ADVERTISEMENT

ಅಹಿಂಸಾ ಪ್ರತಿಪಾದಕನ ಸ್ಮರಣೆ

ಜಿಲ್ಲೆಯ ವಿವಿಧೆಡೆ ಮಹಾವೀರ ಜಯಂತಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 9:26 IST
Last Updated 24 ಏಪ್ರಿಲ್ 2013, 9:26 IST

ಚಿಕ್ಕಮಗಳೂರು: ಜಿಲ್ಲೆಯ ವಿವಿಧೆಡೆ ಮಹಾವೀರರ 2607ನೇ ಜನ್ಮ ಜಯಂತಿಯನ್ನು ಮಂಗಳವಾರ ಆಚರಿಸಲಾಯಿತು.

ಕಳಸ: ಮಹಾವೀರ ಜಯಂತಿ ಮೆರವಣಿಗೆ
ಕಳಸ: ಜೈನ ತೀರ್ಥಂಕರ ಮಹಾವೀರರ 2607ನೇ ಜನ್ಮ ಜಯಂತಿಯನ್ನು ಹೋಬಳಿಯಾದ್ಯಂತ ಜೈನ ಸಮುದಾಯವು ಸಂಭ್ರಮ ಸಡಗರದಿಂದ ಆಚರಿಸಿತು.

ಕಳಸದ ಚಂದ್ರನಾಥ ಸ್ವಾಮಿ ಬಸದಿಯಿಂದ ಹೊರಟ ಮಹಾವೀರ ಸ್ವಾಮಿಯ ಮೆರವಣಿಗೆಯಲ್ಲಿ ಕಳಸ,ಮರಸಣಿಗೆ, ಹಿರೇಬೈಲು, ಹೊರನಾಡು ಮತ್ತು ಸಂಸೆಯ ಶ್ರಾವಕರು ಭಾಗವಹಿಸಿದ್ದರು. ಕರಾವಳಿಯ ದೈತ್ಯ ಗೊಂಬೆಗಳು ಮತ್ತು ಹೊರನಾಡಿನ ಜಿನಸೇವಾದಳದ ಝಂಝಂ ಪದಕ ಮೆರವಣಿಗೆಯ ಸೊಬಗು ಹೆಚ್ಚಿಸಿತ್ತು.

ಮಹಾವೀರರ ವಿಗ್ರಹವನ್ನು ಇರಿಸಿದ್ದ ಹೂಗಳಿಂದ ಅಲಕೃತ ವಾಹನ ಮತ್ತು ಮಹಾವೀರರ ಪಾತ್ರಧಾರಿ ಬಾಲಕ ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆಯಾಗಿದ್ದವು. ಮೆರವಣಿಗೆ ಯುದ್ದಕ್ಕೂ ಮಹಾವೀರ ತೀರ್ಥಂಕರರ ಮಹಿಮೆ ಸಾರುವ ಗೀತೆಗಳನ್ನು ಪ್ರಸಾರ ಮಾಡಲಾಯಿತು.

ಮೆರವಣಿಗೆ ನಂತರ ಚಂದ್ರನಾಥ ಸ್ವಾಮಿ ಬಸದಿ ಆವರಣದಲ್ಲಿ ನಿರ್ಮಿಸಿದ್ದ ವಿಶೇಷ ಚಪ್ಪರದಲ್ಲಿ ಮಹಾವೀರ ಸ್ವಾಮಿಗೆ ಅಭಿಷೇಕ ಮತ್ತು ವಿಶೇಷ ಪೂಜೆ ನೆರವೇರಿಸಲಾಯಿತು. ಮಕ್ಕಳಿಂದ ಆಕರ್ಷಕ ಸಾಂಸ್ಕ್ರತಿಕ ಪ್ರದರ್ಶನವೂ ನಡೆಯಿತು.

ಮೂಡಿಗೆರೆ: ಭಾವಚಿತ್ರದ ಮೆರವಣಿಗೆ
ಮೂಡಿಗೆರೆ: ತಾಲ್ಲೂಕಿನಾದ್ಯಂತ ಮಂಗಳವಾರ ಜೈನಬಾಂಧವರು ಶ್ರದ್ಧಾ ಭಕ್ತಿಯಿಂದ ಮಹಾವೀರ ಜಯಂತಿಯನ್ನು ಆಚರಿಸಿದರು.

ಪಟ್ಟಣದಲ್ಲಿ ಬಹುತೇಕ ವರ್ತಕ ವೃತ್ತಿಯಲ್ಲಿರುವ ಜೈನರು, ಮಂಗಳವಾರ   ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ, ಬೆಳ ಗ್ಗೆಯೇ ಪಟ್ಟಣದಲ್ಲಿರುವ ಜೈನ ಮಂದಿರಕ್ಕೆ ತೆರಳಿ, ಮಹಾವೀರನ ಸ್ಮರಣೆ ಮಾಡಿದರು. ಜೈನ ಮಹಿಳೆಯರು, ಮಕ್ಕಳು ಸೇರಿದಂತೆ ಎ್ಲ್ಲಲರೂ ಮಹಾವೀರನ ಭಾವಚಿತ್ರವಿದ್ದ ವಾಹನದೊಂದಿಗೆ ವಾದ್ಯಗೋಷ್ಠಿಗಳೊಂದಿಗೆ ಪಟ್ಟಣದಲ್ಲಿ ಮೆರವಣಿಗೆ ನಡೆಸಿದರು.

ನರಸಿಂಹರಾಜಪುರ: ವಿಶೇಷ ಪೂಜೆ
ನರಸಿಂಹರಾಜಪುರ: ಇಲ್ಲಿನ ಸಿಂಹನಗದ್ದೆ ಬಸ್ತಿಮಠದಲ್ಲಿ ಮಂಗಳವಾರ ಭಗವಾನ್ ಮಹಾವೀರರ ಜಯಂತಿಯನ್ನು ಜೈನರು ಶ್ರದ್ಧಾ, ಭಕ್ತಿಯಿಂದ ಆಚರಿಸಿದರು.

ಮಹಾವೀರರ ಜಯಂತಿ ಅಂಗವಾಗಿ ಬಸ್ತಿಮಠದ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಅಲ್ಲದೆ ಬಸ್ತಿಮಠದ ವ್ಯಾಪ್ತಿಯಲ್ಲಿ ಮಂಗಳವಾರ ಮುಂಜಾನೆ ಮಹಾವೀರರ ಉತ್ಸವ ಮೂರ್ತಿಯನ್ನು ಬೆಳ್ಳಿಯ ಪಲ್ಲಕ್ಕಿಯಲ್ಲಿ ಹೊತ್ತು ಮಂಗಳವಾದ್ಯದೊಂದಿಗೆ ಮೆರವಣಿಗೆ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.