ADVERTISEMENT

ಕಲುಷಿತ ನೀರು ಸೇವನೆ- ವಾಂತಿ ಭೇದಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2012, 8:45 IST
Last Updated 26 ಜೂನ್ 2012, 8:45 IST

ಕಡೂರು: ತಾಲ್ಲೂಕಿನ ಯಗಟಿ ಹೋಬಳಿ ಅಣ್ಣಿಗೆರೆ ಗ್ರಾಮದಲ್ಲಿ ಸೋಮವಾರ ಕಲುಷಿತ ನೀರು ಸೇವನೆಯಿಂದ 40 ಕ್ಕೂ ಹೆಚ್ಚು ರೋಗಿಗಳು ಕಡೂರು, ಚಿಕ್ಕಮಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಸೀತಾಪುರ ತಾಂಡ್ಯದಲ್ಲಿ ಕಳೆದ 15 ದಿನಗಳ ಹಿಂದೆ ಕಾಣಿಸಿಕೊಂಡಿದ್ದ ವಾಂತಿ-ಭೇದಿ ಪ್ರಕರಣದಿಂದ ಮೂರು ಜನರು ಮೃತಪಟ್ಟ ಘಟನೆ ಮಾಸುವ ಮುನ್ನ ಅಣ್ಣಿಗೆರೆ ಗ್ರಾಮದಲ್ಲಿ ಪ್ರಕರಣ ಮರುಕಳಿಸಿದೆ. 
ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಲವರು ದಾಖಲಾಗಿ ಚಿಕಿತ್ಸೆ ಪಡೆದರು.

ಇನ್ನುಳಿದವರು  ಚಿಕ್ಕಮಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಅಣ್ಣಿಗೆರೆ ಗ್ರಾಮದಲ್ಲಿ ಡಾ.ಪ್ರಭು ಅವರ ನೇತೃತ್ವದಲ್ಲಿ ಶಾಲೆಯಲ್ಲೇ ತೆರೆದಿರುವ ಕ್ಲಿನಿಕ್‌ನಲ್ಲಿ  ಚಿಕಿತ್ಸೆ ನೀಡಲಾಯಿತು.

ಅಣ್ಣಿಗೆರೆ ಗ್ರಾಮದಲ್ಲಿ ನೀರಿನ ಪೈಪ್‌ಲೈನ್ ಒಳಗೆ ಮಳೆಯ ನೀರು ಶೇಖರಣೆಗೊಂಡು ಕಲುಷಿತವಾ ಗಿರಬಹುದೆಂದು ಶಂಕೆ ವ್ಯಕ್ತಪಡಿಸಿದ್ದು, ಈ ನೀರನ್ನು ಗ್ರಾಮಸ್ಥರು ಕುಡಿದು ವಾಂತಿ- ಭೇದಿ ಕಾಣಿಸಿಕೊಂಡಿರುವುದಾಗಿ ಡಾ.ಪ್ರಭು ಪತ್ರಿಕೆಗೆ ಮಾಹಿತಿ ನೀಡಿದರು. 

 ಗ್ರಾಮಕ್ಕೆ ಶುದ್ಧ ನೀರಿನ ಟ್ಯಾಂಕರ್‌ಗಳನ್ನು ಕಳುಹಿಸಿ ನೀರನ್ನು ನೀಡುತ್ತಿದ್ದು, ರಾತ್ರಿ ವೇಳೆಗೆ ವಾಂತಿ- ಭೇದಿ ಪ್ರಕರಣಗಳ ಸಂಖ್ಯೆ ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು. ಚಿಕಿತ್ಸೆಗೆ ಪೂರಕ ಔಷಧಿ ಸಾಮಗ್ರಿಗಳು ಇದ್ದು, ಸಮಸ್ಯೆ ತಲೆದೋರದಂತೆ ರಾತ್ರಿಯ ವೇಳೆಯಲ್ಲೂ ಶಾಲೆಯಲ್ಲಿ ಕ್ಲಿನಿಕ್ ತೆರೆಯಲಾಗುವುದಾಗಿ ಮಾಹಿತಿ ನೀಡಿದರು. 

 ಶಾಸಕ ಡಾ.ವೈ.ಸಿ.ವಿಶ್ವನಾಥ್ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರು ಶುದ್ಧ ಕುಡಿಯುವ ನೀರನ್ನು ಬಳಸಬೇಕು, ನೀರನ್ನು ಕಾಯಿಸಿ ಆರಿಸಿದ ನಂತರ ಕುಡಿಯಲು ಮನವಿ ಮಾಡಿದರು. ಔಷಧಿ, ವೈದ್ಯರ ಕೊರತೆಯಾಗದ ರೀತಿಯಲ್ಲಿ ಕಾರ್ಯನಿರ್ವಹಿಸಲು ವೈದ್ಯಾಧಿಕಾರಿಗಳು ಎಚ್ಚರ ವಹಿಸಲು ಸಲಹೆ ನೀಡಿದರು.
ಸೀತಾಪುರ ತಾಂಡ್ಯದಲ್ಲಿ ಕಾಣಿಸಿಕೊಂಡಿದ್ದ ವಾಂತಿ ಭೇದಿ ಪ್ರಕರಣದ ಲ್ಯಾಬ್ ಪರೀಕ್ಷೆಯ ವರದಿ ಬಂದಿದ್ದು ಮಂಜುಳಾ ಎಂಬುವರಿಗೆ ಕಾಲರಾ ಇರುವುದಾಗಿ  ವರದಿಯಿಂದ ದೃಢಪಟ್ಟಿದೆ ಎಂದು ಡಾ.ಸುಮಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.