ADVERTISEMENT

`ಒತ್ತುವರಿ ಸಮಸ್ಯೆಗೆ ಬಿಜೆಪಿ ಕಾರಣ'

​ಪ್ರಜಾವಾಣಿ ವಾರ್ತೆ
Published 6 ಜುಲೈ 2013, 5:46 IST
Last Updated 6 ಜುಲೈ 2013, 5:46 IST

ಕೊಪ್ಪ: ಕರ್ನಾಟಕ ಭೂ ಕಬಳಿಕೆ ನಿಷೇಧ ಮಸೂದೆಯನ್ನು ಸದನದಲ್ಲಿ ಅಂಗೀಕರಿಸಿ ರೈತರ ಪಾಲಿಗೆ ಸಮಸ್ಯೆ ತಂದೊಡ್ಡಿರುವ ಬಿಜೆಪಿಯವರೇ ಈಗ ಆ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ಮೇಲೆ ಆರೋಪ ಹೊರಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯೆಂದು ಜಿ.ಪಂ. ಮಾಜಿ ಅಧ್ಯಕ್ಷ ಟಿ.ಡಿ. ರಾಜೇಗೌಡ ಆರೋಪಿಸಿದರು. 

ಗುರುವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2007ರಲ್ಲಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರ ಮತ್ತು 2011ರಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಒತ್ತುವರಿ ನಿಷೇದ ಮಸೂದೆಯನ್ನು ಸದನದಲ್ಲಿ ಅಂಗೀಕರಿಸಿ, ರಾಜ್ಯಪಾಲರ ಒಪ್ಪಿಗೆ ಪಡೆದು, ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಅದು ರಾಷ್ಟ್ರಪತಿಗಳ ಅಂಕಿತಕ್ಕೆ ಹೋಗಿದೆ.

ಒತ್ತುವರಿ ತೆರವು ವಿಚಾರದಲ್ಲಿ ಈಗ ರಾಜ್ಯಸರ್ಕಾರ ಸುಪ್ರೀಂ ಕೋರ್ಟ್ ಆದೇಶ ಪಾಲಿಸುವುದು ಅನಿವಾರ್ಯವಾಗಿತ್ತು. ಆದರೂ ಜೀವನಾವಶ್ಯಕ ಕೃಷಿಗಾಗಿ 5-10 ಎಕರೆ ಒಳಗಿನ ಒತ್ತುವರಿ ಮಾಡಿರುವ ರೈತರ ಜಮೀನನ್ನು ತೆರವುಗೊಳಿಸದೆ ಸಕ್ರಮ ಮಾಡಿಕೊಡಬೇಕೆಂಬುದು ತಮ್ಮ ನಿಲುವಾಗಿದ್ದು, ಈ ಬಗ್ಗೆ ತಾವು ಸಂಸದ ಜಯಪ್ರಕಾಶ ಹೆಗ್ಡೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್. ಮೂರ್ತಿ ಅವರೊಂದಿಗೆ ಕಂದಾಯ ಮತ್ತು ಅರಣ್ಯ ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ತಿಳಿಸಿದರು.

ಹಿಂದಿನ ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆಯ ಜಮೀನನ್ನು ಅರಣ್ಯ ಇಲಾಖೆಗೆ ವರ್ಗಾವಣೆ ಮಾಡುವಾಗ ಗೋಮಾಳ ಜಾಗವನ್ನೂ ವರ್ಗಾವಣೆ ಮಾಡಿರುವುದರಿಂದ ಸಮಸ್ಯೆ ತಲೆದೋರಿದೆ. ಆದ್ದರಿಂದ ಕಂದಾಯ ಮತ್ತು ಅರಣ್ಯ ಭೂಮಿಗಳ ಮರು ಸರ್ವೆ ನಡೆಸಿ, ಗೋಮಾಳ ಜಾಗವನ್ನು ಅರಣ್ಯ ವ್ಯಾಪ್ತಿಯಿಂದ ಕೈಬಿಡಬೇಕು.

ಶೇ. 95ರಷ್ಟಿರುವ ಸಣ್ಣ ಹಿಡುವಳಿದಾರರು ಫಾರಂ 50 ಮತ್ತು 53ರಲ್ಲಿ ಅರ್ಜಿ ಸಲ್ಲಿಸಿ ತಮ್ಮ ಜೀವನ ನಿರ್ವಹಣೆಗಾಗಿ ಮಾಡಿರುವ ಕೃಷಿ ಭೂಮಿ ಒತ್ತುವರಿಯನ್ನು ಸಕ್ರಮ ಮಾಡಿಕೊಡಬೇಕು. ಒಂದು ವೇಳೆ ಸರ್ಕಾರ ಒತ್ತುವರಿ ತೆರವಿಗೆ ಮುಂದಾದಲ್ಲಿ ಆಹಾರಧಾನ್ಯದ ಕೊರತೆ, ನಿರುದ್ಯೋಗ, ನಿರ್ವಸತಿಯಂತಹ ಸಮಸ್ಯೆ ತಲೆದೋರಲಿದೆ. ನೂರಾರು ಎಕರೆ ಒತ್ತುವರಿದಾರರ ಮತ್ತು ಮೀಸಲು ಅರಣ್ಯ ಒತ್ತುವರಿ ಬಗ್ಗೆ ಕೂಲಂಕಶ ಪರಿಶೀಲನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ಅವರು ತಿಳಿಸಿದರು.

ಬಳಿಕ ಅವರು ಪಕ್ಷದ ಕಾರ್ಯಕರ್ತರೊಂದಿಗೆ ಕೊಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಗೆ ತೆರಳಿ ಸರ್ಕಾರದ ಮುಂದಿನ ಆದೇಶ ಬರುವವರೆಗೆ ಒತ್ತುವರಿ ತೆರವು ಕಾರ್ಯಾಚರಣೆ ಕೈಬಿಡುವಂತೆ ಮನವಿ ಸಲ್ಲಿಸಿದರು.

ಮುಖಂಡರಾದ ಎ.ಎಸ್. ನಾಗೇಶ್, ಎಚ್.ಎಂ. ಸತೀಶ್,  ಓಣಿತೋಟ ರತ್ನಾಕರ್, ಎಚ್.ಎಸ್. ಇನೇಶ್, ಡಿ.ಎಸ್. ಸತೀಶ್, ಹರೀಶ್ ಭಂಡಾರಿ, ಸುಬ್ರಹ್ಮಣ್ಯ, ವಿಜಯಕುಮಾರ್, ಹಂಚಿಕೊಳಲು ದಿನೇಶ್, ಕೆಸವೆ ರಾಮಪ್ಪ, ನುಗ್ಗಿ ಮಂಜುನಾಥ್, ಎಸ್.ಪಿ. ಚಂದ್ರಶೇಖರ್, ಮಹಾಬಲ್, ನಾರ್ವೆ ಇಸ್ಮಾಯಿಲ್, ಇರ್ವಿನ್ ಸೋನ್ಸ್, ಭವಾನಿಶಂಕರ್, ಈವನ್, ಮಹಮ್ಮದ್ ತಯೀಬ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.