ADVERTISEMENT

ತೆಂಗಿನಕಾಯಿ ಬೆಲೆ ಗಗನಮುಖಿ!

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2017, 9:47 IST
Last Updated 13 ಡಿಸೆಂಬರ್ 2017, 9:47 IST
ಬಹುತೇಕ ತೆಂಗಿನ ಕಾಯಿಗಳು ಈ ರೀತಿಯಾಗಿವೆ.
ಬಹುತೇಕ ತೆಂಗಿನ ಕಾಯಿಗಳು ಈ ರೀತಿಯಾಗಿವೆ.   

ಬಾಲು ಮಚ್ಚೇರಿ 

ಕಡೂರು: ಬರಗಾಲದಿಂದ ತಾಲ್ಲೂಕಿನ ಬಹುತೇಕ ತೆಂಗಿನ ಮರಗಳು ಅವಸಾನಗೊಂಡಿದ್ದು, ತೆಂಗಿನಕಾಯಿ ಬೆಲೆ ಗಗನಮುಖಿಯಾಗಿದೆ. ದುಬಾರಿ ಬೆಲೆ ನೀಡಲಾಗದೆ ಗ್ರಾಹಕರು ಪರಿತಪಿಸಿದರೆ, ಮಾರಲು ತೆಂಗಿನಕಾಯಿಯೇ ಇಲ್ಲದೆ, ರೈತರು ನಿರಾಸೆಗೊಳಗಾಗಿದ್ದಾರೆ.

ಪ್ರತಿ ಸೋಮವಾರ ಕಡೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ನಡೆಯುವ ಸಂತೆಯಲ್ಲಿ ತೆಂಗಿನಕಾಯಿ ವ್ಯಾಪಾರ ಜೋರಾಗಿ ನಡೆಯುತ್ತಿತ್ತು. ಆದರೆ, ಈಗ ತೆಂಗಿನಕಾಯಿ ಮಾರಾಟ ತೀರಾ ಕುಸಿದಿದೆ. ಕಳೆದ ಅಕ್ಟೋಬರ್‌ ತನಕ 1 ಸಾವಿರ ತೆಂಗಿನ ಕಾಯಿಗೆ ₹ 8ರಿಂದ 9 ಸಾವಿರ ಬೆಲೆ ಸಿಗುತ್ತಿತ್ತು. ನೂರಕ್ಕೆ ಹತ್ತು ತೆಂಗಿನಕಾಯಿಗಳನ್ನು ವ್ಯಾಪಾರಿಗೆ ಲಾಭವನ್ನಾಗಿ ಕೊಡಬೇಕಿತ್ತು.

ADVERTISEMENT

ಆದರೆ, ಈಗ ಉತ್ತಮ ಗುಣಮಟ್ಟದ ತೆಂಗಿನಕಾಯಿ ಒಂದು ಸಾವಿರಕ್ಕೆ ₹ 14 ರಿಂದ 18 ಸಾವಿರದತನಕ ಬೆಲೆ ಇದೆ. ಮಾರಾಟ ಮಾಡಲು ರೈತರು ಬಂದರೂ ತೆಂಗಿನಕಾಯಿಗಳ ಸಂಖ್ಯೆ ತೀರಾ ಕಡಿಮೆ ಇದೆ. ಈ ಸೋಮವಾರದ ಸಂತೆಯಲ್ಲಿ ಮಾರಾಟವಾದ ತೆಂಗಿನಕಾಯಿಗಳ ಸಂಖ್ಯೆ ಕೇವಲ ನಾಲ್ಕು ಸಾವಿರ ಮಾತ್ರ. ಇದು ಈ ಪ್ರದೇಶದಲ್ಲಿರುವ ತೆಂಗಿನ ಬೆಳೆಯ ಪರಿಸ್ಥಿತಿಗೆ ನಿದರ್ಶನವಾಗಿದೆ.

ತೆಂಗಿನ ಕಾಯಿ ಇಳುವರಿ ಕುಂಠಿತವಾಗಿ ಮಾರುಕಟ್ಟೆಯಲ್ಲಿ ಸುಲಿದ ತೆಂಗಿನಕಾಯಿಗಳನ್ನು ತೂಕದ ಲೆಕ್ಕದಲ್ಲಿ ಮಾರಾಟ ಮಾಡುವ ಪದ್ಧತಿಯೂ ಇದ್ದು, ಕ್ವಿಂಟಲ್‌ಗೆ ₹ 2800 ರಿಂದ 3000 ದವರೆಗೆ ಇದೆ. ಇಲ್ಲಿ ರೈತರು ಲಾಭದ ತೆಂಗಿನಕಾಯಿ ನೀಡುವಂತಿಲ್ಲ. ಆದರೆ, ಒಳ್ಳೆಯ ಗುಣಮಟ್ಟದ ತೆಂಗಿನಕಾಯಿಯಾದರೆ ಒಂದು ಕಿಂಟಲ್‌ಗೆ 70 ರಿಂದ 75 ಕಾಯಿ ಬೇಕಾಗುತ್ತದೆ. ತೂಕದ ಲೆಕ್ಕದಲ್ಲಿ ಮಾರಾಟ ಮಾಡುವುದೇ ಹೆಚ್ಚು ಲಾಭದಾಯಕ ಎನಿಸಿದರೂ, ಹೆಚ್ಚು ಮಾರಾಟವಾಗುವುದು ಎಣಿಕೆ ಲೆಕ್ಕದಲ್ಲಿ ಎಂಬುದೇ ಅಚ್ಚರಿಯ ಸಂಗತಿಯಾಗಿದೆ.

ಇನ್ನು ಚಿಲ್ಲರೆ ಲೆಕ್ಕದಲ್ಲಿ ಒಂದು ತೆಂಗಿನಕಾಯಿಗೆ ₹ 19 ರಿಂದ 22 ತನಕ ಧಾರಣೆಯಿದ್ದು, ಗ್ರಾಹಕರ ಜೇಬಿಗೆ ಹೊರೆಯಾಗಿದೆ. ಇತ್ತ ಉತ್ತಮ ಬೆಲೆ ಇದ್ದರೂ ಮಾರಾಟ ಮಾಡಲು ತೆಂಗಿನಕಾಯಿ ಇಲ್ಲದೆ ರೈತರು ಪರಿತಪಿಸುತ್ತಿದ್ದಾರೆ. ಚಿಲ್ಲರೆ ಅಂಗಡಿಗಳಲ್ಲಿ 1 ತೆಂಗಿನಕಾಯಿಗೆ ₹ 18-20 ಬೆಲೆಯಿದೆ. ಸಣ್ಣ ಮತ್ತು ಮಧ್ಯಮ ತೆಂಗಿನ ಕಾಯಿಗೆ ₹ 13 ರಿಂದ 15 ತನಕ ಬೆಲೆಯಿದೆ. ತೆಂಗಿನ ಇಳುವರಿ ಕಡಿಮೆಯಾಗಿರುವುದರಿಂದ ಈ ಬಾರಿ ಕೊಬ್ಬರಿ ಉತ್ಪಾದನೆಯೂ ಕಡಿಮೆಯಾಗಿದ್ದು, ಮುಂದಿನ ದಿನಗಳಲ್ಲಿ ಕೊಬ್ಬರಿ ಬೆಲೆ ಏರಿದರೂ ಅದರ ಲಾಭ ರೈತರಿಗೆ ಸಿಗುವುದು ಮರಿಚೀಕೆಯಾಗಿಯೇ ಉಳಿಯಲಿದೆ ಎಂಬುದು ಬೆಳೆಗಾರರ ಆತಂಕ.

ಒಟ್ಟಾರೆಯಾಗಿ ಬರದ ಛಾಯೆಯಿಂದ ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ ತೆಂಗು ಬೆಳೆಗಾರರು ಕಂಗೆಟ್ಟಿದ್ದು, ಆರ್ಥಿಕವಾಗಿ ತೀರಾ ಕಂಗೆಟ್ಟು ಪರ್ಯಾಯ ಬೆಳೆಯತ್ತ ಮುಖಮಾಡಿದ್ದಾರೆ. ಮತ್ತೆ ತೆಂಗು ಬೆಳೆಯುವ ಉತ್ಸಾಹ ಬಹುತೇಕ ರೈತರಲ್ಲಿ ಇಲ್ಲ. ಅವರಲ್ಲಿ ಮತ್ತೆ ತೆಂಗು ಬೆಳೆಯುವ ಅಥವಾ ಪರ್ಯಾಯ ತೋಟಗಾರಿಕಾ ಬೆಳೆ ಬೆಳೆಯಲು ಪ್ರೇರೇಪಣೆ ಸಿಗಬೇಕಿದೆ ಎಂಬುದು ಹಿರಿಯ ರೈತರ ಅಭಿಪ್ರಾಯವಾಗಿದೆ.

ತೆಂಗು ಪುನಶ್ಚೇತನ

ತೆಂಗು ಪುನಶ್ಚೇತನಕ್ಕಾಗಿ ಇಲಾಖೆ ವತಿಯಿಂದ ಗಿಡಗಳನ್ನು ಉಚಿತವಾಗಿ ಮತ್ತು ರಿಯಾಯಿತಿ ದರದಲ್ಲಿ ಒದಗಿಸಲಾಗುತ್ತಿದೆ. ಸಖರಾಯಪಟ್ಟಣ ನರ್ಸರಿಯಲ್ಲಿ ನಾಲ್ಕು ಸಾವಿರ ತೆಂಗಿನ ಗಿಡಗಳನ್ನು ಉತ್ಪಾದಿಸಲಾಗಿದೆ. ತೆಂಗು ಪುನಶ್ಚೇತನಕ್ಕಾಗಿ ಒಂದು ಹೋಬಳಿಯಲ್ಲಿ ಒಂದು ಗ್ರಾಮವನ್ನು ಆಯ್ಕೆ ಮಾಡಿ ಪ್ರಾಯೋಗಿಕವಾಗಿ ತೆಂಗು ಗಿಡ ಹಾಕುವ ಕಾರ್ಯಕ್ರಮ ಪ್ರಗತಿಯಲ್ಲಿದೆ ಎಂದು ಕಡೂರಿನ ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ಸಿ. ಮಂಜುನಾಥ್ ಹೇಳಿದ್ದಾರೆ.

29,750 ಹೆಕ್ಟೇರ್ ತಾಲ್ಲೂಕಿನಲ್ಲಿರುವ ತೆಂಗು ಬೆಳೆ ಪ್ರದೇಶ
6,700 ಹೆಕ್ಟೇರ್ ನೀರಾವರಿ ತೆಂಗು ಬೆಳೆ ಪ್ರದೇಶ
14,579 ಹೆಕ್ಟೇರ್‌ನ ತೆಂಗು ಬಹುತೇಕ ನಾಶವಾಗಿದೆ
12,473 ಹೆಕ್ಟೇರ್ ಶೇ 50ಕ್ಕಿಂತ ಹೆಚ್ಚು ಹಾನಿಗೊಳಗಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.