ADVERTISEMENT

ಆರ್ಥಿಕ ಸಬಲತೆಯ ಕೆಲಸ ನೀಡಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2012, 8:35 IST
Last Updated 9 ಜುಲೈ 2012, 8:35 IST
ಆರ್ಥಿಕ ಸಬಲತೆಯ ಕೆಲಸ ನೀಡಿ
ಆರ್ಥಿಕ ಸಬಲತೆಯ ಕೆಲಸ ನೀಡಿ   

ಚಿಕ್ಕಮಗಳೂರು: ದೀನ ದಲಿತರನ್ನು ಗುರುತಿಸಿ ಅವರಿಗೆ ಸಂಪಾದನೆಯ ಮಾರ್ಗ ಕಲಿಸಿ, ಆರ್ಥಿಕ ಸಬಲತೆ ತಂದುಕೊಡುವ ಕೆಲಸ ಮಹತ್ವಪೂರ್ಣವಾದುದು ಎಂದು ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಅಭಿಪ್ರಾ ಯಪಟ್ಟರು.

ಅಂಜುಮಾನ್-ಇ-ಖುದ್ದೀಮ್ ವೆಲ್ಫೇರ್ ಚಾರಿಟೆಬಲ್ ಟ್ರಸ್ಟ್ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯ ಪ್ರತಿಭಾವಂತ 234 ವಿದ್ಯಾ ರ್ಥಿಗಳಿಗೆ 2.5 ಲಕ್ಷ ರೂಪಾಯಿ ನಗದು ಬಹುಮಾನ ವಿತರಿಸಿ ಮಾತನಾಡಿದರು.

 ಸರ್ಕಾರ ಸೇರಿದಂತೆ ಪ್ರತಿ ಕುಟುಂಬವೂ ಆದಾಯಕ್ಕೆ ತಕ್ಕಂತೆ ಆಯವ್ಯಯ ಸಿದ್ಧಪಡಿಸಿ ಅದರಂತೆ ವೆಚ್ಚ ಮಾಡುತ್ತದೆ. ಆದರೆ ವೈದ್ಯಕೀಯ ವೆಚ್ಚ ಆಯವ್ಯಯ ದಲ್ಲಿ ಇರುವುದಿಲ್ಲ. ದೈಹಿಕ ತೊಂದರೆಗಳು ಅವುಗಳ ಚಿಕಿತ್ಸೆ-ಔಷಧೋಪಚಾರದ ವೆಚ್ಚ ಭರಿಸುವುದು ಸಾಮಾನ್ಯ ಕುಟುಂಬಗಳಿಗಂತೂ ಕಷ್ಟ.

ಈ ಬಗ್ಗೆ ಸಂಸತ್ತಿನಲ್ಲೂ ಚರ್ಚೆಗಳಾಗುತ್ತಿವೆ. ಶಿಕ್ಷಣವೇ ಅಭಿ ವೃದ್ಧಿಗೆ ಬುನಾದಿ. ಮಕ್ಕಳ ಆಸಕ್ತಿ ಗಮನಿಸಿ ಯಾವುದೇ ವಿಷಯವಿರಲಿ, ಕ್ರೀಡೆ, ಕಲೆ ಸೇರಿದಂತೆ ಪ್ರೋತ್ಸಾಹ ನೀಡಿ ಎಂದು ಪೋಷಕರಲ್ಲಿ ಮನವಿ ಮಾಡಿದರು.

ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಡಾ.ಮಹಮ್ಮದ್ ಯೂಸೂಫ್ ಸುಮಾರು 200ಕ್ಕೂ ಹೆಚ್ಚು ಮಕ್ಕಳಿಗೆ ಶಾಲಾ ಬ್ಯಾಗ್, 300ಕ್ಕೂ ಹೆಚ್ಚುಮಕ್ಕಳಿಗೆ ನೋಟ್‌ಪುಸ್ತಕ ವಿತರಿಸಿ ಮಾತನಾಡಿದರು.

ಎಂಎಸ್‌ಒ ಅಧ್ಯಕ್ಷ ಶಾಹೀದ್ ಅಹಮ್ಮದ್ ಮಾತನಾಡಿ, ಕಠಿಣ ಪರಿಶ್ರಮಕ್ಕೆ ಪರ್ಯಾಯವಿಲ್ಲ. ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂಬುದನ್ನು ಆಲೋಚಿಸಬೇಕು. ಜಗತ್ತನ್ನು ಸ್ವರ್ಗವಾಗಿಸಲು ಸಾಧ್ಯವಾಗದಿದ್ದರೂ ಜೀವನದಲ್ಲಿ ಒಂದಾದಾರೂ ಒಳ್ಳೆಯ ಸೇವಾಕಾರ್ಯ ಮಾಡಬೇಕು ಎಂದು ಕರೆ ನೀಡಿದರು. ಜಿ.ಪಂ. ಮಾಜಿ ಅಧ್ಯಕ್ಷ ಕೆ.ಮಹಮ್ಮದ್ ಮಾತನಾಡಿ, ರಾಜಕಾರಣದಲ್ಲಿರುವ ತಮ್ಮಂತವರಿಗೆ ಕುರ್ಚಿ ಬೇಕಾದಾಗ ಅಥವಾ ಕುರ್ಚಿಗೆ ಸಂಚಕಾರ ಬಂದಾಗ ಮಾತ್ರ ಸಮುದಾಯದ ನೆನಪಾಗುತ್ತದೆ. ಆದರೆ, ಉಳಿದ ಸಂದರ್ಭಗಳಲ್ಲೂ ಸಾಧ್ಯವಾದಷ್ಟು ಸೇವೆ ಮಾಡುವುದರಿಂದ ಸಮುದಾಯದ ಅಭಿಮಾನವನ್ನೂ ಸಂಪಾದಿಸಬಹುದು ಎಂದರು.

ಅಂಜುಮಾನ್-ಇ-ಖುದ್ದೀಮ್ ವೆಲ್ಫೇರ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಹಮ್ಮದ್ ಹನೀಫ್ ಮಾತನಾಡಿ, ಸಮಾನ ಮನಸ್ಕ ತಂಡವೊಂದು ಕಳೆದ 12 ವರ್ಷಗಳಿಂದ ನಗರದಲ್ಲಿ ಟ್ರಸ್ಟ್ ಮೂಲಕ ಸೇವಾ ಚಟುವಟಿಕೆ ನಡೆಸುತ್ತಿದೆ. ಇಂಧನ ವೆಚ್ಚವಷ್ಟೆ ಪಡೆದು ರೋಗಿಗಳನ್ನು ದೂರದೂರಿಗೆ ಕರೆದೊಯ್ಯುವ ಅಂಬುಲೆನ್ಸ್ ಸೇವೆ, ಶವ ಒಯ್ಯುವ ಉಚಿತ ವಾಹನ ಸೇವೆ, ಬಡವರಿಗೆ ರಂಜಾನ್ ಪ್ಯಾಕೇಜ್, ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ಮತ್ತಿತರ ಸಾರ್ಥಕ ಸೇವೆಯಲ್ಲಿ ತೊಡಗಿಸಿಕೊಂಡಿದೆ ಎಂದು ತಿಳಿಸಿದರು.

ಜಿಲ್ಲಾ ವಕ್ಫ್‌ಮಂಡಳಿ ಅಧ್ಯಕ್ಷ ಎ.ಆರ್.ಖುರೇಶಿ, ದಾನಿ ಅಲೀಫ್ ಅಲಿ, ಟ್ರಸ್ಟ್ ಕಾರ್ಯದರ್ಶಿ ಶಕೀಲ ಅಹ್ಮದ್, ಖಜಾಂಚಿ ಡಾ.ಆಘಾಗುಲ್‌ರೀಜ್, ಟ್ರಸ್ಟಿಗಳಾದ ಆರ್.ಎ.ಸಲೀಂ, ಅಶ್ರಫ್ ಅಲಿಖಾನ್, ಷೇಕ್‌ಫರುದ್ದೀನ್, ನಯಾಸುಲ್ಲಾ ಷರೀಫ್, ಎನ್.ಎ.ನಾಜ್, ಬಶೀರ್‌ಖಾನ್, ಪ್ರಾಂಶುಪಾಲರಾದ ಮಹಮ್ಮದ್ ಜಾಫರ್, ಆರ್.ಗಫಾರ್ ಬೇಗ್ ಇನ್ನಿತ ರರು ಇದ್ದರು.
 

ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಂ. ಎಲ್.ಮೂರ್ತಿ ಅವರನ್ನು ಟ್ರಸ್ಟ್‌ಅಧ್ಯಕ್ಷ ಮಹೊಮ್ಮದ್ ಹನೀಫ್ ಇದೇ ಸಂದರ್ಭ ಸನ್ಮಾನಿಸಿದರು. ಟ್ರಸ್ಟ್ ವತಿಯಿಂದ ಪ್ರಾರಂಭಿಸಲಿರುವ ಉಚಿತ ಹೆರಿಗೆ ಆಸ್ಪತ್ರೆ ಹಾಗೂ ಅನಾಥಾಲಕ್ಕೆ ಒಂದು ಎಕರೆ ಭೂಮಿ ಕೊಡಿಸುವಂತೆ ಸಂಸದರನ್ನು ಕೋರಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.