ADVERTISEMENT

ನಿರ್ಮಾಣ ಹಂತದಲ್ಲೇ ಕುಸಿದ ತ್ಯಾಜ್ಯ ಘಟಕ

ಅವೈಜ್ಞಾನಿಕ ಕಾಮಗಾರಿ, ಕಳಪೆಯ ಆರೋಪ: ಜನರ ತೀವ್ರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 21 ಮೇ 2018, 12:25 IST
Last Updated 21 ಮೇ 2018, 12:25 IST
ಮೂಡಿಗೆರೆ ಬಸ್‌ ನಿಲ್ದಾಣದ ಆವರಣದಲ್ಲಿ ನಿರ್ಮಿಸುತ್ತಿರುವ ಶೌಚಾಲಯ ತ್ಯಾಜ್ಯ ಸಂಗ್ರಹ ಘಟಕವು ಕುಸಿದು ಬಿದ್ದಿದೆ.
ಮೂಡಿಗೆರೆ ಬಸ್‌ ನಿಲ್ದಾಣದ ಆವರಣದಲ್ಲಿ ನಿರ್ಮಿಸುತ್ತಿರುವ ಶೌಚಾಲಯ ತ್ಯಾಜ್ಯ ಸಂಗ್ರಹ ಘಟಕವು ಕುಸಿದು ಬಿದ್ದಿದೆ.   

ಮೂಡಿಗೆರೆ: ಪಟ್ಟಣದ ಬಸ್‌ ನಿಲ್ದಾಣದ ಆವರಣದಲ್ಲಿ ನಿರ್ಮಿಸುತ್ತಿರುವ ಶೌಚಾಲಯ ತ್ಯಾಜ್ಯ ಸಂಗ್ರಹ ಘಟಕವು ನಿರ್ಮಾಣ ಹಂತದಲ್ಲಿಯೇ ಭಾನುವಾರ ಕುಸಿದು ಬಿದ್ದಿದೆ.

ಬಸ್‌ ನಿಲ್ದಾಣದ ಶೌಚಾಲಯ ತ್ಯಾಜ್ಯ ಸಂಗ್ರಹಕ್ಕಾಗಿ, ಶೌಚಾಲಯದ ಪಕ್ಕದಲ್ಲಿಯೇ ಬೃಹತ್‌ ಗುಂಡಿಯನ್ನು ನಿರ್ಮಿಸಿ, ಇಟ್ಟಿಗೆ, ಕಬ್ಬಿಣದ ಸಲಾಖೆ ಬಳಸಿ ಗುಂಡಿಯ ಒಳಾಂಗಣದ ಕಾಮಗಾರಿ ನಡೆಸಲಾಗುತ್ತಿತ್ತು. ಆದರೆ, ನಿರ್ಮಾಣಕ್ಕೂ ಪೂರ್ವದಲ್ಲಿಯೇ ಕಾಮಗಾರಿ ಕುಸಿದು ಬಿದ್ದಿದ್ದು, ಅವೈಜ್ಞಾನಿಕವಾಗಿ ಕಾಮಗಾರಿ ನಡೆಸುತ್ತಿರುವುದೇ ಕುಸಿತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಬಸ್‌ ನಿಲ್ದಾಣದ ಶೌಚಾಲಯದ ಪಕ್ಕದಲ್ಲಿಯೇ ಹಳೇ ಗುಂಡಿಯಿದೆ. ಆದರೆ ಹಳೇ ಗುಂಡಿ ಚಿಕ್ಕದಾಗಿರುವುದರಿಂದ ಬಹುಬೇಗ ಭರ್ತಿಯಾಗಿ, ಹೊಯ್ಸಳ ಕ್ರೀಡಾಂಗಣದ ಒಳಚರಂಡಿಗೆ ತ್ಯಾಜ್ಯ ಹರಿಯ ತೊಡಗುತ್ತದೆ. ಇದರಿಂದ ಅಕ್ಕಪಕ್ಕದ ನಿವಾಸಿಗಳಿಗೆ, ಹೊಯ್ಸಳ ಕ್ರೀಡಾಂಗಣದಲ್ಲಿ ವಾಯುವಿಹಾರ ನಡೆಸುವವರಿಗೆ ಹಾಗೂ ಬಸ್‌ ನಿಲ್ದಾಣದ ಪಕ್ಕದಲ್ಲಿರುವ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು, ಮಳೆಗಾಲ ಪ್ರಾರಂಭವಾದರೆ ದುರ್ನಾತ ಬೀರತೊಡಗುತ್ತದೆ. ಈ ಸಮಸ್ಯೆ ತಪ್ಪಿಸುವ ಸಲುವಾಗಿ, ಶೌಚಾಲಯದ ಪಕ್ಕದಲ್ಲಿಯೇ ನೂತನ ಗುಂಡಿಯಲ್ಲಿ, ತ್ಯಾಜ್ಯ ಸಂಗ್ರಹಿಸಲು ಘಟಕ ನಿರ್ಮಿಸಲಾಗುತ್ತಿತ್ತು. ಆದರೆ ಅದರ ಕಾಮಗಾರಿ ಕುಸಿದಿರುವುದರಿಂದ ಕಾಮಗಾರಿ ಸ್ಥಗಿತಗೊಳಿಸಲಾಗಿದ್ದು, ಇನ್ನಷ್ಟು ದಿನಗಳ ಕಾಲ ಬಸ್‌ ನಿಲ್ದಾಣದ ಅಕ್ಕಪಕ್ಕದಲ್ಲಿರುವ ನಿವಾಸಿಗಳು ಹಾಗೂ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಬದುಕಬೇಕಾದ ಸ್ಥಿತಿ ಬಂದಿದೆ.

ADVERTISEMENT

ಕಳೆದ ಐದು ವರ್ಷಗಳ ಹಿಂದೆ ಈ ಶೌಚಾಲಯಕ್ಕೆ ಪಟ್ಟಣ ಪಂಚಾಯಿತಿಯು ಬೀಗ ಜಡಿದಿದ್ದ ವೇಳೆ ಶೌಚಾಲಯದ ತ್ಯಾಜ್ಯವನ್ನು ತತ್ಕೊಳ ರಸ್ತೆಯಲ್ಲಿ ನಿರ್ಜನವಾಗಿರುವ ಖಾಸಗೀ ಪ್ರದೇಶಕ್ಕೆ ಸ್ಥಳಾಂತರಿಸುವ ಯೋಜನೆ ರೂಪಿಸಲಾಗಿತ್ತು. ಆದರೆ ಆ ಪ್ರಸ್ತಾಪವನ್ನು ಕೈ ಬಿಟ್ಟು ಇದೀಗ ಬಸ್‌ ನಿಲ್ದಾಣದಲ್ಲಿಯೇ ತ್ಯಾಜ್ಯ ಸಂಗ್ರಹ ಘಟಕವನ್ನು ನಿರ್ಮಿಸುತ್ತಿದ್ದು, ಕೂಡಲೇ ಕಾಮಗಾರಿಯನ್ನು ಪೂರ್ಣಗೊಳಿಸಿ, ಪ್ರಯಾಣಿಕರು ಹಾಗೂ ಸ್ಥಳೀಯರಿಗಾಗುತ್ತಿರುವ ಸಮಸ್ಯೆಯನ್ನು ನಿವಾರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.