ಕೊಪ್ಪ: ತಾಲ್ಲೂಕಿನಾದ್ಯಂತ ಉಡುಪಿ, ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆ ಮತದಾನ ಭಾನುವಾರ ಮಂದಗತಿಯಿಂದ ಶಾಂತಿಯುತವಾಗಿ ನಡೆಯಿತು.ತಾಲ್ಲೂಕಿನ ನಕ್ಸಲ್ ಪ್ರಭಾವಿತ ಪ್ರದೇಶಗಳಲ್ಲಿ ಕೇಂದ್ರೀಯ ಕೈಗಾರಿಕ ಭದ್ರತಾದಳ, ಗಡಿಭದ್ರತಾ ದಳ ಹಾಗೂ ಪೊಲೀಸರ ಬಿಗಿ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಅತಿ ಸೂಕ್ಷ್ಮ ಮತಗಟ್ಟೆಗಳಾದ ಮೆಣಸಿನಹಾಡ್ಯ, ಹೆಗ್ಗಾರು, ಹರಳಾನೆ, ಗೋಳು ಗೋಡು, ಕಿತ್ತಲಗುಳಿ, ಬೈರೇ ದೇವರು, ಕಲ್ಲುಗುಡ್ಡೆ ಮತಗಟ್ಟೆಗಳಲ್ಲಿ ಮಧ್ಯಾಹ್ನ 1 ಗಂಟೆ ವೇಳೆಗೆ ಶೇ.60ರಷ್ಟು ಮತದಾನವಾಗಿತ್ತು.
ತಾಲ್ಲೂಕಿನಲ್ಲಿ ಮತದಾನ ಆರಂಭ ವಾದ ಎರಡು ಗಂಟೆಯ ಅವಧಿಯಲ್ಲಿ ಕೇವಲ ಶೇ. 5ರಷ್ಟು ಮತದಾನವಾ ಗಿದ್ದರೆ, 12 ಗಂಟೆಗೆ ಶೇ. 25. 2 ಗಂಟೆ ವೇಳೆಗೆ ಶೇ.40ರಷ್ಟು ಮತದಾನ ವಾಗಿತ್ತು.
ಗೋಳುಗೋಡು ಮತಗಟ್ಟೆಯಲ್ಲಿ ಭದ್ರತಾ ಸಿಬ್ಬಂದಿ ಒರಟಾಗಿ ವರ್ತಿಸಿ ದರೆಂದು ಮತದಾರರು ದೂರಿದರು. ನುಗ್ಗಿ, ಬಿಂತ್ರವಳ್ಳಿ ಮೊದಲಾದ ಮತಗಟ್ಟೆಗಳಿಗೆ ಬಂದ ಹಲವು ಮತದಾರರಿಗೆ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದೆ ಮತ ಚಲಾಯಿಸಲಾಗಲಿಲ್ಲ.
ಪಟ್ಟಣದ ಪಟ್ಟಣ ಶಾಲೆ ಮತಗಟ್ಟೆ ಹಾಗೂ ಬೆಳವಿನಕೊಡಿಗೆ ಮತಗಟ್ಟೆಯಲ್ಲಿ ಗ್ರಾ.ಪಂ. ಒದಗಿಸಿದ ಗುರುತಿನ ಚೀಟಿ ಮಾನ್ಯ ಮಾಡದೆ ಕೆಲಕಾಲ ಗೊಂದಲ ಉಂಟಾಗಿತ್ತು. ಹೆದ್ದಸೆ ಮತಗಟ್ಟೆಯಲ್ಲಿ ಮತಯಂತ್ರದ ದೋಷದಿಂದ 1 ಗಂಟೆ ತಡವಾಗಿ ಮತದಾನ ಆರಂಭಗೊಂಡಿತು.
ತಾಲ್ಲೂಕಿನ 106 ಮತಗಟ್ಟೆಗಳಲ್ಲಿ 28,965 ಪುರುಷ ಹಾಗೂ 29,194 ಮಹಿಳೆ ಸೇರಿ ಒಟ್ಟು 58159 ಮತದಾರರು ಮತದಾನದ ಅವಕಾಶ ಹೊಂದಿದ್ದರು. ಸುಡುಬಿಸಿಲು ಲೆಕ್ಕಿಸದೆ ಮತಗಟ್ಟೆಗೆ ಮತದಾರರು ಮತ ಚಲಾವಣೆಗೆ ಆಗಮಿಸಿದ್ದುದು ಕಂಡು ಬಂತು. ಪ್ರಮುಖ ರಾಜಕೀಯ ಪಕ್ಷಗಳ ಬೆರಳೆಣಿಕೆ ಕಾರ್ಯಕರ್ತರು ಮತಗಟ್ಟೆ ಬಳಿ ಓಡಾಡುತ್ತಿದ್ದುದು ಸರ್ವೆ ಸಾಮಾನ್ಯವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.