ADVERTISEMENT

ಆದಿಶಕ್ತಿ ನಗರದಲ್ಲಿ ಜೋಡಿ ಹಕ್ಕಿ ಮೋಡಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2011, 9:55 IST
Last Updated 2 ಜೂನ್ 2011, 9:55 IST

ಚಿಕ್ಕಮಗಳೂರು: ನೀಳ ಕತ್ತು, ಉದ್ದ ಪುಕ್ಕ, ಬಣ್ಣಬಣ್ಣದ ತುರಾಯಿ, ಬಳುಕುವ ಹೆಜ್ಜೆ.... ಏನ ಬಣ್ಣಿಸಲಿ ನಿಮ್ಮ ಚೆಲುವು!

ಹೌದು ರಾಷ್ಟ್ರಪಕ್ಷಿ ನವಿಲುಗಳು ನೋಡಲು ಕಣ್ಣ ಹತ್ತಿರವೇ ಸಿಕ್ಕಿದರೆ ಮೈಪುಳಕವಾಗುವುದು ಸಹಜ. ಸೌಂದರ್ಯದ ಖನಿಯೇ ಆಗಿರುವ `ಪಂಚರಂಗಿ ನವಿಲು~ಗಳ ಚೆಲುವಿಗೆ ಮಾರುಹೋಗದವರೂ ಇಲ್ಲ. ಕಾಡಿನಲ್ಲಿ ಸ್ವಚ್ಛಂದವಾಗಿ ವಿಹರಿಸಬೇಕಿದ್ದ ಎರಡು ನವಿಲುಗಳು ನಾಡಿನಲ್ಲಿ ಉಳಿದು ನಗರ ಸಮೀಪದ ಆದಿಶಕ್ತಿ ನಗರದತ್ತ ಪಕ್ಷಿ ಪ್ರೇಮಿಗಳು ಹೆಜ್ಜೆ ಬೆಳೆಸುವಂತೆ ಮಾಡಿವೆ. ರೆಕ್ಕೆಪುಕ್ಕ ಬಲಿತ ಮೇಲೆ ಸ್ವಾತಂತ್ರ್ಯ ಅರಸಿ ಕಾಡಿನತ್ತ ಹೋಗಬಹುದಾಗಿದ್ದಂತವು ಜನಸಂದಣಿ ನಾಡಿಗೆ ಒಗ್ಗಿಕೊಂಡಿವೆ. ನಾಟಿ ಕೋಳಿಗಳಂತೆ ಪ್ರತಿ ದಿನವೂ ಆಹಾರ ಅರಸಿ ಬಯಲಿಗೆ ಹೋದರೂ ಸಂಜೆ ಸೂರ್ಯ ಮುಳುಗುವ ಹೊತ್ತಿಗೆ ಸಾಕುಕೋಳಿಗಳಂತೆ ಮರಳಿ ಮನೆಗೆ ಬರುತ್ತವೆ.

ನಾಡಿಗೆ ಬಂದಿದ್ದಾರೂ ಹೇಗೆ?: ಆದಿಶಕ್ತಿ ನಗರದ ಯಶೋಧಮ್ಮ ಕಳೆದ ಆಗಸ್ಟ್‌ನಲ್ಲಿ ಕೆಲಸಕ್ಕೆ ಹೋಗಿದ್ದಾಗ ಕಾಫಿ ತೋಟದಲ್ಲಿ ಹಳ ಕೊಚ್ಚುವಾಗ ಕಾಣಿಸದೆ ನಾಲ್ಕು ಮೊಟ್ಟೆಗಳಿದ್ದ ಗೂಡು ಛಿದ್ರವಾಗಿತ್ತು. ಅದರಲ್ಲಿ ಆದಾಗಲೆ ಒಂದು ಮೊಟ್ಟೆ ಒಡೆದು, ಭ್ರೂಣಾವಸ್ಥೆಯಲ್ಲಿದ್ದ ಮರಿ ಜೀವ ಪಡೆಯುವ ಮುನ್ನವೇ ಇಹಲೋಕ ಸೇರಿತ್ತು. ಸುಸ್ಥಿತಿಯಲ್ಲಿದ್ದ ಇನ್ನುಳಿದ ಮೂರು ಮೊಟ್ಟೆಗಳನ್ನು ಮನೆಗೆ ತಂದು ಕಾವುಕೊಡಲು ಕುಳಿತ್ತಿದ್ದ ನಾಟಿಕೋಳಿ ಬಳಿ ಇಟ್ಟರು. 12 ದಿನಗಳಲ್ಲಿ ಎರಡು ಮೊಟ್ಟೆಗಳು ಮಾತ್ರ ಮರಿಯಾಗಿ, ನವಿಲು ಮರಿಗಳು ಭುವಿಗಳಿದವು.

ADVERTISEMENT

`ಮಲತಾಯಿ~ ನಾಟಿ ಕೋಳಿಯ ತುತ್ತು ಮತ್ತು ಯಶೋಧಮ್ಮನ ಅಕ್ಕರೆಯಲ್ಲಿ ಬೆಳೆದು ದೊಡ್ಡವಾಗಿರುವ 10 ತಿಂಗಳ ಈ ಜೋಡಿ ನವಿಲುಗಳು ತಮ್ಮ ಹುಟ್ಟಿಗೆ ನೆರವು ನೀಡಿದ, ಆಹಾರ- ನೀರು ಕೊಟ್ಟು ಬೆಳೆಸಿದ ಕೂಲಿ ಕಾರ್ಮಿಕ ಮಹಿಳೆ ಯಶೋಧಮ್ಮನ ಮನೆಯ ಕಾಯಂ ಅತಿಥಿಯಾಗಿವೆ.

ಆದಿಶಕ್ತಿ ನಗರದಲ್ಲಿ ಮುಕ್ತವಾಗಿ ಅಡ್ಡಾಡಿಕೊಂಡಿರುವ ಈ ನವಿಲುಗಳು ಪ್ರತಿಯೊಬ್ಬರನ್ನು ಅರೆಕ್ಷಣ ನಿಂತು ಅವುಗಳ ಚೆಲುವು ಕಣ್ತುಂಬಿಕೊಳ್ಳುವಂತೆ ಮಾಡುತ್ತಿವೆ.

ಯಾರೊಬ್ಬರೂ ಕೂಡ ಅವುಗಳಿಗೆ ಕೊಂಚವೂ ಉಪಟಳ ನೀಡುವುದಿಲ್ಲ. ಕಾಡಿನಲ್ಲಿರುವಂತೆಯೇ ಮುಕ್ತವಾಗಿ ಹಾರಾಡಿಕೊಂಡಿವೆ. ಸಂಜೆಯಾಗುತ್ತಿದ್ದಂತೆ ಆಶ್ರಯ ಹುಡುಕಿಕೊಂಡು ಯಶೋಧಮ್ಮನ ಆಶ್ರಯ ಮನೆ ಬಳಿಗೆ ಬರುತ್ತವೆ.

ರಾಷ್ಟ್ರಪಕ್ಷಿಗಳನ್ನು ಸಾಕುವುದು ತಪ್ಪಲ್ಲವೇ ಎಂದು ಪ್ರಶ್ನಿಸಿದರೆ, ಎಲ್ಲೋ ಮಣ್ಣುಪಾಲು ಆಗುತ್ತಿದ್ದ ಮೊಟ್ಟೆಗಳನ್ನು ಮನೆಗೆ ತಂದು, ನಾಟಿ ಕೋಳಿಯಿಂದ ಜನ್ಮಕೊಡಿಸಿದ್ದೇ ತಪ್ಪಾ? ಎಂದು ಯಶೋಧಮ್ಮ ಮುಗ್ಧತೆ ತೋರ್ಪಡಿಸಿದರು.

`ಕಣ್ಣಿಗೆ ಕಾಣಿಸದೆ ಆದ ಪ್ರಮಾದದಿಂದ ಗೂಡು ಛಿದ್ರವಾಗಿತ್ತು. ತಾಯಿ ನವಿಲು ಮತ್ತೆ ಗೂಡಿನತ್ತ ಬಂದು ಆ ಮೊಟ್ಟೆಗಳಿಗೆ ಕಾವು ಕೊಡುವ ಸಾಧ್ಯತೆ ಇರಲಿಲ್ಲ. ಪಾಪಪ್ರಜ್ಞೆ ಕಳೆದುಕೊಳ್ಳಲು ಆ ಮೊಟ್ಟೆಗಳನ್ನು ತಂದು ಮರಿ ಮಾಡಿಸಿದೆವು. ಅಷ್ಟಕ್ಕೂ ಆ ನವಿಲುಗಳನ್ನು ನಾವು ಬಂಧಿಸಿಟ್ಟಿಲ್ಲ. ದೊಡ್ಡವಾದ ಮೇಲೆ ಹತ್ತಿರದ ಕಾಡಿಗೆ ಬಿಟ್ಟುಬಂದರೂ ಮರಳಿ ಮತ್ತೆ ಬಂದಿವೆ. ಪ್ರತಿ ದಿನವೂ ಆಹಾರ ಅರಸಿಕೊಂಡು ದೂರದ ಬಯಲು ಪ್ರದೇಶಕ್ಕೆ ಹಾರಿ ಹೋಗುತ್ತವೆ. ಸಂಜೆ ಹೊತ್ತಿಗೆ ಬಂದು ಮನೆ ಬಳಿಯ ಸೀಬಿ ಮರದಲ್ಲಿ ಕುಳಿತುಕೊಳ್ಳುತ್ತವೆ. ಅವುಗಳಿಗಾಗಿಯೇ ಗೂಡು ಮಾಡಿದ್ದರೂ ಅಲ್ಲಿ ಕುಳಿತುಕೊಳ್ಳುವುದಿಲ್ಲ~ ಎನ್ನುತ್ತಾರೆ ಅವರು.

ಆದಿಶಕ್ತಿ ನಗರಕ್ಕಂತೂ ಈ ಜೋಡಿ ನವಿಲುಗಳು ಶೋಭೆ ತಂದಿವೆ. ಪುಟಾಣಿ ಮಕ್ಕಳು ಮತ್ತು ಪಕ್ಷಿಪ್ರೇಮಿಗಳನ್ನು ಮೋಡಿ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.