ADVERTISEMENT

ಅರಣ್ಯ ಉತ್ಪನ್ನ ಮೌಲ್ಯವರ್ಧಿಸಿ

​ಪ್ರಜಾವಾಣಿ ವಾರ್ತೆ
Published 13 ಜೂನ್ 2011, 9:10 IST
Last Updated 13 ಜೂನ್ 2011, 9:10 IST

ಕೊಪ್ಪ: ಕಿರು ಅರಣ್ಯ ಉತ್ಪನ್ನಗಳ ಸುಸ್ಥಿರ ನಿರ್ವಹಣೆ ಹಾಗೂ ಮೌಲ್ಯವರ್ಧನೆ ಯೋಜನೆ ಅನುಷ್ಠಾನದಿಂದ ಪಶ್ಚಿಮ ಘಟ್ಟ ವ್ಯಾಪ್ತಿಯ ಗಿರಿವಾಸಿಗಳ ಆರ್ಥಿಕ ಅಭಿವೃದ್ಧಿ ಸಾಧ್ಯವಾಗಿದೆ ಎಂದು ಪೊನ್ನಂಪೇಟೆ ಅರಣ್ಯ ಕಾಲೇಜು ಉಪನ್ಯಾಸಕ ಡಾ.ರಾಮಕೃಷ್ಣ ಹೆಗಡೆ ಹೇಳಿದರು.

ಇಲ್ಲಿನ ಆರಣ್ಯ ಸಮುದಾಯಭವನದಲ್ಲಿ ಲ್ಯಾಂಪ್ ಸಹಕಾರ ಸಂಘ ಭಾನುವಾರ ಏರ್ಪಡಿಸಿದ್ದ ಕಿರುರಣ್ಯ ಉತ್ಪನ್ನಗಳ ಸುಸ್ಥಿರ ನಿರ್ವಹಣೆ ಹಾಗೂ ಮೌಲ್ಯ ವರ್ಧನೆ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. 

ಮೂರು ವರ್ಷದ ಹಿಂದೆ ಕಿರು ಅರಣ್ಯ ಉತ್ಪನ್ನಗಳ ಸುಸ್ಥಿರ ಕೊಯ್ಲು ಪದ್ಧತಿ, ಪರಿಸರ ಸ್ನೇಹಿ ಸಂಸ್ಕರಣೆ, ಹಾಗೂ ಮೌಲ್ಯವರ್ಧನೆ ಉದ್ದೇಶದಿಂದ ಯೋಜನೆ ಆರಂಭಿಸಿ ತರಬೇತಿ ನೀಡಲಾಯಿತಲ್ಲದೆ, ಸಮುದಾಯ ಶಾಖಾ ಪೆಟ್ಟಿಗೆ ಸ್ಥಾಪಿಸಿ ಗುಣಮಟ್ಟದ ಉತ್ಪನ್ನ ಪಡೆ ಯುವ ಕಾರ್ಯಕ್ಕೆ ಚಾಲನೆ ನೀಡಲಾಯಿತು ಎಂದರು.

ಲ್ಯಾಂಪ್ಸ್, ಯು.ಎನ್.ಡಿ.ಪಿ. ಪರಿಸರ ಶಿಕ್ಷಣ ಸಂಸ್ಥೆ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಕಾರ್ಯ ಗತಗೊಳಿಸಿದ ಯೋಜನೆಯಿಂದಾಗಿ ಅರಣ್ಯ ಉತ್ಪನ್ನಗಳ ಬೆಲೆ ದ್ವಿಗುಣಗೊಂಡು ಗಿರಿವಾಸಿಗಳ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದರು.

 ಮೂರು ಕ್ವಿಂಟಲ್ ಉರುವಲು ಬಳಸಿ, ಮುರುಗನ ಹುಳಿ ಒಣಗಿಸುತ್ತಿದ್ದಲ್ಲಿ ಕೇವಲ ಕಾಲು ಕ್ವಿಂಟಲ್ ಸೌದೆಯಲ್ಲಿ ಗುಣಮಟ್ಟದ ಸಂಸ್ಕರಣೆ ಸಾಧ್ಯವಾಗಿದೆ.  ಬಿದರುತಟ್ಟೆ, ಕೇದಿಗೆ ಛಾಪೆ, ಪೊರಕೆ, ದಾಲ್ಚಿನಿ ಸಂಗ್ರಹ ಮೊದಲಾದ ಉತ್ಪನ್ನಗಳು ದ್ವಿಗುಣ ಬೆಲೆಯಲ್ಲಿ ಮಾರಾಟವಾಗುತ್ತಿದೆಯಲ್ಲದೆ.  ಸಾಂಘಿಕವಾಗಿ ಸಿದ್ಧಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಲ್ಯಾಂಪ್ ಅಧ್ಯಕ್ಷ ಡಿ.ಎಫ್.ಒ.ಮಂಜುನಾಥ್ ಚೌಹಾಣ್ ಮಾತನಾಡಿ, ಕಿರು ಅರಣ್ಯ ಉತ್ಪನ್ನಗಳ ಮೌಲ್ಯವರ್ಧನೆಯಿಂದಾಗಿ ಲ್ಯಾಂಪ್ ಸಹಕಾರ ಸಂಘ ಪ್ರಸಕ್ತ ಸಾಲಿನಲ್ಲಿ ನಿವ್ವಳ ರೂ.21 ಲಕ್ಷ ಲಾಭ ಗಳಿಸಿದ್ದು, ರಾಜ್ಯಕ್ಕೆ ಮಾದರಿ ಸಹಕಾರ ಸಂಘವಾಗಿ ಹೊರಹೊಮ್ಮಿದೆ ಎಂದರು.

ಸಾಗರದ ನಾಗೇಂದ್ರ ಪ್ರಸಾದ್ ಪ್ರಾತ್ಯಕ್ಷಿಕೆ ಮೂಲಕ ಹಲಸಿನ ಹಣ್ಣಿನ ವಿವಿಧ ಉಪಯೋಗಗಳ ಬಗ್ಗೆ ಮಾಹಿತಿ ನೀಡಿ, ಹಲಸಿನಿಂದ ಮುನ್ನೂರು ಬಗೆಯ ತಿನಿಸು ತಯಾರಿಸಬಹುದು ಎಂದರು. ಲ್ಯಾಂಪ್ ಉಪಾಧ್ಯಕ್ಷ ಕೆಂಪಣ್ಣ, ಸಹಕಾರ ಮಹಾಮಂಡಳದ ನಿರ್ದೇಶಕ ನಾರಾಯಣ ನಾಯಕ, ವ್ಯವಸ್ಥಾಪಕ ಸೀತಾರಾಮರೈ, ನಿರ್ದೇಶಕ ಮರಿಯಪ್ಪ, ಕೆಂಪೇಗವಡ್ಲು, ಕೆ.ವಿ.ಚಂದ್ರಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.