ADVERTISEMENT

‘ಗ್ರಾಮೀಣ ಕ್ರೀಡೆಗಳನ್ನು ಹೆಚ್ಚು ಆಯೋಜಿಸಿ’

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 7:41 IST
Last Updated 17 ಏಪ್ರಿಲ್ 2017, 7:41 IST

ಚಿಕ್ಕಮಗಳೂರು: ‘ಯುವಕರು ನಾಡಿನ ಭಾಷೆ ಸಂಸ್ಕೃತಿಯನ್ನು ಉಳಿಸಿ ಗ್ರಾಮೀಣ ಕ್ರೀಡೆಗಳನ್ನು ಹೆಚ್ಚು ಆಯೋಜಿಸಬೇಕು’ ಎಂದು ಮೂಡಿಗೆರೆ ಶಾಸಕ ಬಿ.ಬಿ.ನಿಂಗಯ್ಯ ತಿಳಿಸಿದರು.ನಗರದ ಸುಭಾಷ್‌ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಭಾನುವಾರ ಭಾರತೀಯ ಮಾನವ ಹಕ್ಕು ಸಂರಕ್ಷಣಾ ವೇದಿಕೆಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಬ್ಬಡಿ ಪಂದ್ಯಾವಳಿಯನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದಲ್ಲಿ ಯುವಕರಿಗೆ ವಿವಿಧ ಕ್ಷೇತ್ರಗಳಲ್ಲಿ ಅವಕಾಶಗಳು ದೊರೆ ಯುತ್ತಿದ್ದು, ಸತತ ಪ್ರಯತ್ನದಿಂದ ಕ್ರೀಡೆ, ಕಲೆ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತರಬೇಕು’ ಎಂದರು.‘ಮಾನವ ಹಕ್ಕು ಸಂರಕ್ಷಣಾ ವೇದಿಕೆ ದೌರ್ಜನ್ಯಕ್ಕೆ ಒಳಗಾದವರು ಹಾಗೂ ನೊಂದವರ ನೆರೆವಿಗೆ ನಿಂತು ನ್ಯಾಯ ದೊರಕಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಹಣ ಬಲ ಉಳ್ಳವರು ದುರ್ಬಲರ ಮೇಲೆ ದೌರ್ಜನ್ಯ ಮಾಡುತ್ತಿದ್ದು, ಇದರ ಬಗ್ಗೆ ವಿಶೇಷ ಕಾಳಜಿ ವಹಿಸಿ ತಮ್ಮ ಕರ್ತವ್ಯ ಪಾಲಿಸಬೇಕು’ ಎಂದರು.

ಭಾರತೀಯ ಮಾನವ ಹಕ್ಕು ಸಂರಕ್ಷಣಾ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೋದಂಡರಾಮ ಮಾತನಾಡಿ, ಸಂರಕ್ಷಣಾ ವೇದಿಕೆಯ ಘಟಕಗಳನ್ನು ರಾಜ್ಯದಾದ್ಯಂತ ಎಲ್ಲ ಜಿಲ್ಲೆಗಳಲ್ಲೂ ಪ್ರವಾಸ ಕೈಗೊಂಡು ಸ್ಥಳಿಯ ಸಮಸ್ಯೆಗಳನ್ನು ಆಲಿಸಿ ಜಿಲ್ಲಾ ಸಮಿತಿಯನ್ನು ರಚನೆ ಮಾಡಲಾಗುತ್ತಿದೆ’ ಎಂದರು.ಸಂಘಟನೆಯು ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದು, ‘ಅನ್ಯಾಯ ಮತ್ತು ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ದೊರೆಯದಿದ್ದಲ್ಲಿ ನಮ್ಮ ಸಂಘಟನೆಗೆ ದೂರು ನೀಡಿದ ತಕ್ಷಣವೇ ಸಮಸ್ಯೆಗೆ ಸ್ಪಂದಿಸಲಾಗುವುದು’ ಎಂದರು.

ADVERTISEMENT

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಎಲ್.ವಿಜಯ್ ಕುಮಾರ್, ಎಪಿಎಂಸಿ ಅಧ್ಯಕ್ಷ ಕವೀಶ್, ಜಿಲ್ಲಾ ಪಂಚಾಯಿತಿ ಸದಸ್ಯ ಹಿರಿಗಯ್ಯ, ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ, ವಕೀಲ ಸುಜೇಂದ್ರ, ಅನಿಲ್ ಕುಮಾರ್, ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೇಶ್, ಪ್ರಧಾನ ಕಾರ್ಯದರ್ಶಿ ಲೊಕೇಶ್, ತಾಲ್ಲೂಕು ಪಂಚಾಯಿತಿ ಸದಸ್ಯ ಮಹೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲೇಶ್, ಖಜಾಂಚಿ ವೆಂಕಟೇಶ್ ರಾಜು  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.