದರು.

ಕಸ ಸಂಗ್ರಹ ಸ್ವಚ್ಛ ಟ್ರಸ್ಟ್ ಹೆಗಲಿಗೆ: ನಗರದ ಕಸ ಸಂಗ್ರಹಣೆಯ ಪ್ರಾಥಮಿಕ ಹಂತದ ಗುತ್ತಿಗೆಗೆ ಸ್ವಚ್ಛ ಟ್ರಸ್ಟ್ ಅಂದಾಜು ಪಟ್ಟಿ ಸಲ್ಲಿಸಿದ್ದು, ಪ್ರತಿ ತಿಂಗಳು 4,1,125 ರೂಪಾಯಿ ನೀಡವಂತೆ ಪ್ರಸ್ತಾವ ಇಟ್ಟಿದೆ. ಎರಡರಿಂದ ಮೂರು ವರ್ಷದ ಅವಧಿಗೆ ಒಡಂಬಡಿಕೆ ಮಾಡಿಕೊಳ್ಳಲು ಎರಡು ಸತ್ತಿನ ಮಾತುಕತೆ ನಡೆದಿದೆ. ಇನ್ನೊಂದು ಸುತ್ತಿನ ಮಾತುಕತೆ ನಂತರ ಒಪ್ಪಂದಕ್ಕೆ ಬರುವ ನಿರೀಕ್ಷೆ ಇದೆ ಎಂದರು.

ಕಸ ಸಂಗ್ರಹಣೆಗೆ ಪ್ರತಿ ಮನೆಯಿಂದ ತಿಂಗಳಿಗೆ 20 ರೂಪಾಯಿ ಶುಲ್ಕ ವಸೂಲಿ ಮಾಡಬೇಕು. ಕಸ ನೀಡದವರಿಗೆ ದಂಡ ವಿಧಿಸಬೇಕು; ಎಲ್ಲ ಬಗೆಯ ಪ್ಲಾಸ್ಟಿಕ್ ನಿಷೇಧಿಸುವಂತೆ ಟ್ರಸ್ಟ್ ಸಲಹೆ ನೀಡಿದೆ. ನಗರಸಭೆ ದಾಖಲೆಯಲ್ಲಿ 17,425 ಮನೆಗಳು ನಗರದಲ್ಲಿವೆ. ಆದರೆ, ಮೆಸ್ಕಾಂ ನೀಡಿರುವ ವಿದ್ಯುತ್ ಸಂಪರ್ಕಗಳು 32,151.

ಇದರಲ್ಲಿ 6588 ವಾಣಿಜ್ಯ ಉದ್ದೇಶ ಮತ್ತು 696 ಸಣ್ಣ ಕೈಗಾರಿಕಾ ಉದ್ದೇಶ ಹೊಂದಿವೆ. ನಗರಸಭೆ ದಾಖಲೆ ಮತ್ತು ಮೆಸ್ಕಾಂ ದಾಖಲೆಗಳಿಗೆ ಹೋಲಿಸಿದರೆ ಅಜಗಜಾಂತರ ವ್ಯತ್ಯಾಸ ಕಾಣಿಸುತ್ತಿದೆ. ಕಂದಾಯ ನಿವೇಶನ ಬಗ್ಗೆ ರಾಜ್ಯಮಟ್ಟದಲ್ಲಿ ಸರ್ಕಾರ ಸರಿಯಾದ ನಿರ್ಧಾರ ತೆಗೆದುಕೊಳ್ಳದೆ ನಗರಸಭೆಗೆ ಆದಾಯ ಸೋರಿಕೆ ಆಗುತ್ತಿದೆ ಎಂದರು.

ಬಸವ ಯೋಜನೆಯಲ್ಲಿ ಈ ಬಾರಿ ಕ್ಷೇತ್ರಕ್ಕೆ ದಾಖಲೆ ಸಂಖ್ಯೆಯಲ್ಲಿ 4668 ಮನೆ ಮಂಜೂ ರಾಗಿವೆ. ಫಲಾನುಭವಿಗಳ ಪಟ್ಟಿ ಸಿದ್ಧಪಡಿಸುವುದು, ಆಯ್ಕೆ ಮಾಡುವುದನ್ನು ಪಂಚಾಯಿತಿಗಳಿಗೆ ವಹಿಸಲಾಗಿದೆ. ಗ್ರಾಮಗಳಲ್ಲಿ ಗುಡಿಸಲು ನಿವಾಸಿಗಳು ಫಲಾನುಭವಿಗಳ ಪಟ್ಟಿಯಿಂದ ಹೊರಗುಳಿದರೆ ಅದಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಪಂ ಅಧ್ಯಕ್ಷರೇ ಹೊಣೆ ಎಂದು ಹೇಳಿದರು.

ನೆನೆಗುದಿಗೆ ಬಿದ್ದಿದ್ದ ಬೆಳವಾಡಿ ಕೆರೆ ಏತ ನೀರಾವರಿ ಯೋಜನೆ ಆರಂಭವಾಗಲಿದ್ದು, ಭೂ ಸ್ವಾಧೀನ ಪ್ರಕ್ರಿಯೆಗೆ ಹಾಸನ ಜಿಲ್ಲಾಡಳಿತ ಒಂದೆರಡು ದಿನಗಳಲ್ಲಿ ಅಧಿಸೂಚನೆ ಹೊರಡಿಸಲಿದೆ. ಇನ್ನು ಮುಗುಳವಳ್ಳಿ ವಿದ್ಯುತ್ ಘಟಕ ಆರಂಭವಾಗಲಿದೆ. ಬಸವನಹಳ್ಳಿ ಮತ್ತು ಕೋಟೆ ಕೆರೆ ಅಭಿವೃದ್ಧಿಗೂ ವಿಶೇಷ ಅನುದಾನ ಒದಗಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಕಾಮಗಾರಿಗಳನ್ನು ಪಕ್ಷದ ಸ್ಮಾರಕಗಳಾಗಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.