ADVERTISEMENT

ನ್ಯಾಯಾಧೀಶರ ಕೊರತೆ: ನ್ಯಾಯದಾನ ವಿಳಂಬ

​ಪ್ರಜಾವಾಣಿ ವಾರ್ತೆ
Published 22 ಜೂನ್ 2011, 9:20 IST
Last Updated 22 ಜೂನ್ 2011, 9:20 IST

ನರಸಿಂಹರಾಜಪುರ: ಇಲ್ಲಿನ ಜೆಎಂಎಫ್‌ಸಿ  ಮತ್ತು ಸಿವಿಲ್ ನ್ಯಾಯಾಲಯದಲ್ಲಿ  ತಿಂಗಳಿನಿಂದ ನ್ಯಾಯಾಧೀಶರಿಲ್ಲದೆ ವಕೀಲರು ಸೇರಿದಂತೆ ಕಕ್ಷಿದಾರರು ತೀವ್ರ ತೊಂದರೆ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕಕ್ಷಿದಾರರು ತಿಳಿಸಿದ್ದಾರೆ.

ಈ ಹಿಂದೆ ಇಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದ  ಎಸ್. ಶ್ರೀಧರ್ ಅವರನ್ನು ಕೆ.ಆರ್.ಪೇಟೆಗೆ ವರ್ಗಾವಣೆ ಮಾಡಿದ ಮೇಲೆ ಇಲ್ಲಿಗೆ ಬೇರೆ ನ್ಯಾಯಾಧೀಶರ ನೇಮಕವಾಗಿಲ್ಲ. ಅಲ್ಲದೆ ಕೊಪ್ಪ ಮತ್ತು ಶೃಂಗೇರಿ ನ್ಯಾಯಾಲಯದ ನ್ಯಾಯಾಧೀಶರು ತರಬೇತಿಗೆ ಹೋಗಿರುವುದರಿಂದ ಎನ್.ಆರ್.ಪುರ ನ್ಯಾಯಾಲಯದ ಜತೆಗೆ ಈ ಎಲ್ಲಾ ನ್ಯಾಯಾಲಯದ ಉಸ್ತುವಾರಿಯನ್ನು ಚಿಕ್ಕಮಗಳೂರಿನ ನ್ಯಾಯಾಧೀಶರಿಗೆ ವಹಿಸಲಾಗಿದೆ. ಈ ಮೂರು ನ್ಯಾಯಾಲಯದಲ್ಲಿನ ಮೊಕದ್ದಮೆಗಳ ವಿಚಾರಣೆಯನ್ನು ಕೊಪ್ಪ ನ್ಯಾಯಾಲಯದಲ್ಲಿ ಗುರುವಾರ, ಶುಕ್ರವಾರ ಮತ್ತು ಶನಿವಾರ ನಡೆಸುವುದರಿಂದ ಅಲ್ಲಿಗೆ ವಕೀಲರು ಮತ್ತು ಕಕ್ಷಿದಾರರು ಹೋಗಬೇಕಾಗಿದೆ. ಅಲ್ಲದೆ ಸೋಮವಾರ, ಮಂಗಳವಾರ ಮತ್ತು ಬುಧವಾರ ಕಕ್ಷಿದಾರರು ಚಿಕ್ಕಮಗಳೂರಿಗೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಇದರಿಂದಾಗಿ ವಯೋವೃದ್ಧ ಕಕ್ಷಿದಾರರು ,ಮಹಿಳಾ ಕಕ್ಷಿದಾರರು ದೂರದ ನ್ಯಾಯಾಲಗಳಿಗೆ ಹೋಗಬೇಕಾಗಿರುವುದರಿಂದ ತೊಂದರೆಯಾಗಿದೆ. ಸ್ಥಳೀಯ ನ್ಯಾಯಾಲಯದಲ್ಲಿ ನ್ಯಾಯಾಧೀಶರಿಲ್ಲದ ಕಾರಣ ಸಾಕ್ಷಿದಾರರು ಸಾಕ್ಷಿಹೇಳಲು ಬೇರೆಡೆ ಬರಲು ಒಪ್ಪುವುದಿಲ್ಲ. ಇದರಿಂದ ಮೊಕದ್ದಮೆ ನಡೆಸಲು ಸಾಕಷ್ಟು ಸಮಸ್ಯೆಯಾಗಿದೆ ಎಂದು ವಕೀಲರೊಬ್ಬರು ತಿಳಿದ್ದಾರೆ. ತುರ್ತು ಸಂದರ್ಭಗಳಲ್ಲೂ ಕಕ್ಷಿದಾರರಿಗೆ ತೊಂದರೆಯಾಗುತ್ತಿದೆ.

ADVERTISEMENT

ಪ್ರಜಾವಾಣಿಯೊಂದಿಗೆ ಮಾತನಾಡಿದ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಸ್.ಸಂತೋಷ್ ಕುಮಾರ್ ನ್ಯಾಯಾಧೀಶರಿಲ್ಲದ ಕಾರಣ ಕಕ್ಷಿದಾರರಿಗೆ ತೊಂದರೆಯಾಗಿದ್ದು ನ್ಯಾಯಧೀಶರನ್ನು ನೇಮಕ ಮಾಡುವತ್ತ ಗಮನಹರಿಸ ಬೇಕೆಂದು ಒತ್ತಾಯಿಸಿದರು.

ಸಂಬಂಧಪಟ್ಟವರು ಇತ್ತ ಗಮನಹರಿಸಿ ಕೂಡಲೇ ನ್ಯಾಯಾಧೀಶರನ್ನು ನೇಮಕ ಮಾಡುವುದರ ಮೂಲಕ ಆಗುತ್ತಿರುವ ತೊಂದರೆ ತಪ್ಪಿಸಬೇಕೆಂದು ಕಕ್ಷಿದಾರರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.