ತರೀಕೆರೆ: `ಸಮುದ್ರದ ಜತೆ ಗೆಳೆತನ, ಉಪ್ಪಿಗೆ ಬಡತನ~ ಎಂಬ ಗಾದೆ ಮಾತು ತರೀಕೆರೆ ಪಟ್ಟಣದ ಹೊರ ವಲಯದಲ್ಲಿರುವ ಗೋಣಿಕಟ್ಟೆ ಗ್ರಾಮಸ್ಥರಿಗೆ ಅಕ್ಷರಶಃ ಅನ್ವಯಿಸುತ್ತದೆ.
1985 ರಿಂದಲೂ ಇಲ್ಲಿನ ಸರ್ಕಾರಿ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡು ವಾಸ ಮಾಡಿಕೊಂಡಿರುವ 40 ಕ್ಕೂ ಹೆಚ್ಚು ಕೂಲಿ ಕಾರ್ಮಿಕ ಕುಟುಂಬಗಳು ನಾಗರೀಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.
ತರೀಕೆರೆ ಪಟ್ಟಣ ಮತ್ತು ಇನ್ನಿತರೆ ಪ್ರದೇಶದಲ್ಲಿ ವಾಸವಿದ್ದು, ನಿವೇಶನದ ಕೊರತೆಯನ್ನು ಎದುರಿಸುತ್ತಿದ್ದ ಜನರು, 1985ರಲ್ಲಿ ಪಟ್ಟಣದ ಹೊರ ವಲಯದ ಉಪ್ಪಾರ ಬಸವನಹಳ್ಳಿ ಗ್ರಾಮಕ್ಕೆ ಸಂಪರ್ಕಿಸುವ ರೈಲ್ವೆ ಕ್ರಾಸಿಂಗ್ ಬಳಿಯಿರುವ ಗೋಣಿಕಟ್ಟೆ ಪ್ರದೇಶದ 2.10 ಎಕರೆ ಸರ್ಕಾರಿ ಭೂಮಿಯಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತ ಬಂದಿದ್ದಾರೆ.
ಸದರಿ ಪ್ರದೇಶವು ಕಂದಾಯ ಇಲಾಖೆಗೆ ಸೇರಿದ್ದರಿಂದ ತಾಲ್ಲೂಕು ದಂಡಾಧಿಕಾರಿಗಳು ನಿವೇಶನದ ಹಕ್ಕು ಪತ್ರವನ್ನು ನೀಡುವಂತೆ ನಿವಾಸಿಗಳು ಹತ್ತಾರು ಬಾರಿ ಮಾಡಿದ ಮನವಿ ವಿಫಲವಾಗಿವೆ.
ಈ ನಡುವೆ ಈ ಪ್ರದೇಶವನ್ನು ತರೀಕೆರೆ ಪುರಸಭೆ ವ್ಯಾಪ್ತಿಗೆ ಸೇರಿಸಿದ್ದು, ವಾರ್ಡ್ ಸಂಖ್ಯೆ 3 ಎಂದು ನಿರ್ಧರಿಸಿ ಇಲ್ಲಿನ ಜನತೆ ಪುರಸಭೆಯ ಸದಸ್ಯರನ್ನು ಆಯ್ಕೆ ಮಾಡಲು ಮತದಾನವನ್ನು ಮಾಡಿದ್ದಾರೆ. ವಿಪರ್ಯಾಸವೆಂದರೆ ಕಂದಾಯ ಇಲಾಖೆ ಇಲ್ಲಿನ ಜನತೆಗೆ ನಿವೇಶನವನ್ನು ಮಂಜೂರು ಮಾಡಲು ಕ್ರಮ ಕೈಗೊಂಡಿದ್ದು, ಪುರಸಭೆಗೆ ಸದರಿ ಸ್ಥಳ ಸೇರಿಕೊಂಡಿರುವುದರಿಂದ ತಾಂತ್ರಿಕ ಕಾರಣಗಳಿಂದ ತಡೆ ಹಿಡಿದಿರುವುದರಿಂದ ನಿವೇಶನದ ಹಕ್ಕು ಪತ್ರ ಪಡೆಯುವಲ್ಲಿ ವಂಚಿತರಾಗಿದ್ದಾರೆ.
ಒಂದೇ ಕೊಳವೆಬಾವಿ: 40 ಕುಟುಂಬಗಳು ವಾಸವಿರುವ ಈ ಪ್ರದೇಶದಲ್ಲಿ ಸ್ಥಳೀಯ ನಿವಾಸಿಗಳು ಸೇರಿ ಕೊರೆಸಿದ ಏಕೈಕ ಕೊಳವೆ ಬಾವಿಯ ನೀರು ಇವರಿಗೆ ಆಸರೆಯಾಗಿದೆ. ಇವರ ಸಂಕಷ್ಟವನ್ನು ನೋಡಿದ ಸ್ಥಳೀಯ ಮುಖಂಡರೊಬ್ಬರು ತಮ್ಮ ಸ್ವಂತ ಖರ್ಚಿನಿಂದ ವಿದ್ಯುತ್ ಸಂಪರ್ಕ ಕಲ್ಪಿಸಿ ವಿದ್ಯುತ್ ದೀಪವನ್ನು ವ್ಯವಸ್ಥೆಯನ್ನು ಗ್ರಾಮಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.