ADVERTISEMENT

ಇನಾಂ ಭೂಮಿ ಚರ್ಚೆಗೆ ನಾಳೆ ಸಭೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2013, 5:21 IST
Last Updated 21 ಡಿಸೆಂಬರ್ 2013, 5:21 IST

ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕಿನ ಕಳಸ ಇನಾಂ ಭೂಮಿ ಮತ್ತು ಜಿಲ್ಲೆಯ ಕಂದಾಯ ಮತ್ತು ಅರಣ್ಯ ಒತ್ತುವರಿ ಸಮಸ್ಯೆ ಕುರಿತು  ಚರ್ಚಿಸಲು ಬೆಂಗಳೂರಿನಲ್ಲಿ ಇದೇ 22ರಂದು ಮಹತ್ವದ ಸಭೆ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೀವ್ ಚಾವ್ಲಾ ತಿಳಿಸಿದರು.

ಜಿಲ್ಲಾ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀ ಲನಾ ಸಭೆ ಬಳಿಕ ಜಿಲ್ಲಾಪಂಚಾಯಿತಿ ಸಭಾಂಗಣ ದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕಳಸ ಇನಾಂ ಭೂಮಿ ಸಮಸ್ಯೆಗೆ ಸಂಬಂಧಿಸಿದಂತೆ ನ್ಯಾಯಾಲಯ ತೆರವುಗೊಳಿಸಲು ಆದೇಶ ನೀಡಿದೆ. ಕೆಲವರು ಮೇಲ್ಮನವಿ ಸಲ್ಲಿಸಿರುವು ದರಿಂದ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚನೆ ಬಂದಿದೆ. ಒಂದು ವೇಳೆ ಭೂಮಿ ತೆರವು ಗೊಳಿಸಲೇಬೇಕಾದರೆ 625ಕುಟುಂಬಗಳನ್ನು ಸ್ಥಳಾಂತರಿಸಬೇಕಾಗಿದ್ದು, ₨ 222 ಕೋಟಿ ಬೇಕಾಗುತ್ತದೆ ಎಂದರು.

ಈ ಪ್ರದೇಶದ ಜನರಿಗೆ 800 ಎಕರೆಯನ್ನು ಮಂಜೂರು ಮಾಡಲಾಗಿದೆ. ಸ್ಥಳಾಂತರಿಸುವಾಗ ಪರಿಹಾರ ನೀಡಬೇಕಾದ ಅನಿವಾರ್ಯತೆ ಎದುರಾಗುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಬೇಕಾ ಗುತ್ತದೆ. ಇನಾಂ ಭೂಮಿ ಸಮಸ್ಯೆ ಕುರಿತು ಮೂರು ಭಾಗದಲ್ಲಿ ಸಮೀಕ್ಷೆ ಕಾರ್ಯ ಮುಗಿದಿದೆ. ಇನ್ನೊಂದು ಭಾಗದಲ್ಲಿ ಸಮೀಕ್ಷೆ ಕಾರ್ಯ ನಡೆಸಬೇಕಾಗಿದೆ ಎಂದು ತಿಳಿಸಿದರು.

ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪ್ರದೇಶದಿಂದ ಹೊರಬರಲು 415 ಕುಟುಂಬಗಳ ಆಸಕ್ತಿ ವಹಿಸಿವೆ. ಇದಕ್ಕಾಗಿ 131ಕೋಟಿ ರೂಪಾಯಿ ಪರಿಹಾರ ನೀಡಬೇಕಾಗುತ್ತದೆ. ಸ್ಥಳಾಂತರ ಕಾರ್ಯ ವಿಳಂಬವಾದಲ್ಲಿ ಪರಿಹಾರ ಮೊತ್ತ ಹೆಚ್ಚಾಗುತ್ತದೆ. ಈಗಾಗಲೇ 25 ಕುಟುಂಬಗಳಿಗೆ ₨6.25ಕೋಟಿ  ಪರಿಹಾರ ನೀಡಲಾಗಿದೆ. ಪರಿಹಾರ ಕೋರಿ ಮೂರು ಅರ್ಜಿಗಳು ಬಂದಿವೆ ಎಂದರು.

ಜಿಲ್ಲೆಯಲ್ಲಿ ನಡೆದಿರುವ ಅರಣ್ಯ ಒತ್ತುವರಿ ತೆರವುಗೊಳಿಸುವಂತೆ ಸಮಾಜ ಪರಿವರ್ತನಾ ಸಮಿತಿ ಮುಖಂಡ ಹಿರೇಮಠ್‌ ನ್ಯಾಯಾಲ ಯದಲ್ಲಿ ಸಾರ್ವಜನಿಕ ಹತಾಸಕ್ತಿ ಅರ್ಜಿಯನ್ನು ಸಲ್ಲಿಸಿರುವುದರಿಂದ ಮುಂದಿನ ದಿನಗಳಲ್ಲಿ ಒತ್ತುವರಿಯನ್ನು ತೆರವುಗೊಳಿಸುವ ಪರಿಸ್ಥಿತಿ ಎದುರಾಗುವ ಸಾಧ್ಯತೆಗಳಿವೆ ಎಂದು  ಹೇಳಿದರು.

ಜಿಲ್ಲೆಗೆ ಪ್ರತ್ಯೇಕ ಹಾಲಿನ ಡೇರಿ ಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಇದೆ. ಮಲೆನಾಡು ಮತ್ತು ಬಯಲು ಪ್ರದೇಶದಲ್ಲಿ ಸಂಗ್ರಹವಾಗುವ ಹಾಲನ್ನು ಹಾಸನ ಮತ್ತು ಶಿವಮೊಗ್ಗಕ್ಕೆ ಕಳುಹಿಸಿಕೊಡಲಾಗುತ್ತಿದೆ. ಜಿಲ್ಲೆಯಲ್ಲಿ ಹಾಲು ಸಂಗ್ರಹ ದುಬಾರಿಯಾಗುತ್ತಿದ್ದು, ಪ್ರತ್ಯೇಕ ಹಾಲು ಒಕ್ಕೂಟ ರಚಿಸಿದರೆ ಅನುಕೂಲವಾಗಲಿ.  ಇದೇ 23ರಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ರಚನೆ ಕುರಿತು ಗಮನ ಸೆಳೆಯಲಾಗುವುದು ಎಂದು ಹೇಳಿದರು.

ಚಿಕ್ಕಮಗಳೂರು ಮತ್ತು ಕೊಪ್ಪದಲ್ಲಿ ನಿರ್ಮಾಣವಾಗುತ್ತಿರುವ ಮಿನಿ ವಿಧಾನಸೌಧಕ್ಕೆ  ₨7ಕೋಟಿ ಅಗತ್ಯವಿದೆ. ಈಗಾಗಲೇ ₨3.50 ಕೋಟಿ  ಬಿಡುಗಡೆಯಾಗಿದೆ. ಉಳಿದ ಹಣ ಆದಷ್ಟು ಬೇಗ ಬಿಡುಗಡೆಮಾಡಬೇಕು. ಮೂಡಿ ಗೆರೆ, ತರೀಕೆರೆ ಮತ್ತು ಶೃಂಗೇರಿಯಲ್ಲಿ ನಿರ್ಮಿ ಸಿರುವ ಮಿನಿವಿಧಾನಸೌಧ ಶಿಥಿಲಾವಸ್ಥೆಯಲ್ಲಿದೆ. ಇದರ ದುರಸ್ತಿಗೆ ₨1.50ಕೋಟಿ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾ ಕಾರ್ಯದರ್ಶಿಗಳು ತಿಳಿಸಿದರು.

ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ₨ 20ಕೋಟಿ  ಪ್ರಸ್ತಾವನೆ ಸಲ್ಲಿಸಲಾಗಿದೆ. ಮಳೆಯಿಂದ ಮೂಡಿಗೆರೆ, ಚಿಕ್ಕಮ ಗಳೂರು, ಶೃಂಗೇರಿ ಭಾಗದ ರಸ್ತೆಗಳು ಹಾಳಾ ಗಿವೆ. ದುರಸ್ತಿಗೆ ಜಿಲ್ಲಾಧಿಕಾರಿ ₨ 35ಕೋಟಿ  ಪ್ರಸ್ತಾವನೆ ಸಲ್ಲಿಸಿದ್ದಾರೆ. ಜಿಲ್ಲೆಯ ಅನೇಕ ಸಮಸ್ಯೆಗಳ ಪ್ರಸ್ತಾವನೆ ಮುಖ್ಯಮಂತ್ರಿಗಳ ಬಳಿ ಇವೆ ಇದೇ 23ರಂದು ನಡೆಯುವ ಸಭೆಯಲ್ಲಿ ವಿವರವಾಗಿ ಚರ್ಚಿಸಿ ನಿವಾರಣೆಗೆ ಯತ್ನಿಸಲಾ ಗುವುದು ಎಂದು ಹೇಳಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿ, ಸಕಾಲ ಯೋಜನೆಗೆ ಸಂಬಂಧಿಸಿದ ಮಾಹಿತಿಯನ್ನು ಹೊಂದಿಲ್ಲ. ಈ ಯೋಜನೆಯಲ್ಲಿ ವಿಳಂಬ ನೀತಿ ಅನುಸರಿಸಿದರೆ ಪ್ರತಿ ದಿನ ₨20 ರೂಪಾಯಿ ದಂಡ ಸಂಗ್ರಹಿಸ ಬೇಕೆಂಬ ನಿಯಮವಿದ್ದರೂ ಅದನ್ನು ಅನುಷ್ಟಾನ ಗೊಳಿಸಿಲ್ಲ ಎಂದರು.

ಜಿಲ್ಲಾಧಿಕಾರಿ ಬಿ.ಎಸ್.ಶೇಖರಪ್ಪ ಮಾತನಾಡಿ, ಅಮೃತಮಹಲ್ ಕಾವಲು ಒತ್ತುವರಿಯನ್ನು ತೆರವುಗೊಳಿಸಲು ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರುಣಕರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.