ADVERTISEMENT

ಬಂಜಾರ ಸಮುದಾಯಕ್ಕೆ ಜಾಗ ಮೀಸಲು

ಕಡೂರಿನಲ್ಲಿ ಸಂತ ಸೇವಾಲಾಲ್ ಜಯಂತಿಯಲ್ಲಿ ಶಾಸಕ ದತ್ತ ಭರವಸೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2018, 10:08 IST
Last Updated 1 ಮಾರ್ಚ್ 2018, 10:08 IST
ಕಡೂರು ತಾಲ್ಲೂಕು ಕಚೇರಿ ಆವರಣದಲ್ಲಿ ನಡೆದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಕುವೆಂಪು ವಿವಿ ರಿಜಿಸ್ಟ್ರಾರ್ ಭೋಜ್ಯಾನಾಯ್ಕ ಅವರಿಗೆ ಸಂತ ಸೇವಾಲಾಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಡೂರು ತಾಲ್ಲೂಕು ಕಚೇರಿ ಆವರಣದಲ್ಲಿ ನಡೆದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಕುವೆಂಪು ವಿವಿ ರಿಜಿಸ್ಟ್ರಾರ್ ಭೋಜ್ಯಾನಾಯ್ಕ ಅವರಿಗೆ ಸಂತ ಸೇವಾಲಾಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.   

ಕಡೂರು: ಲಂಬಾಣಿ ಸಮುದಾಯದ ಜನರು ವಾಸಿಸುತ್ತಿರುವ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಎಂದು ಶಾಸಕ ವೈ.ಎಸ್.ವಿ.ದತ್ತ ತಿಳಿಸಿದರು.

ಕಡೂರಿನ ತಾಲ್ಲೂಕು ಕಚೇರಿ ಆವರಣದಲ್ಲಿ ಬುಧವಾರ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

'ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮವನ್ನಾಗಿ ಪರಿವರ್ತಿಸುವ ಖಾಸಗಿ ವಿಧೇಯಕವನ್ನು ಮಾಯಕೊಂಡ ಶಾಸಕ ಶಿವಮೂರ್ತಿ ನಾಯಕ್ ಮಂಡಿಸಿದಾಗ ಅದನ್ನು ಸದನದಲ್ಲಿ ಬೆಂಬಲಿಸಿದ ತೃಪ್ತಿ ನನಗಿದೆ. ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡು ತಾಂಡಾಗಳನ್ನು ಕಂದಾಯ ಗ್ರಾಮವನ್ನಾಗಿ ಮಾಡುವ ಕಾರ್ಯ ಪ್ರಗತಿಯಲ್ಲಿದ್ದು, ಅಭಿವೃದ್ದಿಗಳು ಹೆಚ್ಚಾಗಿ ನಡೆಯುವ ವಿಶ್ವಾಸವಿದೆ' ಎಂದರು.

ADVERTISEMENT

‘ತಾಲ್ಲೂಕಿನಲ್ಲಿ ಬಂಜಾರ ಸಮುದಾಯದ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಹಾಗೂ ಕಚೇರಿ ನಿರ್ಮಾ ಣಕ್ಕಾಗಿ 1 ಎಕರೆ ಜಮೀನು ನೀಡಲು ಸರ್ಕಾರ ಮಂಜೂರು ಮಾಡಿ ತಹಶೀಲ್ದಾರ್ ಅವರಿಗೆ ಜಾಗ ಗುರುತಿಸಲು ಸೂಚಿಸಿದೆ. ಅದರಂತೆ ತಹಶೀಲ್ದಾರ್ ಅವರು ಜಾಗ ಗುರುತಿಸಿ ಅದರ ಅನುಮೋದನೆಗಾಗಿ ಜಿಲ್ಲಾಧಿಕಾರಿಗಳಿಗೆ ದಾಖಲೆಗಳನ್ನು ಕಳುಹಿಸಿದ್ದಾರೆ. ಇದಲ್ಲದೆ ವೇದಾ ಪಂಪ್‍ಹೌಸ್ ಬಳಿ 100ಇಂಟು100 ಜಾಗವನ್ನು ಸಹ ಸಮಾಜದ ಉಪ ಯೋಗಕ್ಕೆ ಗುರುತಿಸಲಾಗಿದೆ’ ಎಂದರು.

‘ಶ್ರೀಮಂತ ಜಾನಪದ ಸಂಸ್ಕೃತಿ ಯನ್ನು ಹೊಂದಿರುವ ಬಂಜಾರ ಜನಾಂಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಸಮುದಾಯದ ಅಭಿವೃದ್ದಿಗೆ ಎಲ್ಲರೂ ಮುಂದಾಗಬೇಕು. ಈ ಸಮುದಾಯದ ಪುರೋಭಿವೃದ್ದಿಗಾಗಿ ಯಾವಾಗಲೂ ಶ್ರಮಿಸುತ್ತೇನೆ’ ಎಂದರು.

ಬಿಜೆಪಿ ಮಂಡಲಾಧ್ಯಕ್ಷ ಬೆಳ್ಳಿಪ್ರಕಾಶ್ ಮಾತನಾಡಿ ‘ಸಮುದಾಯದ ಯುವಕರು ಪ್ರಜ್ಞಾವಂತರಾಗಿ ಶಿಕ್ಷಣ ಪಡೆದು ತಮ್ಮ ಸಮುದಾಯವನ್ನು ಅಭಿವೃದ್ದಿಗೊಳಿಸಲು ಮುಂದಾಗಬೇಕು ಎಂದರು.

ಚಿತ್ರದುರ್ಗದ ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಮಾತನಾಡಿ, ‘ಬಂಜಾರ ಸಮಾಜದ ಅಭಿವೃದ್ದಿಗಾಗಿ ಸರ್ಕಾರ ಹೆಚ್ಚಿನ ಒತ್ತು ನೀಡಬೇಕು. ಬರದ ಕಾರಣದಿಂದ ಗುಳೆ ಹೋಗುತ್ತಿರುವ ಬಂಜಾರ ಜನಾಂಗದ ಕೂಲಿಕಾರರ ಮಕ್ಕಳಿಗೆ ವಸತಿ ಶಾಲೆ ಕಲ್ಪಿಸಬೇಕು.  ನಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಸ್ವಾಭಿಮಾನದಿಂದ ಬಾಳುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು’ ಎಂದು ಅವರು ಹೇಳಿದರು.

ಕುವೆಂಪು ವಿಶ್ವವಿದ್ಯಾನಿಲಯದ ಪ್ರಸರಾಂಗ ಕುಲಸಚಿವ ಎಚ್.ಎಸ್.ಭೋಜ್ಯಾನಾಯ್ಕ ಅವರಿಗೆ ಸಂತಶ್ರೀ ಸೇವಾಲಾಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಂ.ಕೆಂಪರಾಜು, ತಹಶೀಲ್ದಾರ್ ಎಂ.ಭಾಗ್ಯ, ಬಂಜಾರ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣ್‍ನಾಯ್ಕ, ತಾಲ್ಲೂಕು ಅಧ್ಯಕ್ಷ ಎಂ.ಸಿ.ಸತೀಶ್‍ನಾಯ್ಕ, ಬೀರೂರು ಪುರಸಭೆ ಅಧ್ಯಕ್ಷೆ ಸವಿತಾ ರಮೇಶ್, ಎಪಿಎಂಸಿ ಅದ್ಯಕ್ಷ ಆರ್. ಓಂಕಾರಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯೆ ಲೋಲಾಕ್ಷಿಬಾಯಿ, ಮಾಜಿ ಉಪಾಧ್ಯಕ್ಷೆ ಮಾಲಿನಿಬಾಯಿ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಆನಂದನಾಯ್ಕ, ಪ್ರೇಮಾಬಾಯಿ, ದೇವರಾಜನಾಯ್ಕ, ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶನಾಯ್ಕ, ಯುವ ಬಂಜಾರ ಸಂಘದ ಟಿ.ಎಸ್. ಶ್ರೀನಿವಾಸನಾಯ್ಕ, ಪ್ರದೀಪ್‍ನಾಯ್ಕ ಬಿ.ಟಿ.ಗಂಗಾಧರನಾಯ್ಕ, ಕುಮಾರ್‍ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.