ADVERTISEMENT

ಕೊಪ್ಪ: ಬೃಹತ್ ಹಿಂದೂ ಸಮಾಜೋತ್ಸವ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 9:45 IST
Last Updated 8 ಫೆಬ್ರುವರಿ 2011, 9:45 IST

ಕೊಪ್ಪ: ಪಟ್ಟಣದಲ್ಲಿ ಸೋಮವಾರ ಶ್ರಿ ಹನುಮಾನ್ ಶಕ್ತಿ ಜಾಗರಣ ಯಜ್ಞ ಮತ್ತು ಬೃಹತ್ ಹಿಂದೂ ಸಮಾಜೋತ್ಸವ ನಡೆಯಿತು.ಸಹಸ್ರಾರು ಹಿಂದೂ ಭಕ್ತರ ಸಮ್ಮುಖದಲ್ಲಿ ಇಲ್ಲಿನ ವೀರಭದ್ರ ದೇವಾಲಯದಲ್ಲಿ ಪವಮಾನ ಹೋಮದ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಯಿತು. ಮೇಲಿನ ಪೇಟೆ ಕುವೆಂಪು ವೃತ್ತದಿಂದ ಸಹಸ್ರಾರು ಕೇಸರಿ ಪತಾಕೆ ಯೊಂದಿಗೆ ಮೆರವಣಿಗೆ ನಡೆಸಲಾಯಿತು.

ಮೆರವಣಿಗೆಯಲ್ಲಿ ಡೊಳ್ಳು ವಾದನಕ್ಕೆ ತಕ್ಕಂತೆ ನರ್ತಿಸುತ್ತಿದ್ದ ಯುವಕರು ಗಮನ ಸೆಳೆದರು. ಶಾಸಕ ಡಿ.ಎನ್.ಜೀವರಾಜ್, ಬಿಜೆಪಿ ಮುಖಂಡರಾದ ಎನ್.ಎಸ್. ರಾಮಸ್ವಾಮಿ, ಕುಕ್ಕುಡಿಗೆ ರವೀಂದ್ರ, ಮಳಿಗೆ ಚಂದ್ರಶೇಖರ್, ಕೊಂಡಿಬೈಲು ಚಂದ್ರಶೇಖರ್ ಜೋಯಿಸ್ ಮೊದಲಾದವರು ಪಾಲ್ಗೊಂಡರು.ಪುರಸಭಾ ಕ್ರೀಡಾಂಗಣದಲ್ಲಿ ನಡೆದ ಸಮಾವೇಶದಲ್ಲಿ ಬಾಳೆಕುದ್ರು ಮಠಾಧೀಶ ನರಸಿಂಹಾಶ್ರಮ ಸ್ವಾಮಿ ಸಾನಿಧ್ಯದ ವಹಿಸಿದ್ದರು.
 
ಕಾರ್ಕಳದ ಸೂರತ್ ಕುಮಾರ್ ದಿಕ್ಸೂಚಿ ಭಾಷಣ ಮಾಡಿ, ಹಿಂದೂ ವಿರೋಧಿ ಶಕ್ತಿಗಳ ವಿರುದ್ಧ ಹಿಂದುಗಳು ಒಗ್ಗಟ್ಟಾಗಿ ಧ್ವನಿ ಎತ್ತಬೇಕೆಂದರು. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ, ಅಲ್ಲಿ ರಾಷ್ಟ್ರೀಯ ಧ್ವಜ ಹಾರಿಸಲು ಬಿಡದ ಕೇಂದ್ರ ಸರ್ಕಾರವನ್ನು ಟೀಕಿಸಿದ ಅವರು, ಕಾಶ್ಮೀರದ ಮುಖ್ಯಮಂತಿ ಒಮರ್ ಅಬ್ದುಲ್ಲಾ  ಲೇಖಕಿ ಅರುಂಧತಿ ರಾಯ್ ಹಿಂದೂ ವಿರೋಧಿ, ರಾಷ್ಟ್ರದ್ರೋಹಿಗಳು ಎಂದರು.

 ಸಮಾಜೋತ್ಸವದ ಸಂಚಾಲಕ ಅಗಲಿ ನಾಗೇಶ್ ರಾವ್ ಮಾತನಾಡಿ, ಕಾಶ್ಮೀರದ ಬಗ್ಗೆ ಹಿಂದೂಗಳಲ್ಲಿ ಜಾಗೃತಿ ಮೂಡಿಸುವುದು, ರಾಮಜನ್ಮ ಭೂಮಿಯಲ್ಲಿ ರಾಮಮಂದಿರ ನಿರ್ಮಿಸಲು ಹಾಗೂ ಹಿಂದೂ ಸಂಘಟನೆಗಳನ್ನು ಭಯೋತ್ಪಾದಕರಂತೆ ಬಿಂಬಿಸುವ ಪಿತೂರಿ ವಿರುದ್ಧ ಅರಿವು ಮೂಡಿಸುವುದು ಸಮಾಜ್ಯೋತ್ಸವದ ಗುರಿ ಎಂದರು.ಕಾಫಿ ಬೆಳೆಗಾರ ಆಶ್ವಿನ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಒಕ್ಕಲಿಗ, ಬ್ರಾಹ್ಮಣ, ಜೈನ, ಬಿಲ್ಲವ, ಮಡಿವಾಳ, ಗೌಡ ಸಾರಸ್ವತ, ಮಾರ್ವಾಡಿ, ಈಡಿಗ, ಗಿರಿಜನ, ಪರಿಶಿಷ್ಟ ಜಾತಿ, ಬೋವಿ ಸೇರಿದಂತೆ ವಿವಿಧ ಸಮಾಜದ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.