ADVERTISEMENT

ಪುಟ್ಟ ಗ್ರಾಮದಲ್ಲಿ ಬೆಟ್ಟದಷ್ಟು ಸಮಸ್ಯೆ

ಉಮೇಶ್ ಕುಮಾರ್.ಜೆ.ಓ
Published 20 ನವೆಂಬರ್ 2017, 7:24 IST
Last Updated 20 ನವೆಂಬರ್ 2017, 7:24 IST
ಅಜ್ಜಂಪುರ ಸಮೀಪ ಬೆಣಕುಣಸೆ ಗ್ರಾಮದಲ್ಲಿ ತ್ಯಾಜ್ಯ ತುಂಬಿದ ಚರಂಡಿಗಳು.
ಅಜ್ಜಂಪುರ ಸಮೀಪ ಬೆಣಕುಣಸೆ ಗ್ರಾಮದಲ್ಲಿ ತ್ಯಾಜ್ಯ ತುಂಬಿದ ಚರಂಡಿಗಳು.   

ಅಜ್ಜಂಪುರ: ಗ್ರಾಮವನ್ನು ಸಂಪರ್ಕಿಸಲು ಕಿರಿದಾದ ರಸ್ತೆ, ಗ್ರಾಮದೊಳಗೆ ತಗ್ಗು-ಏರಿಗಳ ರಸ್ತೆಗಳು, ಚರಂಡಿಗಳಿದ್ದರೂ, ಕಸ-ಕಡ್ಡಿ ಕಟ್ಟಿ ಹರಿಯದ ಕೊಳಚೆ ನೀರು, ಗ್ರಾಮದ ಒಳ-ಹೊ ಭಾಗದಲ್ಲೂ ಸ್ವಚ್ಛತೆ ಕೊರತೆ.. ನೀರಿದ್ದು-ಬಳಕೆಯಾಗದೇ ಅನುಪಯುಕ್ತವಾಗುವ ನೀರು... ಇವು ಪಟ್ಟಣ ಸಮೀಪ ಬೆಣಕುಣಸೆ ಗ್ರಾಮಕ್ಕೆ ಕಾಲಿಟ್ಟವರಿಗೆ ಕಾಣಬರುವ ದೃಶ್ಯಗಳು.

ಸುಮಾರು 50 ಮನೆಗಳ 200-240 ಜನಸಂಖ್ಯೆ ಹೊಂದಿರುವ ಚಿಕ್ಕ ಗ್ರಾಮ ಬೆಣಕುಣಸೆಗೆ ಬಸ್ ಸೌಕರ್ಯವಿಲ್ಲ. ಪ್ರಮುಖ ಪಟ್ಟಣಗಳಿಗೆ ಸಾಗಬೇಕಾದರೆ ಬಸ್ ಅಥವಾ ಆಟೊದಲ್ಲಿ ಹೋಗಬೇಕು. ಅದು ಗ್ರಾಮದಿಂದ ಮುಗುಳಿ ಸಂಪರ್ಕಿಸುವ ಮುಖ್ಯರಸ್ತೆಗೆ 1 ಕಿಮೀ ಕಾಲ್ನಡಿಗೆಯಲ್ಲಿ ಸಾಗಿ ನಂತರ ಬಸ್‌ಗೆ ಹೋಗಬೇಕು.

’ಗ್ರಾಮವನ್ನು ತಮ್ಮಟದಹಳ್ಳಿ-ಶಿವನಿ ಆರ್‍ಎಸ್ ಸಂಪರ್ಕಿಸುವ 1ಕಿಮೀ ಮುಖ್ಯ ರಸ್ತೆ ಕಿರಿದಾಗಿದ್ದು, ಕೇವಲ ಒಂದು ವಾಹನ ಮಾತ್ರ ಸಂಚರಿಸಬಹುದು ಅಷ್ಟೇ. ಎದುರಿನಿಂದ ಬರುವ ವಾಹನಗಳಿಗೆ ಸ್ಥಳವಕಾಶ ನೀಡುವಷ್ಟು ಜಾಗವಿಲ್ಲ. ಇದರಿಂದ ಹಲವು ಬಾರಿ ಟ್ಯಾಕ್ಟರ್ ಸೇರಿದಂತೆ ಹಲವು ವಾಹನಗಳು ಪಲ್ಟಿಯಾಗಿವೆ. ಇದಕ್ಕೆ ಶನಿವಾರ ರಸ್ತೆ ಪಕ್ಕದ ಗುಂಡಿಗೆ ಮಗುಚಿಬಿದ್ದ ಸಿದ್ದರಾಮೇಶ್ವರ ಶಾಲಾ ವಾಹನ ಹೊಸ ಸೇರ್ಪಡೆ ಅಷ್ಟೇ’ ಎಂಬುದು ಗ್ರಾಮಸ್ಥ ಜಯಣ್ಣನ ಹೇಳಿಕೆ.

ADVERTISEMENT

‘ಗ್ರಾಮದಿಂದ ಕೇವಲ ಒಂದೂವರೆ ಕಿಮೀ ಅಂತರದಲ್ಲಿಯೇ ಗ್ರಾಮ ವ್ಯಾಪ್ತಿಯ ಮುಗುಳಿ ಗ್ರಾಮ ಪಂಚಾಯಿತಿ ಇದೆ. ಕೇವಲ 7 ಕಿ.ಮೀ ದೂರದಲ್ಲಿ ಹೋಬಳಿ ಕೇಂದ್ರ ಅಜ್ಜಂಪುರವಿದೆ. ಆದರೂ ಬೆಣಕುಣಸೆ ಗ್ರಾಮ ಮಾತ್ರ ಸೂಕ್ತ ರಸ್ತೆ-ಸ್ವಚ್ಛವಾಗಿಲ್ಲ. ಹೊಂದಿಲ್ಲ. ಅಧಿಕಾರಿಗಳೂ ಪುಟ್ಟ ಗ್ರಾಮದ ಕೆಲವೇ ಸಮಸ್ಯೆಗಳನ್ನು ಪರಿಹರಿಸುವ ಕಾಳಜಿ ತೋರಿಲ್ಲ’ ಎಂಬುದು ಸ್ಥಳೀಯ ಪ್ರದೀಪ್‌ ಅವರ ಆರೋಪ.

‘ಚುನಾವಣೆ ಸಂದರ್ಭ ಬರುವ ಜನಪ್ರತಿನಿಧಿಗಳು ಹಲವು ಆಶ್ವಾಸನೆ ನೀಡಿ, ಬಳಿಕ ಮರೆಯಾಗುತ್ತಾರೆ. ಇನ್ನು ಚುನಾವಣೆಯಲ್ಲಿ ಆಯ್ಕೆಯಾದ ಶಾಸಕರು ಅಧಿಕಾರಿಗಳನ್ನು ಕರೆತಂದು ಗ್ರಾಮದ ಸಮಸ್ಯೆಗಳನ್ನು ಪರಿಹರಿಸುವಂತೆ ಸೂಚಿಸುತ್ತಾರೆ. ಆದರೆ ಸೂಚನೆ ಪಡೆದ ಅಧಿಕಾರಿಗಳು ಮಾತ್ರ ಕೆಲಸ ಮಾಡೋದಿಲ್ಲ’ ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಾರೆ.

ಕೂಡಲೇ ಅಪಾಯಕಾರಿ ವಿದ್ಯುತ್ ಉಪಕರಣಗಳಿಂದ ಮಕ್ಕಳನ್ನು ರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಗ್ರಾಮವನ್ನು ಸಂಪರ್ಕಿಸುವ ಕಿರಿದಾದ ರಸ್ತೆಯನ್ನು ವಿಸ್ತರಿಸುವ ಕೆಲಸವನ್ನು ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ಇಲಾಖೆಗಳು ಮಾಡಿ, ಅನುಕೂಲ ಮಾಡಿಕೊಡುವಂತೆ ಗ್ರಾಮಸ್ಥರು ಹಾಗೂ ಅಜ್ಜಂಪುರ-ಗಡೀಹಳ್ಳಿ ಭಾಗದ ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಆಗ್ರಹಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.