ADVERTISEMENT

ಕಳಂಕಿತ ಸಚಿವರನ್ನು ಕೈಬಿಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 7 ಜನವರಿ 2014, 6:19 IST
Last Updated 7 ಜನವರಿ 2014, 6:19 IST

ಚಿಕ್ಕಮಗಳೂರು: ಕಳಂಕಿತ ಸಚಿವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ನಗರದ ಹನುಮಂತಪ್ಪ ವೃತ್ತದಲ್ಲಿ ಸೋಮವಾರ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.

ಹಳೇ ತಾಲ್ಲೂಕು ಕಚೇರಿ ಆವರಣದಿಂದ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾನಿರತರು, ಕಾಂಗ್ರೆಸ್‌ ವಿರುದ್ಧ ಘೋಷಣೆ ಕೂಗಿದರು. ಸಚಿವರಾದ  ಡಿ.ಕೆ.ಶಿವಕುಮಾರ್ ಮತ್ತು ರೋಷನ್ ಬೇಗ್ ಅವರನ್ನು ಸಚಿವ ಸ್ಥಾನದಿಂದ ಕಿತ್ತೊಗೆಯಬೇಕೆಂದು ಒತ್ತಾಯಿಸಿದರು.

ಗಣಿಗಾರಿಕೆ, ಭೂ ಅಕ್ರಮಗಳ ಆಪಾದನೆ ಹೊತ್ತಿರುವ ಡಿ.ಕೆ.ಶಿವಕುಮಾರ್ ಅವರಿಗೆ ಸಚಿವ ಸ್ಥಾನ ನೀಡಿರುವುದು ಸರಿಯಲ್ಲ. ವಕ್ಫ್ ಆಸ್ತಿ ಅಕ್ರಮಗಳ ಆರೋಪ ಎದುರಿಸುತ್ತಿರುವ ರೋಷನ್ ಬೇಗ್ ಅವರಿಗೆ ಅದೇ ಖಾತೆಯನ್ನು ಮುಖ್ಯಮಂತ್ರಿಗಳು  ನೀಡಿದ್ದಾರೆ ಎಂದು ಟೀಕಿಸಿದರು.

ಪ್ರತಿಭಟನಾ ನಿರತರನ್ನುದ್ದೇಶಿಸಿ ಮಾತನಾಡಿದ ಶಾಸಕ ಸಿ.ಟಿ.ರವಿ ಅಕ್ರಮ ಗಣಿಗಾರಿಕೆ ವಿರೋಧಿಸಿ ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಿದ್ದ ಕಾಂಗ್ರೆಸ್‌ ಪಕ್ಷ ಈಗ ಆಪಾದನೆ ಹೊತ್ತಿರುವವರಿಗೆ ಸಚಿವ ಸ್ಥಾನ ನೀಡುವ ಮೂಲಕ ಭ್ರಷ್ಟಾಚಾರವನ್ನು ಕಾಂಗ್ರೆಸ್‌ ಪರೋಕ್ಷವಾಗಿ ಬೆಂಬಲಿಸಿದಂತಾಗಿದೆ ಎಂದು ಹೇಳಿದರು.

ಸಂತೋಷ್ ಲಾಡ್ ವಿರುದ್ಧ ಆರೋಪ ಕೇಳಿ­ಬಂದಾಗ  ಅವರನ್ನು ಸಚಿವ ಸಂಪುಟದಿಂದ ಕೈಬಿಡ­ಲಾಗಿತ್ತು. ಆದರೆ  ಆರೋಪ ಎದುರಿಸುತ್ತಿರುವ ಇಬ್ಬ­ರಿಗೆ ಸಚಿವ ಸ್ಥಾನ ನೀಡುವ ಮೂಲಕ ರಾಜ್ಯದ  ಸಂಪತ್ತು ಲೂಟಿಗೆ ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ದೂರಿದರು. ಕಳಂಕಿತರಿಗೆ ಸಚಿವ ಸಂಪುಟ­ದಲ್ಲಿ ಜಾಗವಿಲ್ಲ ಎಂದು ಹೇಳಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ 6ತಿಂಗಳ ಕಳೆದ ಬಳಿಕ ಹೇಳಿಕೆಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿ­ದರು.

ಯುವಮೋರ್ಚಾ ಮುಖಂಡ ಸಮೃ­ದ್ಧ್‌ಪೈ ಮಾತನಾಡಿ, ಆಪಾದನೆ ಎದುರಿಸುತ್ತಿ­ರುವ­ವರಿಗೆ ಸಚಿವ ಸ್ಥಾನ ನೀಡುವ ಮೂಲಕ ರಾಜ್ಯವನ್ನು ಕೊಳ್ಳೆ­ಹೊಡೆಯಲು  ರಾಜ್ಯ ಸರ್ಕಾರ ಅವಕಾಶ ಮಾಡಿ­­ಕೊಟ್ಟಿದೆ ಎಂದು ತಿಳಿಸಿದರು. ಮುಖಂಡರಾದ ಎಚ್‌.­ಡಿ.­ತಮ್ಮಯ್ಯ, ನಿಂಗೇ­ಗೌಡ, ರಾಜಪ್ಪ, ವೆಂಕ­ಟೇಶ್ ವರಸಿದ್ದಿ ವೇಣು­ಗೋಪಾಲ್, ಸೀತಾರಾಂ ಭರಣ್ಯ, ರವೀಂದ್ರಪ್ರಭು, ಭುಜೇಂದ್ರ, ಖುರೇಶಿ, ರಮೇಶ್, ಜಾನಯ್ಯ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.