ADVERTISEMENT

ಆಮಿಷರಹಿತ ಚುನಾವಣೆಗೆ ಸಂಕಲ್ಪ

ಭ್ರಷ್ಟಾಚಾರರಹಿತ ಚುನಾವಣೆಗೆ ಬಹಿರಂಗ ಸಭೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 6:17 IST
Last Updated 8 ಏಪ್ರಿಲ್ 2013, 6:17 IST

ಚಿಕ್ಕಮಗಳೂರು: ಮತದಾರರಿಗೆ ಹಣ, ಹೆಂಡದ ಆಮಿಷ ಒಡ್ಡದೇ ಭ್ರಷ್ಟಾಚಾರರಹಿತ ಮತ್ತು ಸ್ನೇಹಪೂರ್ವಕ ಚುನಾವಣೆ ಎದುರಿಸುವುದಾಗಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಎಲ್ಲ ರಾಜಕೀಯ ಪಕ್ಷಗಳ ಮತ್ತು ಪಕ್ಷೇತರ ಸಂಭವ ನೀಯ ಅಭ್ಯರ್ಥಿಗಳು ಭಾನುವಾರ ಸಿರಿಗೆರೆ ತರಳ ಬಾಳು ಮಠದ ಡಾ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಸಮ್ಮುಖದಲ್ಲಿ ಒಮ್ಮತದ ಘೋಷಣೆ ಮಾಡಿದರು.

ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಭ್ರಷ್ಟಾಚಾರ ರಹಿತ ಚುನಾವಣೆ ನಡೆಸುವ ಸಂಬಂಧ ನಡೆದ ಬಹಿರಂಗ ಸಭೆಯಲ್ಲಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು ಸ್ವಾಮೀಜಿ ನೀಡಿರುವ ಸಲಹೆಯನ್ನು ಮುಕ್ತ ಮನಸಿನಿಂದ ಸ್ವಾಗತಿಸಿದರು.

ಸ್ವಾಮೀಜಿಗಳ ಆಶಯದಂತೆ ಆಸೆ, ಆಮಿಷ ರಹಿತವಾದ ಚುನಾವಣೆ ನಡೆಯಬೇಕು. ಇದು ರಾಜ್ಯವಲ್ಲದೆ, ರಾಷ್ಟ್ರಕ್ಕೆ ಮಾದರಿಯಾಗಲಿ. ಈ ಪ್ರಯತ್ನಕ್ಕೆ ಎಲ್ಲರೂ ಕೈಜೋಡಿಸಬೇಕು. ಸ್ವಾಮೀಜಿ ಸಮ್ಮುಖದಲ್ಲಿ ಒಪ್ಪಿಕೊಂಡಿರುವುದಕ್ಕೆ ನಾವೂ ಕೂಡ ಬದ್ಧರಾಗಿದ್ದೇವೆ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ವಾಗ್ದಾನ ಮಾಡಿದರು.

ಚುನಾವಣಾ ಅಕ್ರಮ ನಿಯಂತ್ರಿಸಲು ಸ್ವಯಂ ಪ್ರೇರಿತನಾಗಿ ಮೊದಲು ಸ್ವಾಮೀಜಿಯವರಲ್ಲಿ ಭಿನ್ನಹಿಸಿಕೊಂಡಿದ್ದೇ ನಾನು. ನಂತರದಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ಮತ್ತು ಮುಖಂಡರು ಹೋಗಿ ಸ್ವಾಮೀಜಿಯವರಿಗೆ ಮಾತು ಕೊಟ್ಟು ಬಂದಿದ್ದೇವೆ. ಆದರೆ, ನಂತರದ ದಿನಗಳಲ್ಲಿ ಕೆಲವರು ಅಪಪ್ರಚಾರದಲ್ಲಿ ತೊಡಗಿದರು. `ಕೋತಿ  ತಾನು ತಿಂದು ಮೇಕೆ ಮೂತಿಗೆ ಒರೆಸಿದಂತಾಯಿತು'. ದೂರು ಬಂದಾಗ ಅದನ್ನು ಪರಿಶೀಲಿಸಬೇಕು. ಅಭ್ಯರ್ಥಿಗಳಿಗೆ ಮತದಾರರೇ ಮಾರ್ಗದರ್ಶನ ನೀಡಬೇಕು. ನ್ಯಾಯದ ತಕ್ಕಡಿ ನಿಮ್ಮ ಬಳಿಯೇ ಇದೆ, ಅಳೆದು ತೂಗಿ ಯೋಗ್ಯ ವ್ಯಕ್ತಿಗಳನ್ನು ನೀವೇ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್.ಶಾಂತೇಗೌಡ ಮಾತನಾಡಿ, ಸ್ವಾಮೀಜಿ ಅವರಿಗೆ ನಾವು ಬರೆದುಕೊಟ್ಟಿರುವ ಹೇಳಿಕೆಗೆ ತಕ್ಕಂತೆ ಬದ್ಧರಾಗಿರುತ್ತೇವೆ. ಎಲ್ಲ ಪಕ್ಷಗಳ ಮುಖಂಡರು ತಪ್ಪದೆ ಪಾಲಿಸಬೇಕು. ಸ್ವಾಮೀಜಿ ಅವರ ಪ್ರಯತ್ನ ಯಶಸ್ವಿಯಾಗಿ, ರಾಜ್ಯ, ರಾಷ್ಟ್ರಕ್ಕೆ ಮಾದರಿಯಾಗಬೇಕು ಎಂದರು.

ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಧರ್ಮೇಗೌಡ ಮಾತನಾಡಿ, ಸಿರಿಗೆರೆ ಸ್ವಾಮೀಜಿ ಎದುರು ನಾವು ಚುನಾವಣೆ ಅಕ್ರಮ ನಡೆಸುವುದಿಲ್ಲವೆಂದು ಪ್ರಮಾ
ಣ ಮಾಡಿದ್ದೇವೆ. ಪ್ರಚಾರಕ್ಕೆ ಹೋದೆಡೆಯೆಲ್ಲ ಡ್ರಂಸೆಟ್ ಕೊಡಿಸುವಂತೆ ಕೇಳುತ್ತಾರೆ. ದೇವಸ್ಥಾನಕ್ಕೆ ಹಣ ಕೊಡುವಂತೆ ಕೇಳುತ್ತಾರೆ. ನಾವು ಸ್ವಾಮೀಜಿಗೆ ಮಾತುಕೊಟ್ಟಿರುವುದನ್ನು ನೆನಪಿಸಿ, ಏನನ್ನೂ ಕೊಡುವುದಿಲ್ಲವೆಂದು ಹೇಳುತ್ತಿದ್ದೇವೆ ಎಂದರು.

ಕಣ್ಣುಮುಚ್ಚಿ ಹಾಲು ಕುಡಿದರೆ ಯಾರಿಗೂ ಗೊತ್ತಾಗುವುದಿಲ್ಲವೆಂದುಕೊಂಡರೆ ಅದು ನಮ್ಮ ಮೂರ್ಖತನ. ಕೆಲವರು ಬಣ್ಣದ ಮಾತು ಆಡುತ್ತಾ ಜನರನ್ನು ಮರಳು ಮಾಡಲು ಹೊರಟಿದ್ದಾರೆ. ಅವರಿಗೆ ಜನರೇ ತಕ್ಕ ಉತ್ತರ ಕೊಡಬೇಕು ಎಂದರು.

ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಂ.ಎಲ್.ಮೂರ್ತಿ ಮಾತನಾಡಿ, ಸ್ವಾಮೀಜಿಯವರಿಗೆ ನೀಡಿರುವ ಮಾತಿನಂತೆ ನಾವು ನಡೆದುಕೊಳ್ಳುತ್ತೇವೆ. ನಮ್ಮ ಪಕ್ಷದ ಅಭ್ಯರ್ಥಿ ಅಥವಾ ಕಾರ್ಯಕರ್ತರು ಹಣ, ಹೆಂಡ ಹಂಚಿದ್ದು ಕಂಡುಬಂದರೆ ನಮ್ಮ ಅಭ್ಯರ್ಥಿ ಕೆ.ಎಸ್.ಶಾಂತೇಗೌಡ ಅವರನ್ನು ಕಣದಿಂದ ನಿವೃತ್ತಿಗೊಳಿಸುತ್ತೇವೆ. ಈ ಬಗ್ಗೆ ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡಲು ಸಿದ್ಧರಿದ್ದೇವೆ. ಆದರೆ, ಕೆಲವರು ಸ್ವಾಮೀಜಿ ಬಳಿ ಹೋಗಿ ಸಹಿ ಹಾಕಿ ಬಂದರೂ ಮತ್ತೊಂದೆಡೆ ಹಣ, ಹೆಂಡ ಹಂಚಲು ಆರಂಭಿಸಿದರು ಎಂದು ದೂರಿದರು.

ಜೆಡಿಎಸ್ ಮುಖಂಡ ಎಸ್.ಎಲ್.ಬೋಜೇಗೌಡ ಮಾತನಾಡಿ, ಭ್ರಷ್ಟಾಚಾರ ಮುಕ್ತ ಚುನಾವಣೆ ನಡೆಸಲು ಅಭ್ಯರ್ಥಿಗಳ ಪಾತ್ರ ಬಹುಮುಖ್ಯ. ಯಾರೂ ಕೂಡ ಮಾತಿಗೆ ತಪ್ಪಿ ನಡೆಯಬಾರದು. ನಾಮಪತ್ರ ಸಲ್ಲಿಸಿದ ಕೂಡಲೇ ಎಲ್ಲ ಅಭ್ಯರ್ಥಿಗಳು ಚುನಾವಣೆ ಮುಗಿಯು ವವರೆಗೂ ಕ್ಷೇತ್ರ ಬಿಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೇಮ್ ಕುಮಾರ್ ಮಾತನಾಡಿ, ಚುನಾವಣೆಯಲ್ಲಿ ಹಣ, ಹೆಂಡವನ್ನಷ್ಟೇ ಅಲ್ಲ ಅಪಪ್ರಚಾರ ಮಾಡುವುದನ್ನೂ ತಡೆಯಬೇಕು. ಸಲ್ಲದ ಆರೋಪ ನಿಲ್ಲಿಸುವ ಬಗ್ಗೆಯೂ ಸ್ವಾಮೀಜಿ ಎದುರು ನಿರ್ಣಯಾಗ ಬೇಕು. ಗುರುಗಳ ಎದುರು ಮಾಡಿದ ವಾಗ್ದಾನ ಕೇವಲ ಬಾಯಿಮಾತು ಆಗಬಾರದು ಎಂದರು.

ಬಿಎಸ್‌ಪಿ ಜಿಲ್ಲಾ ಅಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತ ನಾಡಿ, ಸ್ವಾಮೀಜಿ ಪ್ರಯತ್ನ ಸ್ವಾಗತಾರ್ಹ. ಇಂತಹ ಪ್ರಯತ್ನದಿಂದ ಶೋಷಿತರು, ಹಿಂದುಳಿದವರು ಚುನಾವಣೆಯಲ್ಲಿ ಗೆದ್ದುಬರಲು ಸಾಧ್ಯವಾಗುತ್ತದೆ. ನಮ್ಮ ಪಕ್ಷ ಅಂಬೇಡ್ಕರ್ ರಚಿಸಿದ ಸಂವಿಧಾನದ ಪ್ರಕಾರವೇ ಚುನಾವಣೆ ಎದುರಿಸುತ್ತದೆ ಎಂದರು.

ಎಲ್ಲರೂ ಹಣ ಕೊಟ್ಟರೂ ಗೆಲ್ಲುವವರು ಮಾತ್ರ ಒಬ್ಬರೇ. ಈ ಬಾರಿ ಎಲ್ಲ ಅಭ್ಯರ್ಥಿಗಳು ಧರ್ಮದ ಹಾದಿಯಲ್ಲಿ ಚುನಾವಣೆ ಎದುರಿಸಲಿ. ಅದರಿಂದ ಸೋತರೂ ನೋವಾಗುವುದಿಲ್ಲ ಎಂದು ಸಿಪಿಐ ರಾಜ್ಯಮಂಡಳಿ ಸದಸ್ಯ ಪಿ.ವಿ.ಲೋಕೇಶ್ ಹೇಳಿದರು. ಕೆಜೆಪಿ ಮುಖಂಡ ಸಿ.ಎಚ್.ಲೋಕೇಶ್, ಪಕ್ಷೇತರ ಅಭ್ಯರ್ಥಿ ಕಲ್ಲೇಶ್, ಲೋಕಜನ ಸತ್ತಾ ಪಕ್ಷದ ಸಂಭವನೀಯ ಅಭ್ಯರ್ಥಿ ಶಂಕರಲಿಂಗೇ ಗೌಡ, ಸ್ವಾಮೀಜಿ ಅವರ ನಿಲುವಿಗೆ ಸಹಮತ ವ್ಯಕ್ತ ಪಡಿಸಿದರು. ಶಾಸಕಿ ಗಾಯತ್ರಿ ಶಾಂತೇಗೌಡ, ಸಂಭಾವ್ಯ ಪಕ್ಷೇತರ ಅಭ್ಯರ್ಥಿ ಸ್ನೇಕ್ ನರೇಶ್, ಸಿಪಿಐ ಮುಖಂಡ ರೇಣುಕಾರಾಧ್ಯ, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಮಂಜಪ್ಪ, ಸಿ.ಎನ್.ಅಕ್ಮಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.