ADVERTISEMENT

ಕಾಯಕಲ್ಪಕ್ಕೆ ಕಾದಿರುವ ಕೃಷಿ ಮಾರುಕಟ್ಟೆ !

​ಪ್ರಜಾವಾಣಿ ವಾರ್ತೆ
Published 27 ಮೇ 2018, 12:54 IST
Last Updated 27 ಮೇ 2018, 12:54 IST
ಹೊಳಲ್ಕೆರೆ ಪಟ್ಟಣದ ಹೊರವಲಯದ ಹನುಮಂತದೇವರ ಕಣಿವೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಯ ಪ್ರವೇಶ ದ್ವಾರ.
ಹೊಳಲ್ಕೆರೆ ಪಟ್ಟಣದ ಹೊರವಲಯದ ಹನುಮಂತದೇವರ ಕಣಿವೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಯ ಪ್ರವೇಶ ದ್ವಾರ.   

ಹೊಳಲ್ಕೆರೆ: ಪಟ್ಟಣದ ಹೊರವಲಯದ ಹನುಮಂತದೇವರ ಕಣಿವೆಯಲ್ಲಿರುವ ಕೃಷಿ ಮಾರುಕಟ್ಟೆ ಐದು ವರ್ಷಗಳಾದರೂ ಅಭಿವೃದ್ಧಿ ಕಂಡಿಲ್ಲ. ತಾಲ್ಲೂಕಿನಲ್ಲಿ ಮಾರುಕಟ್ಟೆ ಸೌಲಭ್ಯ ಇಲ್ಲದೇ ಪರಿತಪಿಸುವಂತೆ ಆಗಿದೆ.

ಎಂ.ಚಂದ್ರಪ್ಪ 2008ರಲ್ಲಿ ಶಾಸಕರಾಗಿದ್ದಾಗ ಪಟ್ಟಣದಿಂದ 6 ಕಿ.ಮೀ.ದೂರದಲ್ಲಿರುವ ಹನುಮಂತದೇವರ ಕಣಿವೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸ್ಥಾಪಿಸಲು ಮುಂದಾಗಿದ್ದರು. ಗುಡ್ಡವನ್ನು ನೆಲಸಮಗೊಳಿಸಿ ಮಾರುಕಟ್ಟೆಗೆ ಅಡಿಪಾಯ ನೂ ಹಾಕಿದ್ದರು. ಮಾರುಕಟ್ಟೆಗೆ ಪ್ರವೇಶದ್ವಾರ ನಿರ್ಮಿಸಿದ್ದರು. ಆದರೆ 2013ರಲ್ಲಿ ಎಚ್.ಆಂಜನೇಯ ಸಚಿವರಾದ ಮೇಲೆ ಈ ಮಾರುಕಟ್ಟೆಯ ಅಭಿವೃದ್ಧಿಗೆ ಹೆಚ್ಚು ಗಮನ ಕೊಡಲಿಲ್ಲ. ಹೀಗಾಗಿ ಐದು ವರ್ಷಗಳಿಂದ ಕುಂಟುತ್ತಾ ಸಾಗಿರುವ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸಬೇಕಿದೆ.

ಸದ್ಯ ತಾಲ್ಲೂಕಿನ ರೈತರು ಅಡಿಕೆ, ತೆಂಗು, ಮೆಕ್ಕೆಜೋಳ  ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ದೂರದ ದಾವಣಗೆರೆ, ಚಿತ್ರದುರ್ಗ, ಹೊಸದುರ್ಗ ನಗರಗಳಿಗೆ ಹೋಗುತ್ತಿದ್ದಾರೆ. ಇದನ್ನು ತಪ್ಪಿಸಲು ಕೃಷಿ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸುವ ಮೂಲಕ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಇಲ್ಲಿಯೇ ಮಾರಾಟ ಮಾಡಲು ಅನುಕೂಲ ಮಾಡಿಕೊಡಬೇಕಿದೆ.

ADVERTISEMENT

ಮೆಕ್ಕೆಜೋಳದ ಕಣಜ:

ಹೊಳಲ್ಕೆರೆ ತಾಲ್ಲೂಕು ಮೆಕ್ಕೆಜೋಳದ ಕಣಜ ಎಂದೇ ಹೆಸರಾಗಿದೆ. ತಾಲ್ಲೂಕಿನಲ್ಲಿ ಪ್ರತಿ ವರ್ಷ ಸುಮಾರು 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತದೆ. ಪ್ರತಿ ವರ್ಷ 2 ಲಕ್ಷ ಟನ್ ಮೆಕ್ಕೆಜೋಳ ಬೆಳೆಯಲಾಗುತ್ತಿದ್ದು, ರೈತರು ತಾವು ಬೆಳೆದ ಜೋಳವನ್ನು ಮಾರಾಟ ಮಾಡಲು ಚಿತ್ರದುರ್ಗದ ಮಾರುಕಟ್ಟೆಗೆ ಹೋಗುವ ಪರಿಸ್ಥಿತಿ ಇದೆ. ಮಾರುಕಟ್ಟೆ ದೂರ ಇರುವುದರಿಂದ ಸಾಗಣೆ ವೆಚ್ಚ ಹೆಚ್ಚಾಗುತ್ತದೆ. ಇದರಿಂದ ಹೆಚ್ಚಿನ ರೈತರು ಗ್ರಾಮಕ್ಕೆ ಬರುವ ಮಧ್ಯವರ್ತಿಗಳಿಗೆ ಜೋಳವನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ.

ಅಡಿಕೆ ಮಾರುಕಟ್ಟೆಯೂ ಇಲ್ಲ:

ಅಡಿಕೆ ತಾಲ್ಲೂಕಿನ ಪ್ರಮುಖ ತೋಟಗಾರಿಕಾ ಬೆಳೆಯಾಗಿದ್ದು, ಸ್ಥಳೀಯವಾಗಿ ಮಾರುಕಟ್ಟೆ ಇಲ್ಲ. ರೈತರು ಅಡಿಕೆ ಮಾರಾಟ ಮಾಡಲು ದೂರದ ಭೀಮಸಮುದ್ರ, ಚನ್ನಗಿರಿ ಮಾರುಕಟ್ಟೆಗೆ ಹೋಗುವ ಅನಿವಾರ್ಯತೆ ಇದೆ. ತೆಂಗು ಕೂಡ ಇಲ್ಲಿನ ಪ್ರಮುಖ ಬೆಳೆಯಾಗಿದ್ದು, ತೆಂಗಿನ ಕಾಯಿ ಮಾರಾಟಕ್ಕೆ ದಾವಣಗೆರೆ ಮಾರುಕಟ್ಟೆ ಆಶ್ರಯಿಸಬೇಕಾಗಿದೆ. ಕೊಬ್ಬರಿ ಮಾರಾಟ ಮಾಡಲು ತಿಪಟೂರು, ಹುಳಿಯಾರು, ಅರಸಿಕೆರೆಗೆ ಹೋಗುತ್ತಾರೆ. ಹಣ್ಣು, ತರಕಾರಿ ಮಾರುಕಟ್ಟೆಯೂ ತಾಲ್ಲೂಕಿನಲ್ಲಿ ಇಲ್ಲ.

ಹಳೆ ಕಾಮಗಾರಿಗಳಿಗೆ ಮರುಜೀವ:

ಸಚಿವ ಎಚ್.ಆಂಜನೇಯ ಕ್ಷೇತ್ರದಲ್ಲಿ ಕೈಗೊಂಡಿದ್ದ ವಿವಿಧ ಕಾಮಗಾರಿಗಳು ನಿರ್ಮಾಣದ ಹಂತದಲ್ಲಿದ್ದು, ಅವುಗಳನ್ನು ಮುಗಿಸುವ ಹೊಣೆ ಈಗಿನ ಶಾಸಕ ಎಂ.ಚಂದ್ರಪ್ಪ ಮೇಲಿದೆ. ಪಟ್ಟಣದ ಮುಖ್ಯವೃತ್ತದ ಸಮೀಪ ನಿರ್ಮಿಸುತ್ತಿರುವ ಕೆಎಸ್ಆರ್ ಟಿಸಿ ಬಸ್ ನಿಲ್ದಾಣ, ಸಮುದಾಯ ಭವನಗಳು, ಬಸಾಪುರ ಗೇಟ್ ನಲ್ಲಿ ನಿರ್ಮಾಣ ಆಗುತ್ತಿರುವ ಚಾಲಕರ ತರಬೇತಿ ಕೇಂದ್ರ, ಚಿತ್ರಹಳ್ಳಿ ಗೇಟ್ ಸಮೀಪ ಮೊರಾರ್ಜಿ ದೇಸಾಯಿ ಶಾಲೆ, ಪದವಿ ಕಾಲೇಜು ಸೇರಿದಂತೆ ವಿವಿಧ ಕಾಮಗಾರಿಗಳು ನಿರ್ಮಾಣ ಹಂತದಲ್ಲಿದ್ದು, ಕಾಮಗಾರಿಗಳನ್ನು ಮುಗಿಸಬೇಕಿದೆ.

ಪಟ್ಟಣ ಪಂಚಾಯಿತಿ ಕಚೇರಿ ಕಟ್ಟಡ, ಸಾರ್ವಜನಿಕ ಆಸ್ಪತ್ರೆ ಕಟ್ಟಡ, ಕ್ರೀಡಾಂಗಣ, ಶಾಲಾ ಕಾಲೇಜು, ವಿದ್ಯಾರ್ಥಿ ನಿಲಯಗಳು, ಗ್ರಾಮೀಣ ರಸ್ತೆ, ಕುಡಿಯುವ ನೀರು ಮತ್ತಿತರ ಮೂಲ ಸೌಕರ್ಯಗಳನ್ನು ಒದಗಿಸಲು ಮುಂದಾಗಬೇಕಿದೆ. ನನೆಗುದಿಗೆ ಬಿದ್ದಿರುವ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಗೆ ಚುರುಕು ನೀಡಿ ಕೆರೆಗಳಿಗೆ ನೀರು ಹರಿಸಬೇಕಿದೆ.

ಅನುದಾನ ತರುವ ಸವಾಲು:

2008ರಲ್ಲಿ ಚಂದ್ರಪ್ಪ ಶಾಸಕರಾಗಿದ್ದಾಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇತ್ತು. ಆಗ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದರು. ಬಿಎಸ್ ವೈ ಅವರಿಗೆ ಹತ್ತಿರವಾಗಿದ್ದ ಚಂದ್ರಪ್ಪ ವಿಶೇಷ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದರು. ಈ ಬಾರಿಯೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಕ್ಷೇತ್ರ ಹೆಚ್ಚು ಅಭಿವೃದ್ಧಿ ಆಗುವ ನಿರೀಕ್ಷೆ ಇಲ್ಲಿನ ಜನರಲ್ಲಿತ್ತು. ಆದರೆ ರಾಜ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾರೆ. ಆದರೆ ಬಿಜೆಪಿ ಶಾಸಕರಾಗಿರುವ ಎಂ.ಚಂದ್ರಪ್ಪ ಅವರಿಗೆ ಸಮ್ಮಿಶ್ರ ಸರ್ಕಾರದಿಂದ ಹೆಚ್ಚು ಅನುದಾನ ತರುವುದು ದೊಡ್ಡ ಸವಾಲು.

ಸರ್ಕಾರದ ಹಣ ಸದ್ಬಳಕೆ ಆಗಲಿ:

2008ರಲ್ಲಿ ಎಂ.ಚಂದ್ರಪ್ಪ ಶಾಸಕರಾಗಿದ್ದ ಅವಧಿಯಲ್ಲಿ ನಡೆದ ಕಾಮಗಾರಿಗಳನ್ನು ಮುಂದುವರಿಸಲು 2013ರಲ್ಲಿ ಶಾಸಕರಾಗಿ ಆಯ್ಕೆಯಾದ ಎಚ್.ಆಂಜನೇಯ ಆಸಕ್ತಿ ತೋರಲಿಲ್ಲ. ಜನ ಕಟ್ಟುವ ತೆರಿಗೆ ಹಣದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯಲಿದ್ದು, ಜನಪ್ರತಿನಿಧಿಗಳು ತಮ್ಮ ವೈಯಕ್ತಿಕ ಪ್ರತಿಷ್ಠೆಗಾಗಿ ಸರ್ಕಾರದ ಹಣ ಪೋಲು ಮಾಡಬಾರದು. ಎಚ್.ಆಂಜನೇಯ ಕೈಗೊಂಡಿದ್ದ ಕಾಮಗಾರಿಗಳನ್ನು ಮುಂದುವರಿಸುವ ಮೂಲಕ ಶಾಸಕ ಎಂ.ಚಂದ್ರಪ್ಪ ಬದ್ಧತೆ ತೋರಬೇಕು ಎನ್ನುವುದು ಕ್ಷೇತ್ರದ ಮತದಾರನ ಆಶಯ.

ಮಾರುಕಟ್ಟೆ ಅಭಿವೃದ್ಧಿಗೆ ಆದ್ಯತೆ

‘ನನೆಗುದಿಗೆ ಬಿದ್ದಿರುವ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸುತ್ತೇನೆ’ ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದ್ದಾರೆ.

‘ಶಾಸಕನಾಗಿದ್ದಾಗ ಹೊಸದುರ್ಗದಿಂದ ಬೇರ್ಪಡಿಸಿ ಹೊಳಲ್ಕೆರೆಗೆ ಪ್ರತ್ಯೇಕ ಮಾರುಕಟ್ಟೆ ಮಂಜೂರು ಮಾಡಿಸಿದ್ದೆ. ಕಳ್ಳಕಾಕರ ತಾಣವಾಗಿದ್ದ ಹನುಮಂತದೇವರ ಕಣಿವೆಯ ನಿರುಪಯುಕ್ತ ಗುಡ್ಡವನ್ನು ನೆಲಸಮಗೊಳಿಸಿ ಮಾರುಕಟ್ಟೆ ನಿರ್ಮಿಸಲು ಚಾಲನೆ ನೀಡಿದ್ದೆ. ಆದರೆ 5 ವರ್ಷಗಳಿಂದ ಮಾರುಕಟ್ಟೆ ಯಾವುದೇ ಅಭಿವೃದ್ಧಿ ಕಂಡಿಲ್ಲ.

ವರ್ತಕರಿಗೆ ದಲ್ಲಾಳಿ ಮಂಡಿ ನಿರ್ಮಿಸಲು ಪ್ರತಿ ಚದರ ಅಡಿಗೆ ₹ 500 ರಂತೆ ನಿವೇಶನಗಳನ್ನು ಮಾರಾಟ ಮಾಡಲಾಗುವುದು. ಇದರಿಂದ ₹ 10 ಕೋಟಿಗೂ ಹೆಚ್ಚು ಹಣ ಸಂಗ್ರಹ ಆಗಲಿದೆ. ಮಾರುಕಟ್ಟೆಯ ಪ್ರವೇಶ ದ್ವಾರದ ಎಡಭಾಗದಲ್ಲಿ ಕಚೇರಿ, ರೈತರು ತಂಗಲು ಕೊಠಡಿಗಳು, ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯ ಒದಗಿಸಲಾಗುವುದು. ಇಲ್ಲಿ ವಾರದಲ್ಲಿ ಒಂದು ದಿನ ಕುರಿ ಸಂತೆ ನಡೆಸುವ ಆಲೋಚನೆ ಇದೆ ಎಂದು ಚಂದ್ರಪ್ಪ ತಿಳಿಸಿದ್ದಾರೆ.

**
ಎಂ.ಚಂದ್ರಪ್ಪ 2008ರಲ್ಲಿ ಶಾಸಕರಾಗಿದ್ದಾಗ ಕೃಷಿ ಮಾರುಕಟ್ಟೆ ಕಾಮಗಾರಿ ಆರಂಭಿಸಿದ್ದರು. ಈಗ ಮತ್ತೆ ಅವರೇ ಶಾಸಕರಾಗಿದ್ದು, ಕಾಮಗಾರಿ ಮುಂದುವರಿಸಬೇಕು. ಬರೀ ಕಟ್ಟಡ, ರಸ್ತೆ ನಿರ್ಮಿಸಿದರೆ ಸಾಲದು. ಕೃಷಿ ಉತ್ಪನ್ನಗಳ ಮಾರಾಟ, ಖರೀದಿ ಆರಂಭವಾಗಬೇಕು
- ಈಚಘಟ್ಟದ ಸಿದ್ದವೀರಪ್ಪ, ರೈತ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ

-ಸಾಂತೇನಹಳ್ಳಿ ಸಂದೇಶ್ ಗೌಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.