ADVERTISEMENT

ಜೆಡಿಎಸ್ ಪ್ರತಿಭಟನೆ; ಸಚಿವರ ಪ್ರತಿಕೃತಿ ದಹನ

ಸಿ.ಎ.ನಿವೇಶನ ಹಂಚಿಕೆ; ಸಿ.ಟಿ.ರವಿ ವಿರುದ್ಧ ಭ್ರಷ್ಟಾಚಾರ ಆರೋಪ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2012, 10:12 IST
Last Updated 22 ಡಿಸೆಂಬರ್ 2012, 10:12 IST

ಚಿಕ್ಕಮಗಳೂರು: ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ವಿರೋಧಿಸಿ ಶುಕ್ರವಾರ ಜಾತ್ಯತೀತ ಜನತಾದಳ ವತಿಯಿಂದ ಸಚಿವ ಸಿ.ಟಿ.ರವಿ ಅವರ ಪ್ರತಿಕೃತಿ ದಹಿಸಿ, ಗೃಹಮಂಡಳಿ ಕಚೇರಿಗೆ ಬೀಗಹಾಕಿ ಪ್ರತಿಭಟನೆ ನಡೆಸಲಾಯಿತು.

ಗೃಹಮಂಡಳಿ ಬಡಾವಣೆಯಲ್ಲಿರುವ ಪಂಚಮುಖಿ ಗಣಪತಿ ದೇವಾಲಯದಲ್ಲಿ ಪೂ ಜೆ ಸಲ್ಲಿಸಿ ಮೆರವಣಿಗೆಯಲ್ಲಿ ಬಂದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸಚಿವರ ವಿರುದ್ಧ ಘೋಷಣೆ ಕೂಗಿದರು. ಸಚಿವರ ಪ್ರತಿಕೃತಿ ಸುಟ್ಟು ಹಾಕಿದರು. ಗೃಹಮಂಡಳಿ ಜಿಲ್ಲಾಯೋಜನಾ ಕಚೇರಿಗೆ ತೆರಳಿ ಧರಣಿ ನಡೆಸಲು ಮುಂದಾದರು. ಕಚೇರಿಯಲ್ಲಿದ್ದ ಅಧಿಕಾರಿಗಳು ಸಿಬ್ಬಂದಿ ಹೊರಗೆ ಕರೆದ ಪ್ರತಿಭಟನಾನಿತರು, ಕಚೇರಿಗೆ ಬೀಗಹಾಕಿ ನಂತರ ತೆರವುಗೊಳಿಸಿದರು. ಕಚೇರಿ ಎದುರು ಪ್ರತಿಭಟನೆ ನಡೆಸಿ ದರು.

ಮಾಜಿ ಶಾಸಕ ಎಸ್.ಎಲ್.ಧರ್ಮೇಗೌಡ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತ ನಾಡಿ, ಗೃಹಮಂಡಳಿ ಬಡಾವಣೆಯಲ್ಲಿ ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟಿದ್ದ ಸಿ.ಎ. ನಿವೇಶನವನ್ನು ಹಲವು ವರ್ಷಗಳಿಂದ ಯಾವುದೇ ಕಾರ್ಯಚಟುವಟಿಕೆ ನಡೆಸದೆ ಸ್ಥಗಿತಗೊಂಡಿದ್ದ  ಆಂಜನೇಯ ವಿದ್ಯಾಸಂಸ್ಥೆ ಹೆಸರಿಗೆ ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಅಭಿವೃದ್ಧಿ ಹೆಸರಿನಲ್ಲಿ ರಸ್ತೆ ಮತ್ತು ಚರಂಡಿಗಳನ್ನು ದುರಸ್ತಿ ಮಾಡುವ ಮೂಲಕ ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸದೆ ಹಣ ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು  ದೂರಿದರು.ಜನತಾದಳದ ಮುಖಂಡ ಎಸ್.ಎಲ್. ಭೋಜೇಗೌಡ ಮಾತನಾಡಿ, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ವಿಕಾಸಯಾತ್ರೆ ಹಮ್ಮಿಕೊಳ್ಳುವ ಮೂಲಕ ಜನರನ್ನು ದಿಕ್ಕು ತಪ್ಪಿಸಲು ಸಚಿವರು ಮುಂದಾಗಿದ್ದಾರೆ ಎಂದು ಟೀಕಿಸಿದರು.

ಇದೇ ಸಂದರ್ಭದಲ್ಲಿ `ಭ್ರಷ್ಟಾಚಾರದ ವಿರುದ್ಧ ಸಾರ್ವಜನಿಕ ಪ್ರಕಟಣೆ' ಎಂಬ ಹೆಸರಿನಲ್ಲಿ ಹೊರಡಿಸಿದ್ದ  ಕರಪತ್ರವನ್ನು ಹಿಡಿದು ಮಾಜಿ ಶಾಸಕ ಎಸ್.ಎಲ್.ಧರ್ಮೇಗೌಡ, ಎಸ್.ಎಲ್.ಭೋಜೇಗೌಡ ಸೇರಿದಂತೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಗೃಹಮಂಡಳಿ ಬಡಾವಣೆಯ ಮನೆ ಮತ್ತು ಅಂಗಡಿಗಳಿಗೆ ತೆರಳಿ ವಿತರಿಸಿದರು. ಪಕ್ಷದ ಅಧ್ಯಕ್ಷ ಮಂಜಪ್ಪ, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಚಂದ್ರಪ್ಪ, ಜಿಲ್ಲಾ ಮಹಿಳಾ ವಿಭಾಗದ ಅಧ್ಯಕ್ಷೆ ಜ್ಯೋತಿ ಈಶ್ವರ್, ನಗರಸಭಾ ಸದಸ್ಯ ದೇವೀ ಪ್ರಸಾದ್, ಜಯರಾಜ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT