ADVERTISEMENT

ನಿವೇಶನ ಹಂಚಿಕೆ ತಾರತಮ್ಯ ಪ್ರತಿಭಟನೆ

ಅಜ್ಜಂಪುರ: ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಸಂಸದ ಹೆಗ್ಡೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2012, 9:07 IST
Last Updated 26 ಡಿಸೆಂಬರ್ 2012, 9:07 IST

ಅಜ್ಜಂಪುರ: ಭ್ರಷ್ಟಾಚಾರ, ರೆಸಾರ್ಟ್ ರಾಜಕಾರಣ, ಭೂಮಾಫಿಯ, ಗಣಿ ಮಾಫಿಯಾ, ಸ್ವಜನ ಪಕ್ಷಪಾತಕ್ಕೆ ಹೆಸರಾಗಿರುವ ಬಿಜೆಪಿ ಸರ್ಕಾರದ ವಿರುದ್ಧ ಜನ ಹೊಂದಿರುವ ಭಾವನೆಗಳನ್ನು ಕಾಂಗ್ರೆಸ್ ಮತಗಳಾಗಿ ಪರಿವರ್ತಿಸಿ, ಪಕ್ಷ ಅಧಿಕಾರಕ್ಕೆ ಬರಲು ಶ್ರಮಿಸುವಂತೆ ಕಾರ್ಯಕರ್ತರಿಗೆ ಸಂಸದ ಜಯಪ್ರಕಾಶ್ ಹೆಗ್ಡೆ ಕರೆ ನೀಡಿದರು.

ಅಜ್ಜಂಪುರದ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ತರೀಕೆರೆ ಮತ್ತು ಬ್ಲಾಕ್ ಕಾಂಗ್ರೆಸ್ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶೋಷಿತರು, ರೈತಸಮುದಾಯವನ್ನು ರಾಷ್ಟ್ರದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಕಾರ್ಯಕರ್ತರು ಮನೆ ಮನೆಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಮುಂಬರುವ ದಿನಗಳಲ್ಲಿ ಕಾರ್ಯಕರ್ತರನ್ನು ಚುರುಕು ಗೊಳಿಸಲು ಚಿಂತನ-ಮಂಥನ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಪಡಿತರಚೀಟಿ, ನಿವೇಶನ ಹಂಚಿಕೆಯಲ್ಲಿ  ಜನಸಾಮಾನ್ಯರಿಗೆ ಆಗುತ್ತಿರುವ ತಾರತಮ್ಯದ ವಿರುದ್ಧ ಪ್ರತಿಭಟಿಸಿ, ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದು ವಿಧಾನಪರಿಷತ್ ಸದಸ್ಯೆ ಮೋಟಮ್ಮ ಹೇಳಿದರು.

ಪಕ್ಷದ ಮುಖಂಡರು ಗೊಂದಲ ಮೂಡಿಸುವ ಕೆಲಸ ಬಿಟ್ಟು, ಯಾರಿಗೆ ಟಿಕೆಟ್ ದೊರಕಿದರೂ ಪಕ್ಷಕ್ಕಾಗಿ ದುಡಿ ಯುವ ಮೂಲಕ ಬದ್ಧತೆ ವ್ಯಕ್ತಪಡಿಸ ಬೇಕೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್. ಮೂರ್ತಿ  ಹೇಳಿದರು.

  ಟಿ.ವಿ. ಶಿವಶಂಕರಪ್ಪ ಮಾತನಾಡಿ, ಭದ್ರಾ ಮೇಲ್ದಂಡೆಯ 2ನೇ ಹಂತದ ಕಾಮಗಾರಿ ಆರಂಭವಾಗದಿರುವಾಗ 3ನೇ ಹಂತದ ಯೋಜನೆಗೆ ಸಂಬಂಧಿಸಿದ ರೈತರಿಗೆ ನೊಟೀಸ್ ಜಾರಿಗೊಳಿಸಿ ರುವುದನ್ನು ತಡೆಹಿಡಿಯಲು ಜಿಲ್ಲಾಧಿಕಾ ರಿಗಳನ್ನು ಒತ್ತಾಯಿಸುವಂತೆ ಸಂಸದರಿಗೆ ಮನವಿ ಮಾಡಿದರು.

ಮಾಜಿ ಶಾಸಕರಾದ ಟಿ.ಎಚ್.ಶಿವಶಂಕರಪ್ಪ ಕಾಂಗ್ರೆಸ್ ಸಿದ್ಧಾಂತ, ವಿಚಾರಧಾರೆ,  ಅಭಿವೃದ್ಧಿಪರ ಧೋರಣೆ ಗಳನ್ನು ಯುವಜನರಿಗೆ ಮನವರಿಕೆ ಮಾಡುವ ಮೂಲಕ, ಅವರನ್ನು ಪಕ್ಷದತ್ತ ವಾಲುವಂತೆ ಮಾಡ ಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದ್ರುವಕುಮಾರ್, ಮಾಜಿ ಶಾಸಕ ಎಸ್.ಎಂ.ನಾಗರಾಜ್, ನೀಲಕಂಠಪ್ಪ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಶ್ರೀನಿವಾಸ್, ಜಿ.ಪಂ.ಮಾಜಿ ಅಧ್ಯಕ್ಷ ಎಸ್.ತಿಪ್ಪೇರುದ್ರಯ್ಯ, ಕೆಪಿಸಿಸಿ ಸದಸ್ಯ ಡಾ.ಮರುಳಸಿದ್ದಪ್ಪ, ಗ್ರಾ.ಪಂ.ಅಧ್ಯಕ್ಷೆ ಅನ್ನಪೂರ್ಣಮ್ಮ, ಮುಖಂಡರಾದ ಲೋಹಿತ್ ಮತ್ತು ಹಲವು ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.