ADVERTISEMENT

ನಕ್ಸಲರು ಶರಣಾದರೆ ಸಹಾಯ

ಚಿಕ್ಕಮಗಳೂರು ಎಸ್ಪಿ ಆರ್‌.ಚೇತನ್‌ ಭರವಸೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2014, 10:27 IST
Last Updated 6 ಮಾರ್ಚ್ 2014, 10:27 IST

ಚಿಕ್ಕಮಗಳೂರು: ­ ಬಂದೂಕು ಕೆಳ­ಗಿಳಿಸಿ ಶಾಂತಿ­ಯುತ ಜೀವನ ನಡೆ­ಸಲು  ನಕ್ಸಲರು ಆಸೆ­ಪಟ್ಟರೆ ಪೊಲೀಸ್ ಇಲಾಖೆ ಅವರ ಬದುಕಿಗೆ ಸಹಾಯ ಮಾಡಲಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಆರ್.ಚೇತನ್ ಭರವಸೆ ನೀಡಿದ್ದಾರೆ.

ಈಗಾಗಲೇ ಜಿಲ್ಲೆಯಲ್ಲಿ ಹಾಗಲ­ಗಂಚಿ ವೆಂಕಟೇಶ, ಮಲ್ಲಿಕಾ, ಜಯ ಮತ್ತು ಕೋಮಲಾ ಅವರು ಶರಣಾ­ಗತರಾಗಿ ಜೀವನ ಸಾಗಿಸುತ್ತಿ­ದ್ದಾರೆ. ಅದೇ ರೀತಿ ಉಳಿದ ನಕ್ಸಲರು ಶರಣಾ­ಗತರಾಗಿ ಒಳ್ಳೆಯ ಜೀವನ ನಡೆಸುವು­ದಾದರೆ ಸರ್ಕಾರ ಎಲ್ಲ ರೀತಿಯ ಸಹಾಯ ಮಾಡಲಿದೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿ­ದರು.

ಫೆ.28 ರಂದು ಶೃಂಗೇರಿ ಬಳಿ ಯಲನಾಡು ಗ್ರಾಮದಲ್ಲಿ ಆನಂದ­ರಾಯರ ಮನೆಗೆ ಮುಂಡ­ಗಾರು ಲತಾ ಸೇರಿದಂತೆ ನಾಲ್ಕು ಮಂದಿ ನಕ್ಸಲೀ­ಯರು ಭೇಟಿ ನೀಡಿರುವ ಬಗ್ಗೆ ಪ್ರಕರಣ ವರದಿಯಾಗಿದೆ. ತಕ್ಷಣ ನಕ್ಸಲ್ ನಿಗ್ರಹ ದಳ ಸಹಯೋಗ­ದೊಂದಿಗೆ ನಕ್ಸಲೀ ಯರ ಪತ್ತೆಗೆ ತೀವ್ರ ಶೋಧ ನಡೆಸಲಾಯಿತು ಎಂದರು.

ಮಲೆನಾಡು ಭಾಗದಲ್ಲಿ ಅಡಿಕೆ ಮತ್ತು ಕಾಫಿ ಮಾರಾಟ ಮಾಡುವ ರೈತರಿಂದ ಬದುಕಿಗಾಗಿ ನಕ್ಸಲಿಯರು ಹಣ ಕೇಳಿ ಪಡೆದುಕೊಂಡು ಹೋಗು­ತ್ತಿದ್ದಾರೆ. ನಕ್ಸಲೀಯರು ಗ್ರಾಮಗಳಿಗೆ ಬಂದು ಹಣಕ್ಕೆ ಬೇಡಿಕೆ ಇಟ್ಟರೆ ಕೂಡಲೆ ಮಾಹಿತಿ ನೀಡುವಂತೆ ಮನವಿ ಮಾಡಿದರು. ಸ್ಥಳೀಯರು ನಕ್ಸಲರಿಗೆ ಈಗ ಸಹಾಯ ಮಾಡುತ್ತಿಲ್ಲ. ಹಾಗಾಗಿ ಅವರ ಕಾರ್ಯ ಯಶಸ್ವಿಯಾಗುತ್ತಿಲ್ಲ. ಬಂದೂಕು ಕೆಳಗಿಳಿಸಿ ಶಾಂತಿಯುತ ಜೀವನಕ್ಕೆ ಮುಂದಾದರೆ ಶರಣಾಗತಿ ಯೋಜನೆಯಡಿ ಸರ್ಕಾರ ಎಲ್ಲ ರೀತಿ ಸಹಾಯ ಮಾಡಲಿದೆ ಎಂದು ಅವರು ಹೇಳಿದರು.

ಬಿಡುಗಡೆ: ಶೃಂಗೇರಿ ಮತ್ತು ಕೊಪ್ಪ ತಾಲ್ಲೂಕಿನ ನಕ್ಸಲ್ ಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಸರ್ಕಾರ ತಲಾ ₨31ಲಕ್ಷ ಬಿಡುಗಡೆಗೊಳಿಸಿದೆ ಎಂದು ತಿಳಿಸಿದರು.

ಕಳೆದ 2012–13ನೇ ಸಾಲಿಗೆ ಕೊಪ್ಪ, ಶೃಂಗೇರಿ ಮತ್ತು ಮೂಡಿಗೆರೆ ತಾಲ್ಲೂಕಿಗೆ ತಲಾ ₨5 ಕೋಟಿ ಬಿಡುಗಡೆಯಾಗಿದೆ. 113 ಕೆಲಸ­ಗಳನ್ನು ಗುರುತಿಸಿ ಕೈಗೆತ್ತಿ­ಕೊಂಡಿದ್ದು, 74 ಕೆಲಸ ಪೂರ್ಣವಾಗಿವೆ ಎಂದರು.

ಕಾಮಗಾರಿಗಳು ಕಳಪೆಯಿಂದ ಕೂಡಿರುವ ದೂರುಗಳ ಕುರಿತು ಗಮನ ಸೆಳೆದಾಗ, ಕಳಪೆ ಕೆಲಸ­ವಾಗಿದ್ದರೆ ದೂರು ಸ್ವೀಕರಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.