ADVERTISEMENT

ಕಾಂಗ್ರೆಸ್ ಮುಕ್ತ ಪರಿಕಲ್ಪನೆಗೆ ಕೈಜೋಡಿಸಿ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮನವಿ

​ಪ್ರಜಾವಾಣಿ ವಾರ್ತೆ
Published 4 ಮೇ 2018, 8:39 IST
Last Updated 4 ಮೇ 2018, 8:39 IST

ಬಾಳೆಹೊನ್ನೂರು (ಎನ್.ಆರ್.ಪುರ): ದೇಶದಲ್ಲಿ ಕಾಂಗ್ರೆಸ್ ಮುಕ್ತ ಪರಿಕಲ್ಪನೆಯ ಸಕಾರಕ್ಕೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕೆಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದರು.

ಬಾಳೆಹೊನ್ನೂರಿನಲ್ಲಿ ಗುರುವಾರ ನಡೆದ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಸಭೆಗೆ ಚಾಲನೆ ನೀಡಿ ಮಾತನಾಡಿದರು. ಕರ್ನಾಟಕವು ಹನುಮಂತನ ಜನ್ಮ ಸ್ಥಳ, ಪ್ರಕೃತಿ ಮತ್ತು ಪರಮಾತ್ಮನ ನೆಲೆಯ ಪುಣ್ಯಭೂಮಿಯಲ್ಲಿಯಾಗಿದ್ದು, ಈ ನಾಡಲ್ಲಿ ಗೂಂಡಾಗಿರಿ ಹೆಚ್ಚಾಗಿ ಜಿಹಾದಿಗಳು ಹಿಂದೂಗಳನ್ನು ಹತ್ಯೆ ಮಾಡುತ್ತಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲ ನೀಡುತ್ತಿದ್ದಾರೆ ಎಂದು ದೂರಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಮಹಿಳೆಯರು, ಮಕ್ಕಳಿಗೆ ರಕ್ಷಣೆ ಇಲ್ಲವಾಗಿದೆ. ಈ ಬಗ್ಗೆ ರಾಜ್ಯದ ಜನರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಬೇಕು. ಉತ್ತರ ಪ್ರದೇಶದಲ್ಲೂ ಸಹ ಜಿಹಾದಿಗಳು ಬಿಜೆಪಿ ಕಾರ್ಯಕರ್ತರು, ಹಿಂದೂಪರ ಸಂಘಟನೆಗಳ ಮೇಲೆ ದಾಳಿ ನಡೆಸುತ್ತಿದ್ದವು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸಮಾಜ ವಿರೋಧಿ, ರಾಷ್ಟ್ರವಿರೋಧಿಗಳ ವಿರುದ್ಧ ಕ್ರಮಕೈಗೊಂಡಿದ್ದರಿಂದ ರಾಜ್ಯ ಬಿಟ್ಟು ಹೋಗುವ ಸ್ಥಿತಿ ನಿರ್ಮಾಣವಾಗಿದೆ ಎಂದರು.

ADVERTISEMENT

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಪುನರ್ ರೂಪಿಸಲು ರಾಜ್ಯವನ್ನು ವಿಕಾಸದತ್ತ ಕೊಂಡೊಯ್ಯಲು ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬರಬೇಕು. ಇದಕ್ಕಾಗಿ ಬಿಜೆಪಿ ಅಭ್ಯರ್ಥಿ ಜೀವರಾಜ್ ಅವರನ್ನು ಅಧಿಕ ಮತಗಳಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಭಗವಾನ್ ಶ್ರೀರಾಮನ ಜನ್ಮ ಭೂಮಿ ಅಯೋಧ್ಯೆಯಿಂದ ತಾವು ಬಂದಿದ್ದು, ರಾಮ ಕಾಡಿಗೆ ಹೋದಾಗ ಅವರಿಗೆ ಸಿಕ್ಕ ಭಕ್ತ ಹನುಮಂತ ಜನಿಸಿದ ಭೂಮಿ ಕರ್ನಾಟಕವಾಗಿದೆ ಎಂದಾಗ ಜನಸ್ತೋಮದಿಂದ ಭಾರಿ ಕರತಾಳ ಕೇಳಿ ಬಂತು.

ವಿಧಾನ ಪರಿಷತ್ ಸದಸ್ಯ ಪ್ರಾಣೇಶ್ ,ಮುಖಂಡರಾದ ರಾಮಸ್ವಾಮಿ, ವೆನಿಲ್ಲಾ ಭಾಸ್ಕರ್,ಕಲ್ಮಕ್ಕಿ ಉಮೇಶ್ ಇದ್ದರು.

**
ರಾಜ್ಯದಲ್ಲಿ ಜಿಹಾದಿಗಳಿಂದ ಭ್ರಷ್ಟಾಚಾರ, ಅರಾಜಕತೆ ಹೆಚ್ಚಾಗುತ್ತಿದೆ. ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡಿದರೆ ದೇಶ ಜಿಹಾದಿಗಳಿಂದ ಮುಕ್ತವಾಗಲಿದೆ
ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.