ADVERTISEMENT

ಪ್ರತಿಭಟನೆ ನಡುವೆ ಮಲ್ಲಂದೂರಿಗೆ ಬಸ್ ಸೇವೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 9:15 IST
Last Updated 20 ಜನವರಿ 2011, 9:15 IST

ಚಿಕ್ಕಮಗಳೂರು:ನಗರದಿಂದ ಮಲ್ಲಂದೂರಿಗೆ ಆರಂಭಗೊಂಡಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಸಂಚಾರಕ್ಕೆ ಶಾಸಕ ಎಂ.ಪಿ.ಕುಮಾರಸ್ವಾಮಿ ಬುಧವಾರ ಚಾಲನೆ ನೀಡಿದರು.ಮುಂದಿನ ದಿನಗಳಲ್ಲಿ ರಸ್ತೆ ವಿಸ್ತರಣೆಗೆ ಒತ್ತು ನೀಡಿ ಕುಗ್ರಾಮಗಳಿಗೂ ಸರ್ಕಾರಿ ಬಸ್ ಸೇವೆಯನ್ನು ಒದಗಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು. ಬ್ಯಾರುವಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷ ಪುಟ್ಟೇಗೌಡ ಮಾತನಾಡಿ, ಸಾರ್ವಜನಿ ಕರು ಕೆಎಸ್‌ಆರ್‌ಟಿಸಿ ಬಸ್ ಸೇವೆ ಸೌಲಭ್ಯವನ್ನು ಸದುಪಯೋಗ ಪಡಿಸಿ ಕೊಳ್ಳುವಂತೆ ಮನವಿ ಮಾಡಿದರು.

ಮಲ್ಲಂದೂರಿಗೆ ಸರ್ಕಾರಿ ಬಸ್ ಸೇವೆ ಒದಗಿಸಬೇಕೆಂಬ ಬೇಡಿಕೆ ಸುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರದ್ದಾಗಿತ್ತು. ಈಗ ಆ ಬೇಡಿಕೆ ಈಡೇರಿದಂತಾಗಿದೆ ಎಂದು ಆವತಿ ಹೋಬಳಿ ಬಿಜೆಪಿ ಅಧ್ಯಕ್ಷ ಎಚ್.ಬಿ. ಮಹೇಂದ್ರ ತಿಳಿಸಿ, ಈ ಬಸ್ ಸಂಚಾರ ಸ್ಥಗಿತಗೊಳ್ಳದಂತೆ ನೋಡಿಕೊಳ್ಳಬೇಕೆಂದು ಕೋರಿದರು.ಜಿಲ್ಲಾ ಪಂಚಾಯಿತಿ ಸದಸ್ಯ ತಿಮ್ಮಯ್ಯ, ತಾಲ್ಲೂಕು ಪಂಚಾಯಿತಿ ಸದಸ್ಯ ಎನ್.ಎಂ.ಮಂಜುನಾಥ, ಮುಖಂಡರಾದ ಕೆರೆಮಕ್ಕಿ ಮಹೇಶ್, ನಾಗೇಶ್, ರವೀಶ್, ಶೇಖರ್ ಹಾಜರಿದ್ದರು.

ಪ್ರತಿಭಟನೆ: ಬಸ್ ಸಂಚಾರವನ್ನು ಉದ್ಘಾಟಿಸಲು ಆಗಮಿಸಿದ ಶಾಸಕರ ವಿರುದ್ಧ  ಎಚ್.ಡಿ.ಕುಮಾರಸ್ವಾಮಿ ಅಭಿಮಾನಿಗಳ ಸಂಘ ಮತ್ತು ಕನ್ನಡ ಸೇನೆ ಕಾರ್ಯಕರ್ತರು ಪ್ರತಿಭಟಿಸಿದರು. ಬಸ್‌ಸಂಚಾರವನ್ನು ಉದ್ಘಾಟಿಸಲು ಜನತಾದಳ ಜಿಲ್ಲಾ ಘಟಕದ ಅಧ್ಯಕ್ಷ ದೇವರಾಜ್ ಮುಂದಾದಾಗ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.

ಬಸ್‌ಸಂಚಾರ ಎರಡು ಬಾರಿ ಆರಂಭಗೊಂಡು ಸ್ಥಗಿತಗೊಂಡಿತ್ತು. ಶಾಸಕರು ಕೇವಲ ಬಸ್‌ಸಂಚಾರವನ್ನು ಉದ್ಘಾಟಿಸುವ ಬದಲು ಮಲ್ಲಂದೂರು ಸುತ್ತ ಲಿನ ಗ್ರಾಮಗಳ ಮೂಲ ಸಮಸ್ಯೆ ಬಗೆಹರಿಸಲು ಒತ್ತುನೀಡಬೇಕೆಂದು  ಜಾತ್ಯತೀತ ಜನತಾದಳ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಚ್.ದೇವರಾಜ್ ಒತ್ತಾಯಿಸಿದರು.

ಎಚ್.ಡಿ.ಕುಮಾರಸ್ವಾಮಿ ಅಭಿಮಾನಿಗಳ ಸಂಘದ ಅಧ್ಯಕ್ಷ ಹೊಲದಗದ್ದೆ ಗಿರೀಶ್, ಎಚ್.ಎನ್.ಕೃಷ್ಣೇಗೌಡ, ಹಂಪಯ್ಯ, ಕನ್ನಡ ಸೇನೆ ರೆಹಮನ್, ಈರೇಗೌಡ, ಶಿವಣ್ಣ ವೆಂಕಟೇಶ್, ಯೋಗೇಶ್, ಆಶಾ, ಇಂದು, ವಡಿವೇಲು, ಬಾಬು, ವಿಜಯ,ಧರ್ಮರಾಜ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.