ADVERTISEMENT

ಅಸ್ಸಾಂ ಕಾರ್ಮಿಕರಿಗೆ ಆಧಾರ್‌ಕಾರ್ಡ್‌: ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2017, 5:57 IST
Last Updated 9 ಅಕ್ಟೋಬರ್ 2017, 5:57 IST

ಮೂಡಿಗೆರೆ: ‘ಅಸ್ಸಾಂ ಕಾರ್ಮಿಕರಿಗೆ ಯಾವುದೇ ದಾಖಲಾತಿಗಳಿಲ್ಲದೇ ಆಧಾರ್‌ಕಾರ್ಡ್‌ ಮಾಡಿಕೊಡುತ್ತಿದ್ದ ಬೇಲೂರು ಪಟ್ಟಣದ ಆಧಾರ್‌ ಕೇಂದ್ರದ ವಿರುದ್ಧ ದೂರು ದಾಖಲಿಸಲಾಗಿದೆ’ ಎಂದು ಬಣಕಲ್‌ ಗ್ರಾಮ ಪಂಚಾಯಿತಿ ಸದಸ್ಯ ಸತೀಶ್‌ ತಿಳಿಸಿದ್ದಾರೆ.

ಭಾನುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ತಾಲ್ಲೂಕಿನಲ್ಲಿರುವ ಅಸ್ಸಾಂ ಕಾರ್ಮಿಕರಿಗೆ ಪ್ರತಿನಿತ್ಯ ಆಧಾರ್‌ ಕಾರ್ಡ್‌ಗಳು ಬರುತ್ತಿದ್ದು, ಇವುಗಳ ಬಗ್ಗೆ ಸಂಶಯ ಬಂದ ಹಿನ್ನೆಲೆಯಲ್ಲಿ, ಬಣಕಲ್‌ ಪಟ್ಟಣದಲ್ಲಿರುವ ಆಧಾರ್‌ಕಾರ್ಡ್‌ ಕೇಂದ್ರದ ಸಿಬ್ಬಂದಿಯನ್ನು ವಿಚಾರಣೆ ಮಾಡಲಾಗಿತ್ತು.

ಸೂಕ್ತ ದಾಖಲೆಗಳಿಲ್ಲದ ಕಾರಣ ಅಸ್ಸಾಂ ಕಾರ್ಮಿಕರಿಗೆ ಬಣಕಲ್‌ ಕೇಂದ್ರದಲ್ಲಿ ಆಧಾರ್‌ಕಾರ್ಡ್‌ ನೋಂದಾಣಿ ಮಾಡುತ್ತಿಲ್ಲ. ಇಲ್ಲಿಯವರೆಲ್ಲಾ ಬೇಲೂರಿಗೆ ತೆರಳಿ ಆಧಾರ್‌ಕಾರ್ಡ್‌ ಪಡೆಯುತ್ತಿದ್ದಾರೆ’ ಎಂಬ ಮಾಹಿತಿ ಲಭ್ಯವಾಯಿತು. ಎಂದರು.

ADVERTISEMENT

ಈ ಹಿನ್ನೆಲೆಯಲ್ಲಿ ಶನಿವಾರ ಮತ್ತಿಕಟ್ಟೆಯ ಖಾಸಗಿ ಕಾಫಿ ಎಸ್ಟೇಟ್‌ ಒಂದರಿಂದ ಹೊರಟ ಕಾರ್ಮಿಕರನ್ನು ಹಿಂಬಾಲಿಸಿದಾಗ, ಬೇಲೂರು ತಾಲ್ಲೂಕು ಕಚೇರಿಯ ಆವರಣದಲ್ಲಿರುವ ಆಧಾರ್‌ ಕೇಂದ್ರದಲ್ಲಿ ದಾಖಲಾತಿಗಳನ್ನು ಪಡೆಯದೇ ಆಧಾರ್‌ಕಾರ್ಡ್‌ಗೆ ನೋಂದಣಿ ಮಾಡುತ್ತಿರುವ ಪ್ರಕರಣ ಬಯಲಾಯಿತು.

ಈ ವೇಳೆ ನಾಗೇನಹಳ್ಳಿ ಸಚ್ಚಿನ್‌, ಅಭಿಲಾಷ್‌, ಗುರುದತ್‌ ಬೇಲೂರು, ಉತ್ತಮ್‌, ಅಶೋಕ್‌, ರಾಜೇಶ್‌ ಮುಂತಾದ ಯುವಕರೊಂದಿಗೆ ಕೇಂದ್ರಕ್ಕೆ ಹೋಗಿ ವಿಚಾರಣೆ ಮಾಡಿದಾಗ, ಕೇಂದ್ರದಲ್ಲಿದ್ದ ಸುಹೀಲ್‌ ಎಂಬಾತನು ₹ 200 ಕ್ಕೆ ಆಧಾರ್‌ ಮಾಡಿಕೊಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಯಿತು.

ಅಸ್ಸಾಂ ಕಾರ್ಮಿಕರಿಗೆ ದಾಖಲೆಗಳಿಲ್ಲದೇ ಆಧಾರ್‌ ಕಾರ್ಡ್‌ ನೀಡಲು ಹಲವು ಕಮೀಷನ್‌ ಏಜೆಂಟರು ಸೃಷ್ಟಿಯಾಗಿದ್ದು, ತಾಲ್ಲೂಕಿನಲ್ಲಿಯೂ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಅನುಮಾನಗಳಿವೆ. ತಾಲ್ಲೂಕಿನಲ್ಲಿರುವ ವಲಸೆ ಕಾರ್ಮಿಕರು ಮೂಲತಃ ಅಸ್ಸಾಮಿಗರೋ ಅಥವಾ ಬೇರೆ ದೇಶಗಳಿಂದ ಅಕ್ರಮ ವಲಸೆ ಬಂದಿದ್ದಾರೆಯೋ ಎಂಬ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.