ADVERTISEMENT

ಚುನಾವಣೆ ಬಿಜೆಪಿಗೆ ಪ್ರತಿಷ್ಠೆ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2012, 8:05 IST
Last Updated 2 ಮಾರ್ಚ್ 2012, 8:05 IST

ತರೀಕೆರೆ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆ ಎಲ್ಲ ರಾಜಕೀಯ ಪಕ್ಷಗಳಿಗೂ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಆಡಳಿತಾರೂಢ ಬಿಜೆಪಿಗೆ ಇದು ಹೆಚ್ಚು ಪ್ರತಿಷ್ಠೆಯಾಗಲಿದೆ ಎಂದು ವಿಧಾನಸಭೆ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಉಪ ಚುನಾವಣೆ ಪ್ರಯುಕ್ತ ಪಕ್ಷದ ಕಾರ್ಯಕರ್ತರನ್ನು ಸಂಘಟಿಸುವ ಸಲುವಾಗಿ ಪಟ್ಟಣಕ್ಕೆ ಆಗಮಿಸಿದ್ದ ಅವರು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಪ್ರಸ್ತುತ ಚುನಾವಣೆ ಮುಂದಿನ ವಿಧಾನಸಭೆಯ ದಿಕ್ಸೂಚಿ ಆಗದಿದ್ದರೂ ನಾಲ್ಕು ವರ್ಷದ ಬಿಜೆಪಿ ಸರ್ಕಾರದ ಸಾಧನೆಯನ್ನು ಮತ್ತು ಅದರ ವೈಫಲ್ಯತೆಯನ್ನು ಜನತೆ ಓರೆಗೆ ಹಚ್ಚಲಿದ್ದಾರೆ ಎಂದರು. ಕಾಂಗ್ರೆಸ್ ಪಕ್ಷ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಕಾನೂನು ಬಾಹಿರ ಚಟುವಟಿಕೆ, ಪ್ರಜಾಪ್ರಭುತ್ವ ವಿರೋಧಿ ನೀತಿ, ಸಂವಿಧಾನ ವಿರೋಧ ನೀತಿ, ಅಕ್ರಮ ಆಸ್ತಿ ಸಂಪಾದನೆ ಮತ್ತು ಪಕ್ಷಪಾತ ಧೋರಣೆಯನ್ನು ಚುನಾವಣೆಯ ಅಜೆಂಡಾವನ್ನಾಗಿ ಮಾಡಿಕೊಂಡು ಜನತೆಯ ಬಳಿಗೆ ಹೋಗಲಿದ್ದೇವೆ ಎಂದರು.

ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ನಿಷ್ಕ್ರೀಯವಾಗಿಲ್ಲ, ಬಿಜೆಪಿ ಸರ್ಕಾರದ ನಾಯ್ಡು, ಕೃಷ್ಣಯ್ಯಶೆಟ್ಟಿ, ಪ್ರೇರಣಾ ಹಗರಣವನ್ನು ಬಯಲಿಗೆ ಎಳೆದದ್ದು ಮತ್ತು ಬಳ್ಳಾರಿಗೆ ಪಾದಯಾತ್ರೆ ಸೇರಿದಂತೆ ಹಲವು ಜನಪರ ಹೋರಾಟ ನಡೆಸಿ ಸರ್ಕಾರದ ಹುಳುಕು ಬೆಳಕಿಗೆ ತಂದಿದ್ದು ಕಾಂಗ್ರೆಸ್ ಎಂದು ತಿಳಿಸಿದರು.

ಜೆಡಿಎಸ್ ಪ್ರಬಲ ಪಕ್ಷವಲ್ಲ, ಅದೊಂದು ಕುಟುಂಬದ ಆಸ್ತಿಯನ್ನು ರಕ್ಷಿಸಿಕೊಳ್ಳುವ ಅಪ್ಪ, ಮಕ್ಕಳಿಗೆ ಮೀಸಲಾದ ಪಕ್ಷವೆಂದು ದೂರಿದ ಅವರು, ಪ್ರಸ್ತುತ ಚುನಾವಣೆಯನ್ನು ಕಾಂಗ್ರೆಸ್ ತನ್ನದಾಗಿಸಿಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕಿ ಮೋಟಮ್ಮ, ಮಾಜಿ ಶಾಸಕರಾದ ನೀಲಕಂಠಪ್ಪ, ಟಿ.ಎಚ್.ಶಿವಶಂಕರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಬ್ದುಲ್‌ಘನಿ ಅನ್ವರ್, ಕೆ.ಆರ್‌ದ್ರುವಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಎಸ್.ಎನ್.ಲೋಹಿತ್, ಮುಖಂಡರಾದ ಆರ್.ಮಂಜುನಾಥ್, ಜಿ.ಎಚ್.ಶ್ರೀನಿವಾಸ್, ದೋರನಾಳ್ ಪರಮೇಶ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.