ADVERTISEMENT

`ದೃಶ್ಯ ಮಾಧ್ಯಮದಿಂದ ಗಮಕ ಕಲೆ ಅವಸಾನ'

ಗಮಕ ಜಿಲ್ಲಾ ಸಮ್ಮಳನಾಧ್ಯಕ್ಷ ಎಸ್.ಎಲ್.ರಾಧಾಕೃಷ್ಣ ಆತಂಕ

​ಪ್ರಜಾವಾಣಿ ವಾರ್ತೆ
Published 22 ಜುಲೈ 2013, 9:24 IST
Last Updated 22 ಜುಲೈ 2013, 9:24 IST
ಕಳಸ ಸಮೀಪದ ಹೊರನಾಡಿನಲ್ಲಿ ಭಾನುವಾರ ನಡೆದ ಗಮಕ ಕಲಾ ಸಮ್ಮಳನವನ್ನು ಹೊರನಾಡಿನ ಜಿ.ಭೀಮೇಶ್ವರ ಜೋಷಿ ಮತ್ತು ಸಮ್ಮಳನಾಧ್ಯಕ್ಷ ಎಸ್.ಎಲ್.ರಾಧಾಕೃಷ್ಣ ಉದ್ಘಾಟಿಸಿದರು. ಜಿಲ್ಲಾ ಗಮಕ ಕಲಾ ಪರಿಷತ್ ಅಧ್ಯಕ್ಷ ರಾಮಸುಬ್ರಾಯ ಭಟ್, ಶಾಸಕ ಬಿ.ಬಿ. ನಿಂಗಯ್ಯ, ಸ್ವಾಗತ ಸಮಿತಿ ಅಧ್ಯಕ್ಷ ಡಾ.ಜೆ.ಪಿ ಕೃಷ್ಣೇಗೌಡ ಮತ್ತಿತರರು ಭಾಗವಹಿಸಿದ್ದರು.
ಕಳಸ ಸಮೀಪದ ಹೊರನಾಡಿನಲ್ಲಿ ಭಾನುವಾರ ನಡೆದ ಗಮಕ ಕಲಾ ಸಮ್ಮಳನವನ್ನು ಹೊರನಾಡಿನ ಜಿ.ಭೀಮೇಶ್ವರ ಜೋಷಿ ಮತ್ತು ಸಮ್ಮಳನಾಧ್ಯಕ್ಷ ಎಸ್.ಎಲ್.ರಾಧಾಕೃಷ್ಣ ಉದ್ಘಾಟಿಸಿದರು. ಜಿಲ್ಲಾ ಗಮಕ ಕಲಾ ಪರಿಷತ್ ಅಧ್ಯಕ್ಷ ರಾಮಸುಬ್ರಾಯ ಭಟ್, ಶಾಸಕ ಬಿ.ಬಿ. ನಿಂಗಯ್ಯ, ಸ್ವಾಗತ ಸಮಿತಿ ಅಧ್ಯಕ್ಷ ಡಾ.ಜೆ.ಪಿ ಕೃಷ್ಣೇಗೌಡ ಮತ್ತಿತರರು ಭಾಗವಹಿಸಿದ್ದರು.   

ಹೊರನಾಡು (ಕಳಸ): ದೃಶ್ಯ ಮಾಧ್ಯಮದ ಅತಿಯಾದ ಹಾವಳಿಯಿಂದಾಗಿ ಗಮಕ ಕಲೆ ನಶಿಸಿ ಹೋಗುತ್ತಿದೆ ಎಂದು ಹಿರಿಯ ಗಮಕ ಕಲಾವಿದ ಚಿಕ್ಕಮಗಳೂರಿನ ಎಸ್.ಎಲ್.ರಾಧಾಕೃಷ್ಣ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ಅನ್ನಪೂರ್ಣೇಶ್ವರೀ ದೇವಸ್ಥಾನದ ಆಶ್ರಯದಲ್ಲಿ ಕವಿ ಲಕ್ಷ್ಮೀಶ ವೇದಿಕೆಯಲ್ಲಿ ಭಾನುವಾರ ಆರಂಭಗೊಂಡ ಗಮಕ ಕಲಾ ಸಮ್ಮಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಾಚೀನ ಕಾಲದಿಂದಲೂ ಆಧ್ಯಾತ್ಮಿಕ ಮತ್ತು ಪೌರಾಣಿಕ ಅಂಶಗಳ ಮನನಕ್ಕೆ ಮಾಧ್ಯಮವಾಗಿದ್ದ ಗಮಕವನ್ನು ರಕ್ಷಿಸಬೇಕಾದ ಸ್ಥಿತಿಗೆ ಅದು ತಲುಪಿದೆ. ಗಮಕ ಕಲೆಯನ್ನು ಶಿಕ್ಷಣದಲ್ಲಿ ಅಳವಡಿಸಬೇಕು. ಜೊತೆಗೆ ಗಮಕ ಕಲಾ ಪ್ರಾಧಿಕಾರ ರಚಿಸಿದರೆ ಮಾತ್ರ ಈ ಅದ್ಭುತ ಕಲೆಯು ಉಳಿಯುತ್ತದೆ ಎಂದು ಅವರು ಕಾಳಜಿ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಸಮ್ಮಳನ ಉದ್ಘಾಟಿಸಿ ಮಾತನಾಡಿದ ಜಿ.ಭೀಮೇಶ್ವರ ಜೋಷಿ, ದೈವದತ್ತವಾಗಿ ಪ್ರಕಾಶಿಸುತ್ತಿದ್ದ ಗಮಕ ಕಲೆಯು ಆಧುನಿಕತೆಯ ಭರಾಟೆಯಲ್ಲಿ ಮರೆಯಾಗುತ್ತಿದೆ. ಕೆಲವೇ ಕೆಲವು ಹಿರಿಯರಿಂದ ಮಾತ್ರ ಉಳಿದಿರುವ ಗಮಕ ಕಲೆಯು ಮುಂದಿನ ಜನಾಂಗಕ್ಕೂ ಉಳಿಯಬೇಕಾಗಿದೆ. ಯೋಗದ ಹಾಗೆ ಗಮಕವನ್ನೂ ಶಿಕ್ಷಣದ ವಿಷಯವಾಗಿಸಿದರೆ ಗಮಕವನ್ನು ಉಳಿಸಬಹುದು ಎಂದರು.

ಪ್ರಾಸ್ತಾವಿಕ ಮಾತನಾಡಿದ ಗಮಕ ಕಲಾ ಪರಿಷತ್‌ನ ಜಿಲ್ಲಾಧ್ಯಕ್ಷ ರಾಮಸುಬ್ರಾಯ ಭಟ್, ಗಮಕಿಗಳೆಲ್ಲರೂ ಬೆಂಗಳೂರು ಸೇರಿರುವುದರಿಂದ ಗ್ರಾಮೀಣ ಪರಿಸರದಲ್ಲಿ ಗಮಕ ವಾಚನ ಬಹುತೇಕ ನಿಂತೇ ಹೋಗಿದೆ. ಗಮಕ ವಾಚನದ ಸಂಸ್ಕೃತಿ ಉಳಿಸಬೇಕು ಎಂದು ಜಿಲ್ಲೆಯ ನೂರಕ್ಕೂ ಹೆಚ್ಚು ಶಾಲೆಗಳಲ್ಲಿ ಗಮಕ ವಾಚನದ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದರು.

ಗಮಕ ಕಲಾ ಪ್ರಾಧಿಕಾರ ರಚಿಸುವ ಬಗ್ಗೆ ಮುಂಬರುವ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವುದಾಗಿ ಶಾಸಕ ಬಿ.ಬಿ.ನಿಂಗಯ್ಯ ಹೇಳಿದರು. ಆಶಾಕಿರಣ ಅಂಧಮಕ್ಕಳ ಶಾಲೆ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಶಶಿಕಲಾ ಶಿವಶಂಕರ ಗಮಕ ವಾಚನದಿಂದ ಸಮ್ಮಳನ ಆರಂಭಗೊಂಡಿತು.
ಹೊರನಾಡಿನ ಜಿ.ರಾಮನಾರಾಯಣ ಜೋಷಿ, ರಾಜಗೋಪಾಲ ಜೋಷಿ,ರಾಜಲಕ್ಷ್ಮಿ ಜೋಷಿ,ನರೇಂದ್ರ ಪೈ ಮತ್ತಿತರರು ಭಾಗವಹಿಸಿದ್ದರು. ಸಮ್ಮಳನದ ನೆನಪಿಗಾಗಿ ಬೆಳವಾಡಿ ಮಂಜುನಾಥ್ ಸಂಪಾದಕತ್ವದ `ಗಮಕ ವರ್ಷಿಣಿ' ಎಂಬ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.

ಹೊರನಾಡಿನ ಗ್ರಾಮೀಣಾಭಿವೃದ್ಧಿ ಯೋಜನೆಯಲ್ಲಿ ಶಾಲೆಗಳಿಗೆ ತಟ್ಟೆ ಲೋಟ ಹಾಗೂ ನೋಟ್ ಪುಸ್ತಕ ವಿತರಿಸಲಾಯಿತು. ರೈತರಿಗೆ ಉಚಿತ ತೆಂಗಿನ ಸಸಿ, ಸಪೋಟಾ ಗಿಡಗಳನ್ನು ಇದೇ ಸಂದರ್ಭಲ್ಲಿ ಹಂಚಲಾಯಿತು.

ಗಮಕ ವಾಚನಾ ಕ್ಷೇತ್ರದ ಸಾಧಕರಾದ ಕೆ.ಪಿ.ರತ್ನಾಕರ ಭಟ್, ಅನಸೂಯಮ್ಮ ವೆಂಕಟನಾರಾಯಣ, ಸತ್ಯನಾರಾಯಣ, ಪ್ರೇಮಾ ಕೋದಂಡರಾಮ್ ಶ್ರೇಷ್ಠಿ, ಬಿ.ಎಸ್.ಕೃಷ್ಣಮೂರ್ತಿ, ಶ್ರಿಲಕ್ಷ್ಮಿ ಮಂಜುನಾಥ್, ಕಡೂರು ಸೂರ್ಯನಾರಾಯಣ ಅವರನ್ನು ಸನ್ಮಾನಿಸಲಾಯಿತು.  ಪ್ರಭುಲಿಂಗ ಶಾಸ್ತ್ರಿ ಕಾರ್ಯಕ್ರಮ ನಿರ್ವಹಿಸಿದರು.

ನಂತರ ನಡೆದ ಗೋಷ್ಠಿಗಳಲ್ಲಿ ಎಸ್.ಎಲ್.ರಾಧಾಕೃಷ್ಣ, ಜಲಜಾರಾಜು, ಎಚ್.ಆರ್.ಕೇಶವಮೂರ್ತಿ,ಅಪರ್ಣಾ ಜಯರಾಮ್ ಗಮಕ ವಾಚನ ಮಾಡಿದರು. ರಾಮಸುಬ್ರಾಯ ಭಟ್, ಅನಂತಪದ್ಮನಾಭ ಅಡಿಗ, ಮಾರ್ಕಂಡೇಯ ಅವಧಾನಿ, ರತ್ನಾಕರ ಭಟ್ ವ್ಯಾಖ್ಯಾನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.