ADVERTISEMENT

`ತಂಬಾಕು ಸೇವನೆ ಶಿಕ್ಷಾರ್ಹ ಅಪರಾಧ'

​ಪ್ರಜಾವಾಣಿ ವಾರ್ತೆ
Published 1 ಜೂನ್ 2013, 11:28 IST
Last Updated 1 ಜೂನ್ 2013, 11:28 IST

ಮೂಡಿಗೆರೆ: ತಂಬಾಕು ಸೇವನೆ ಮಾಡುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ ಎಂದು ಮೂಡಿಗೆರೆ ಪ್ರಧಾನ ಸಿವಿಲ್ ನ್ಯಾಯಾಧೀಶ ಪದ್ಮಪ್ರಸಾದ್ ತಿಳಿಸಿದರು. ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ತಂಬಾಕು ವಿರೋಧಿ ದಿನದ ಅಂಗವಾಗಿ ತಾಲ್ಲೂಕು ಕಾನೂನು ಸೇವಾ ಸಮಿತಿ, ತಾಲ್ಲೂಕು ವಕೀಲರ ಸಂಘ ಮತ್ತು ಪೊಲೀಸ್ ಇಲಾಖೆ ಶುಕ್ರವಾರ ಏರ್ಪಡಿಸಿದ್ದ ಉಚಿತ ಕಾನೂನು ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ತಂಬಾಕು ಸೇವನೆ ತನ್ನ ದೇಹವನ್ನು ಸುಡುವುದರ ಜತೆಗೆ ಜೀವನದ ನೆಮ್ಮದಿಯನ್ನು ಕೆಡಿಸುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ತಂಬಾಕು ಸೇವನೆಯಂತಹ ಕ್ರಮಗಳನ್ನು ಈಗಾಗಲೇ ನಿಷೇಧಿಸಿದ್ದು, ಸಾರ್ವಜನಿಕರು ತಮ್ಮ ದಿನನಿತ್ಯದ ಬದುಕಿನಲ್ಲಿ ತಂಬಾಕು ಸೇವನೆಯಂತಹ ದುಶ್ಚಟಗಳಿಂದ ದೂರವಾಗಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜತೆಗೆ ಕಾನೂನಿನ ಪಾಲನೆಗೆ ಸಹಕರಿಸಿದಂತಾಗುತ್ತದೆ ಎಂದರು.

ಮೂಡಿಗೆರೆ ಠಾಣಾಧಿಕಾರಿ ಸಂಕಪಯ್ಯ ಮಾತನಾಡಿ, ತಂಬಾಕು ಸೇವನೆ ಆರೋಗ್ಯಕ್ಕೆ ಅಪಾಯಕಾರಿಯಾಗಿದ್ದು, ಇಂದು ಯುವ ಜನತೆ ಇಂತಹ ಅಪಾಯಕಾರಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ದೇಶಕ್ಕೆ ಆಘಾತಕಾರಿಯಾಗಿದೆ. ಪೋಷಕರು ಮೊದಲು ತಂಬಾಕು ಸೇವನೆಯಂತಹ ದುಶ್ಚಟಗಳಿಂದ ದೂರ ಸರಿದರೆ ತಮ್ಮ ಮಕ್ಕಳನ್ನು ತಂಬಾಕು, ಮದ್ಯಪಾನದಂತಹ ದುಶ್ಚಟಗಳಿಂದ ದೂರ ಉಳಿಸಿಕೊಳ್ಳಲು ಸಹಾಯಕವಾಗುತ್ತದೆ ಎಂದರು. ತಂಬಾಕು ಸೇವನೆ ದೇಶಕ್ಕೆ ಮಾರಕವಾಗಿದ್ದು, ಸಮರ್ಪಕವಾಗಿ ನಿಯಂತ್ರಿಸದಿದ್ದರೆ ಭವಿಷ್ಯದ ಯುವಜನತೆಯ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದರು.

ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಎಚ್.ಎಂ. ಉಮೇಶ್, ವಕೀಲರಾದ ಬಿ.ಎ. ಸುರೇಶ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ರಾಮಚಂದ್ರ, ಸಹಾಯಕ ಠಾಣಾಧಿಕಾರಿ ತಿಮ್ಮೇಗೌಡ ಮುಂತಾದವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.