ಚಿಕ್ಕಮಗಳೂರು: ಜೀವನೋಪಾಯಕ್ಕಾಗಿ ಬಡವರು, ದಲಿತರು, ಆದಿವಾಸಿಗಳು, ಸಾಮಾನ್ಯ ರೈತರು ಮಾಡಿರುವ ಅರಣ್ಯ ಒತ್ತುವರಿಯನ್ನು ತೆರವುಗೊಳಿಸಬಾರದೆಂದು ಒತ್ತಾಯಿಸಿ ನಗರದಲ್ಲಿ ಗುರುವಾರ ಟಿಯುಸಿಐ ಮತ್ತು ಕರ್ನಾಟಕ ರೈ ಸಂಘದ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಬಡವರು ಮಾಡಿರುವ ಒತ್ತುವರಿ ಭೂಮಿ ತೆರವುಗೊಳಿಸದಂತೆ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದ ಪ್ರತಿಭಟನಾ ನಿರತರು, ಹಳೆಯ ತಾಲ್ಲೂಕು ಕಚೇರಿ ಆವರಣದಿಂದ ಮೆರವಣಿಗೆ ಹೊರಟು, ಮುಖ್ಯ ರಸ್ತೆಯಲ್ಲಿ ಸಂಚರಿಸಿ, ಜಿಲ್ಲಾಧಿಕಾರಿ ಕಚೇರಿ ಆವರಣ ತಲುಪಿ ಜಿಲ್ಲಾಧಿಕಾರಿ ವಿ.ಯಶವಂತ್ ಅವರಿಗೆ ಮನವಿ ಸಲ್ಲಿಸಿದರು.
ಮಲೆನಾಡು ಭೂಮಿಗೆ ಭೂಮಿತಿ ಕಾಯ್ದೆ ಜಾರಿಗೆ ತರಬೇಕು. ಭಾರೀ ಭೂಮಾಲೀಕರು ಮಾಡಿಕೊಂಡಿರುವ ಒತ್ತುವರಿಯನ್ನು ತೆರವುಗೊಳಿಸಿ, ಸಾಮಾನ್ಯ ಜನರು, ದಲಿತರು, ಆದಿವಾಸಿಗಳು ಮಾಡಿರುವ ಒತ್ತುವರಿಯನ್ನು ಸಕ್ರಮಗೊಳಿಸಿ ಅವರಿಗೆ ಹಕ್ಕು ಪತ್ರ ಕೊಡಬೇಕು. 5 ಎಕರೆ ಒಳಗಿನ ಒತ್ತುವರಿಯನ್ನು ತೆರವುಗೊಳಿಸದಂತೆ ತಡೆಯಾಜ್ಞೆ ನೀಡಿ ಅವರಿಗೆ ಹಕ್ಕು ಪತ್ರ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಭೂಮಾಲೀಕರು ಮಾಡಿದ್ದ ಒತ್ತುವರಿಯನ್ನು ತೆರವುಗೊಳಿಸಿದ ಭೂಮಿಯನ್ನು ಭೂಮಿ ಇಲ್ಲದ ಬಡವರಿಗೆ ಹಂಚಬೇಕು. ಅರಣ್ಯ ಇಲಾಖೆ ಬಡ ಒತ್ತುವರಿದಾರರ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ಕೂಡಲೇ ನಿಲ್ಲಿಸಬೇಕು. ಬಾಲಸುಬ್ರಹ್ಮಣ್ಯನ್ ವರದಿಯನ್ನು ಕಡ್ಡಾಯವಾಗಿ ಜಾರಿಗೆ ತರಬೇಕು. ಈಗಾಗಲೇ ತೆರವುಗೊಳಿಸಿದ ಭೂಮಿಯನ್ನು ನಿವೇಶನ ರಹಿತರಿಗೆ ನೀಡಬೇಕು ಎಂದು ಮನವಿ ಮಾಡಿದರು.
ಟಿಯುಸಿಐ ಜಿಲ್ಲಾ ಕಾರ್ಯದರ್ಶಿ ವಿಜಯ್, ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಉದ್ದಪ್ಪ, ಕಾರ್ಯದರ್ಶಿ ಸುರೇಶ್ ಸೇರಿದಂತೆ ಇತರೆ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕೊಪ್ಪ:ವಿದ್ಯುತ್ ವ್ಯತ್ಯಯ
ಕೊಪ್ಪ: ಇಲ್ಲಿನ ಎಂಯುಎಸ್‌ಎಸ್‌ನಲ್ಲಿ ತುರ್ತು ನಿರ್ವಹಣಾ ಕಾರ್ಯ ಮತ್ತು ಬಾಳೆಹೊನ್ನೂರಿನಿಂದ ಕೊಪ್ಪ ವರೆಗಿನ 33 ಕೆ.ವಿ. ವಿದ್ಯುತ್ ಮಾರ್ಗದಲ್ಲಿ ಜಂಗಲ್ ಕ್ಲಿಯರ್ ಕಾಮಗಾರಿಗೆ ಜೂನ್ 15ರ ಶನಿವಾರ ಬೆಳಿಗ್ಗೆ 9.30ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಸರಬರಾಜು ವ್ಯತ್ಯಯವಾಗಲಿದೆ.
ಕೊರಿಡಿಹಿತ್ಲು, ಕೊಪ್ಪ ಎಂಯುಎಸ್‌ಎಸ್‌ಗಳಿಂದ ವಿದ್ಯುತ್ ಪ್ರವಹಿಸುವ ಕೊಪ್ಪ, ಹರಿಹರಪುರ, ಮೇಲ್ಪಾಲ್ ಪ್ರದೇಶಗಳಿಗೆ ವ್ಯತ್ಯಯ ಆಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.