ಚಿಕ್ಕಮಗಳೂರು: ಉಡುಪಿ-ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆಗೆ ನಕ್ಸಲ್ ಪೀಡಿತ ಪ್ರದೇಶಗಳ ವ್ಯಾಪ್ತಿಯ ಮತಗಟ್ಟೆಯಲ್ಲಿ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು, ಅಲ್ಲಲ್ಲಿ ನಾಕಾಬಂದಿ ಮಾಡಿದೆ. ಎಎನ್‌ಎಫ್ ಸಿಬ್ಬಂದಿ ಮತ್ತು ಪೊಲೀಸರು ಹೊರಗಿನಿಂದ ಬರುವ ವಾಹನಗಳ ಮೇಲೆ ತೀವ್ರಾ ನಿಗಾ ಇಟ್ಟು, ತಪಾಸಣೆ ಮಾಡುತ್ತಿದ್ದಾರೆ.
ಕ್ಷೇತ್ರದಲ್ಲಿ 77 ಮತಗಟ್ಟೆಗಳನ್ನು ನಕ್ಸಲ್‌ಪೀಡಿತ ಮತಗಟ್ಟೆಗಳಾಗಿ ಗುರುತಿಸಿದ್ದು, ಇದರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ 37 ಮತ್ತು ಮೂಡಿಗೆರೆಯ 9, ಕಾರ್ಕಳ 23, ಕುಂದಾಪುರ 8 ಮತಗಟ್ಟೆಗಳು ಒಳಗೊಂಡಿವೆ.
ನಕ್ಸಲ್ ಪೀಡಿತ ಮತಗಟ್ಟೆಗಳಿಗೆ ಶಸ್ತ್ರಸಜ್ಜಿತ ಅರೆಸೇನಾ ಪಡೆ ಸಿಬ್ಬಂದಿ ನಿಯೋಜಿಸಿದೆ. ಶೃಂಗೇರಿ ಮತ್ತು ಮೂಡಿಗೆರೆ ಭಾಗದ ನಕ್ಸಲ್‌ಪೀಡಿತ ಮತಗಟ್ಟೆ ವ್ಯಾಪ್ತಿಯಲ್ಲಿ ಬಿಎಸ್‌ಎಫ್ ಒಂದು ತುಕಡಿ, ಅರೆ ಸೈನಿಕ ಪಡೆಯ 5 ತುಕಡಿಗಳನ್ನು ನಿಯೋಜಿಸಲಾಗಿದೆ.
ನಕ್ಸಲ್ ಪೀಡಿತ ಪ್ರದೇಶದ ಒಂದೊಂದು ಮತಗಟ್ಟೆಗಳಿಗೆ ಶಸಸ್ತ್ರ ಪಡೆ ಜತೆಗೆ ಒಬ್ಬರು ಎಎಸ್‌ಐ, ಇಬ್ಬರು ಹೆಡ್ ಕಾನ್‌ಸ್ಟೆಬಲ್, ಇಬ್ಬರು ಪೊಲೀಸ್ ಕಾನ್‌ಸ್ಟೆಬಲ್‌ಗಳನ್ನು ನಿಯೋಜಿಸಲಾಗಿದೆ. ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ತಲಾ ಒಬ್ಬೊಬ್ಬರು ಹೆಡ್ ಕಾನ್ಸ್‌ಟೆಬಲ್ ಮತ್ತು ಪೊಲೀಸ್ ಕಾನ್ಸ್‌ಟೆಬಲ್ ಹಾಗೂ ಒಬ್ಬ ಗೃಹರಕ್ಷಕ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಮಾವಿನಹೊಲದ ಬಳಿ ನಡೆದಿದ್ದ ನಕ್ಸಲ್ ಎನ್‌ಕೌಂಟರ್‌ನಿಂದಾಗಿ ಕಳೆದ ಚುನಾವಣೆ ಸಂದರ್ಭ ಹೆಚ್ಚು ಪೊಲೀಸ್ ಬಲವನ್ನು ಚುನಾವಣಾ ಕಾರ್ಯಕ್ಕೆ ಬಳಸಲಾಗಿತ್ತು. ನಕ್ಸಲ್ ನಿಗ್ರಹ ದಳ ನಕ್ಸಲರ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸಿರುವುದರಿಂದ, ಮಲೆನಾಡಿನಲ್ಲಿ ನಕ್ಸಲ್ ಚಟುವಟಿಕೆ ನಿಂತ್ರಣಕ್ಕೆ ಬಂದಿದೆ. ನಕ್ಸಲ್ ಬೆದರಿಕೆ ಮತ್ತು ದಾಳಿ ಸಂಭವವಿಲ್ಲದಿರುವುದನ್ನು ಖಚಿತಪಡಿಸಿಕೊಂಡೇ ಅಗತ್ಯವಿರು ವಷ್ಟು ಅರೆ ಸೈನಿಕ ಮತ್ತು ಪೊಲೀಸ್ ಬಲವನ್ನು ಬಂದೋಬಸ್ತ್‌ಗೆ ಬಳಸಿಕೊಳ್ಳುತ್ತಿದ್ದೇವೆ ಎಂದು ಎಸ್ಪಿ ಶಶಿಕುಮಾರ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.
ಸಿಂಪ್ಲಿ-ಕೆ: ಪೊಲೀಸ್ ಇಲಾಖೆ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ನಿಮಿತ್ತ ನಿಸ್ತಂತು ಚಾನೆಲ್ ಅಳವಡಿಸಿದೆ. ನಕ್ಸಲ್‌ಪೀಡಿತ ಪ್ರತಿಯೊಂದು ಮತಗಟ್ಟೆಗಳಿಗೆ ಸ್ಥಿರ ನಿಸ್ತಂತು ಉಪಕರಣ ಅಳವಡಿಸಲಾಗಿದೆ.
ಜತೆಗೆ ಈ ಬಾರಿ ದೇಶದಲ್ಲೇ ಪ್ರಥಮ ಬಾರಿ `ಸಿಂಪ್ಲಿ-ಕೆ~ ಸಾಫ್ಟ್‌ವೇರ್ ಆಧಾರಿತ ಗ್ರೂಪ್ ಮೆಸೆಜ್ (ಗುಂಪು ಸಂದೇಶ)ಗಳನ್ನು ಬಂದೋಬಸ್ತ್‌ಗೆ ನಿಯೋಜಿತವಾಗಿರುವ ಸಿಬ್ಬಂದಿಗೆ ರವಾನಿಸುವ ವ್ಯವಸ್ಥೆ ಜಾರಿಗೊಳಿಸಿದ್ದೇವೆ. ಇದರಿಂದ ಎಲ್ಲಿ ಏನೇ ಘಟನೆ ನಡೆದರೂ ಮುನ್ನೆಚ್ಚರಿಕೆ ವಹಿಸಲು ತಕ್ಷಣ ಜಾಗ್ರತವಾಗಲು ಸಾಧ್ಯವಾಗಲಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ ತಿಳಿಸಿದ್ದಾರೆ.
ಹೆಚ್ಚುವರಿ ಪೊಲೀಸರ ನಿಯೋಜನೆ
ಮೂಡಿಗೆರೆ: ಉಪ ಚುನಾವಣೆಯಲ್ಲಿ ಶಾಂತಿಯುತ ಮತದಾನಕ್ಕಾಗಿ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸುವ ಸಲುವಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.
ಪಟ್ಟಣದ ಹೊಯ್ಸಳ ಕ್ರೀಡಾಂಗಣದಲ್ಲಿ ಶುಕ್ರವಾರ ಚುನಾವಣಾ ಪೂರ್ವಬಾವಿ ಸಿದ್ಧತೆ ಹಾಗೂ ಸ್ಥಳ ನಿಯೋಜನೆ ಮಾಡಲಾಯಿತು. ಡಿವೈಎಸ್.ಪಿ ಡಾ.ವೇದಮೂರ್ತಿ, ಸರ್ಕಲ್ ಇನ್ಸ್ ಪೆಕ್ಟರ್ ರಮೇಶ್ ಸೇರಿದಂತೆ ಅನೇಕ ಹಿರಿಯ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು. ಮೂಡಿಗೆರೆ, ಬಣಕಲ್, ಬಾಳೂರು, ಗೋಣಿಬೀಡು, ಮತ್ತು ಗೃಹರಕ್ಷಕ ದಳದ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.