ADVERTISEMENT

ಒತ್ತುವರಿ ತೆರವು: ಮರಣ ಶಾಸನ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2012, 7:10 IST
Last Updated 13 ಅಕ್ಟೋಬರ್ 2012, 7:10 IST

ಮೂಡಿಗೆರೆ: ರಾಜ್ಯದಲ್ಲಿ ಅನ್ನಕ್ಕಾಗಿ ಮಾತ್ರ ಭೂಮಿಯನ್ನು ಒತ್ತುವರಿ ಮಾಡಲಾಗಿದ್ದು ಒತ್ತುವರಿ ತೆರವುಗೊಳಿಸುವ ಯೋಜನೆ ರೈತರಿಗೆ ಮರಣ ಶಾಸನದಂತೆ ಪರಿಣಮಿಸಿದೆ ಎಂದು ಕಾಂಗ್ರೆಸ್ ಮುಖಂಡ ರಾಮ್‌ದಾಸ್ ಅಭಿಪ್ರಾಯಪಟ್ಟರು.

ಒತ್ತುವರಿ ತೆರವನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷದ ತಾಲ್ಲೂಕು ಘಟಕ ಮೂಡಿಗೆರೆಯಲ್ಲಿ  ಶುಕ್ರವಾರ ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

2007 ರಲ್ಲಿ ಕರ್ನಾಟಕ ಸರ್ಕಾರವು ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಕ್ಕೆ ತಿದ್ದುಪಡಿ ತಂದು ಜಾರಿಗೊಳಿಸಿರುವ ಸೆಕ್ಷನ್ 192(ಎ) ಪ್ರಕಾರ ಸಕ್ರಮ ಭೂಮಿಯನ್ನು ಹಿಡುವಳಿ ಮಾಡಿಕೊಳ್ಳುವ ಉದ್ದೇಶಕ್ಕೆ ಸ್ವಾಧೀನ ಪಡಿಸಿಕೊಂಡರೆ ರಾಜ್ಯ ಸರ್ಕಾರ ಖುಲ್ಲಾ ಮಾಡಿಸುವುದಲ್ಲದೇ ಶಿಕ್ಷೆ ವಿಧಿಸ ಬಹುದಾಗಿದೆ. ಈ ನೀತಿಯಿಂದಾಗಿ ಜಿಲ್ಲೆಯ ಮಲೆನಾಡು ಮತ್ತು ಬಯಲು ಸೀಮೆಗಳಲ್ಲಿ ಬಗರ್‌ಹುಕುಂ ಕೃಷಿ ಮಾಡಿರುವ ಲಕ್ಷಾಂತರ ಕೃಷಿಕರು, ಕೂಲಿ ಕಾರ್ಮಿಕರು ಹಾಗೂ ಗ್ರಾಮೀಣ ಭಾಗದ ಜನರು ಮತ್ತು ಸರ್ಕಾರದ ಭೂಮಿಯಲ್ಲಿ ಮನೆ ಕಟ್ಟಿಕೊಂಡಿರುವ  ನಿವಾಸಿಗಳು ನಿರ್ಗತಿಕರಾಗಬೇಕಾಗುತ್ತದೆ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎಲ್. ಮೂರ್ತಿ ಮಾತನಾಡಿ ಕಳಸ ಮತ್ತು ಬಾಳೂರು ಹೋಬಳಿಗಳಲ್ಲಿ ಸುಮಾರು 15 ಸಾವಿರ ಹೆಕ್ಟೇರ್‌ಗೂ ಅಧಿಕವಾಗಿರುವ ಇನಾಂ ಜಮೀನು ಮತ್ತು ಖಾಸಗಿ ಜಮೀನುಗಳನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದು ಶಾವಿರಾರು ರೈತರು ಭೂರಹಿತರಾಗುತ್ತಾರೆ ಎಂದರು.

ಅರಣ್ಯ ಇಲಾಖೆಗೆ ಹಸ್ತಾಂತರಿಸಿರುವ ಇನಾಂ ಮತ್ತು ಖಾಸಗಿ ಜಮೀನುಗಳನ್ನು ಅರಣ್ಯ ಇಲಾಖೆಯಿಂದ ಹೊರ ತಂದು ರೈತರಿಗೆ, ಅಡಿಕೆ ಮತ್ತು ಕಾಫಿ ಬೆಳೆಗಾರರಿಗೆ ಹಸ್ತಾಂತರಿಸ ಬೇಕು. ಕಾಫಿ ತೋಟ ಮತ್ತು ಇತರೆ ಹಿಡುವಳಿ ಜಮೀನುಗಳಲ್ಲಿ ಈ ಹಿಂದೆ ಇದ್ದ ಂತೆ ಸ್ವಾಭಾವಿಕವಾಗಿ ಬೆಳೆದ ಮರಗಳನ್ನು ಕಡಿಯುವ ಅವಕಾಶವನ್ನು ಕೊಡಬೇಕು. ಇನ್ನಿತರ ಬೇಡಿಕೆಗಳ ಮನವಿ ಪತ್ರವನ್ನು ತಹಶೀಲ್ದಾರರಿಗೆ ನೀಡಿದರು.

ಪಟ್ಟಣದ ಗಣಪತಿ ದೇವಾಲಯದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆಯು ಲಯನ್ಸ್ ವೃತ್ತದಲ್ಲಿ ಸಮಾವೇಶಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.