ಅಜ್ಜಂಪುರ: ಶಿವನಿ ಹೋಬಳಿಯ ಕೃಷಿ ಭೂಮಿಗೆ ಶಾಶ್ವತ ನೀರಾವರಿ ಕಲ್ಪಿಸದ ಹೊರತು ಹೋಬಳಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಕೈಗೊಳ್ಳಲು ಅವಕಾಶ ನೀಡಬಾರದು. ಈ ಸಂಬಂಧ ಶಾಂತಿಯುತ ಹೋರಾಟ, ಜೈಲ್ ಭರೋ ಚಳುವಳಿಗೂ ಸಿದ್ಧರಾಗಬೇಕು ಎಂಬ ತೀರ್ಮಾನವನ್ನು ಬುಕ್ಕಾಂಬುಧಿ-ಶಿವನಿ ಭಾಗದ ರೈತರು ಕೈಗೊಂಡರು.
 
 ಸಮೀಪದ ಜಲಧಿಹಳ್ಳಿ ಗ್ರಾಮದ ಬಸವೇಶ್ವರ ಸ್ವಾಮಿ ದೇವಾಲಯದ ನೂತನ ಕಟ್ಟಡ ಗೃಹಪ್ರವೇಶದ ತಿಂಗಳ ಪೂಜೆ ಸಂದರ್ಭದಲ್ಲಿ, ಗ್ರಾಮದ ಶಂಕರಲಿಂಗೇಶ್ವರ ದೇವಾಲಯದ ಆವರಣದಲ್ಲಿ  ಭದ್ರಾ ಮೇಲ್ದಂಡೆ ಸಾಧಕ-ಬಾಧಕದ ಕುರಿತು ಸೋಮವಾರ ಎರಡನೇ ಬಾರಿ ಸಭೆ ಸೇರಿದ ರೈತರು ನಿರ್ಧಾರ ಕೈಗೊಂಡರು.
 
 ಚಿತ್ರದುರ್ಗ, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಿಗೆ ನೀರೊದಗಿಸುವ ಸರ್ಕಾರದ ಭದ್ರಾ ಮೇಲ್ದಂಡೆ ಯೋಜನೆಯಿಂದ ತಾಲ್ಲೂಕಿನ ಶಿವನಿ, ಅಜ್ಜಂಪುರ, ಅಮೃತಾಪುರ ಹೋಬಳಿಗಳ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಈಗಾಗಲೇ ಮಳೆಯ ಪ್ರಮಾಣದಲ್ಲಾಗಿರುವ ಇಳಿಕೆಯಿಂದ ಕೆರೆ ಕಟ್ಟೆಗಳು ಬರಿದಾಗಿದ್ದು, ಕೊಳವೆ ಬಾವಿಗಳು ಬತ್ತಿವೆ, ಕುಡಿಯುವ ನೀರಿಗೂ ತತ್ವಾರವಾಗಿದೆ. ಇಲ್ಲಿನ ಪ್ರಮುಖ ಬೆಳೆ ಅಡಿಕೆ ಒಣಗಿದ್ದು, ಮರ ಕಡಿದು ಹಾಕುವ ಅನಿವಾರ್ಯತೆಯೊದಗಿದೆ. ರೈತರು ಒಂದಾಗಿ ಇಂತಹ ಯೋಜನೆ ಅನುಷ್ಟಾನಗೊಳ್ಳುವ ಮೊದಲು, ಈ ಭಾಗಕ್ಕೆ ನೀರಾವರಿ ಒದಗಿಸುವ ಬಗ್ಗೆ ಸರ್ಕಾರ ಅಧಿಕೃತ ಆದೇಶ ಹೊರಡಿಸಬೇಕು ಎಂಬ ಒತ್ತಾಯ ಹೊರಹೊಮ್ಮಿತು.
 
 ಯೋಜನೆಯ ಸುರಂಗ ಮಾರ್ಗ ನಿರ್ಮಾಣದಿಂದ ಅಂತರ್ಜಲ ಮಟ್ಟ ಸಂಪೂರ್ಣ ಬಸಿದು ಭೂಮಿ ಬರಡಾಗಲಿದೆ. ಸರ್ಕಾರ ಹೊರ ಜಿಲ್ಲೆಗಳಿಗೆ ನೀರೊದಗಿಸುವ ಹೆಸರಿನಲ್ಲಿ ತಾಲ್ಲೂಕಿನ ರೈತರನ್ನು ಸಂಕಷ್ಟಕ್ಕೀಡು ಮಾಡುತ್ತಿದೆ. ಇದರಿಂದ ಲಕ್ಷಾಂತರ ರೂಪಾಯಿ ಸಾಲ ಮಾಡಿ ತೋಟ ನಿರ್ವಹಣೆ ಮಾಡಿರುವ ರೈತರು ಆತ್ಮಹತ್ಯೆ ಹಾಗೂ ಮಂದೆ ರೈತರು ಕೃಷಿಯಿಂದ ವಿಮುಖವಾಗುವಂತಾಗಿದೆ. ಸರ್ಕಾರ ಇಲ್ಲಿನ ರೈತರ ಸಮಸ್ಯೆಯ ಗಂಬೀರತೆ ಅರಿಯಬೇಕು, ಯೋಜನೆ ಜಾರಿಗೊಳಿಸುವ ಮೊದಲು ಈ ಭಾಗದ ಕೆರೆ, ಕಟ್ಟೆಗಳನ್ನು ತುಂಬಿಸಬೇಕು ಹಾಗೂ ಕೃಷಿ ಭೂಮಿಗೆ ಸಂಪೂರ್ಣ ನೀರಾವರಿ ಒದಗಿಸಬೇಕು. ಇಲ್ಲದಿದ್ದರೆ ಈ ಭಾಗದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ನಡೆಸಲು ಅವಕಾಶ ನೀಡಬಾರದೆಂಬ ನಾಯಕರ ನಿಲುವಿಗೆ ರೈತರು ಜೈಕಾರ ಹಾಕುವ ಮೂಲಕ ಬೆಂಬಲ ವ್ಯಕ್ತಪಡಿದಿದರು.
 
 ಹೋರಾಟ ಸಮಿತಿ ಪರವಾಗಿ ಅಮೃತಾಪುರದ ವಿ.ಎಸ್.ಈಶ್ವರಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ರಾಜ್‌ಕುಮಾರ್, ಹೊಸಹಳ್ಳಿ ಚಂದ್ರಪ್ಪ, ಚಿಕ್ಕಾನವಂಗಲದ ವಿರೂಪಾಕ್ಷಪ್ಪ, ಜಲಧಿ ಹಳ್ಳಿ ಗ್ರಾಮಸ್ಥರು, ರೈತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.