ADVERTISEMENT

ಬಂಡವಾಳಶಾಹಿಗಳಿಗೆ ಮಾತ್ರ ಅಚ್ಛೇ ದಿನ್‌

ಮೂಡಿಗೆರೆ: ಕಾಂಗ್ರೆಸ್‌ ಅಲ್ಪಸಂಖ್ಯಾತ ಸಮಾವೇಶದಲ್ಲಿ ಸಿ.ಎಂ. ಇಬ್ರಾಹಿಂ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 7:33 IST
Last Updated 30 ಮಾರ್ಚ್ 2018, 7:33 IST

ಮೂಡಿಗೆರೆ: ದೇಶದಲ್ಲಿ ಬಂಡವಾಳಶಾಹಿಗಳಿಗೆ ಮಾತ್ರ ಅಚ್ಛೇ ದಿನ್‌ ಬಂದಿದೆ ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ. ಇಬ್ರಾಹಿಂ ವ್ಯಂಗ್ಯವಾಡಿದರು.

ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಗುರುವಾರ ಕಾಂಗ್ರೆಸ್‌ ಪಕ್ಷ ಏರ್ಪಡಿಸಿದ್ದ ಸಮಾವೇಶದಲ್ಲಿ ಅವರು ಮಾತನಾಡಿದರು.ಕೇಂದ್ರ ಸರ್ಕಾರವು ಚುನಾವಣೆ ಪೂರ್ವದಲ್ಲಿ ಭಾರತದಲ್ಲಿ ಅಚ್ಛೇ ದಿನ್‌ ಬರುತ್ತದೆ ಎಂದು ಮತದಾರರನ್ನು ಓಲೈಸಿದ್ದರು. ಆದರೆ, ಆಡಳಿತಕ್ಕೆ ಬಂದು ನಾಲ್ಕು ವರ್ಷವಾದರೂ ಇದುವರೆಗೂ ಅಚ್ಛೇ ದಿನ್‌ ಬಂದಿಲ್ಲ. ದೇಶದಲ್ಲಿ ಶ್ರೀಮಂತರಿಗೆ, ಬಂಡವಾಳಶಾಹಿಗಳಿಗೆ ಮಾತ್ರ ಅಚ್ಛೇದಿನ್‌ ಬಂದಿದೆ ಎಂದು ಆರೋಪಿಸಿದರು.ದೇಶದಲ್ಲಿ ಇಂದು ಜನರು ಬುದ್ಧಿವಂತರಾಗಿದ್ದು, ಹಿಂದೂ ವಿಚಾರವನ್ನಿಟ್ಟುಕೊಂಡು ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯವಿಲ್ಲ. ಅದಕ್ಕಾಗಿ ಬಂಡವಾಳಶಾಹಿಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ವಿಧಾನ ಪರಿಷತ್‌ ಸದಸ್ಯೆ ಮೋಟಮ್ಮ ಮಾತನಾಡಿ, ‘ರಾಜ್ಯದಲ್ಲಿ ಡೋಂಗಿ ಪಕ್ಷಗಳನ್ನು ತಿರಸ್ಕರಿಸುವ ಕೆಲಸವಾಗಬೇಕು. ಕಳೆದ ಬಾರಿ ಪ್ರವೀಣ್‌ಭಾಯಿ ತೊಗಾಡಿಯಾ ಅಲ್ಪಸಂಖ್ಯಾತರ ವಿರುದ್ಧ ಮಾತನಾಡಿದ್ದಕ್ಕೆ, ಪ್ರತಿಕ್ರಿಯಿಸಿದ್ದ ನನ್ನ ಮೇಲೆ ಉದ್ದೇಶಪೂರ್ವಕವಾಗಿ ದೂರು ದಾಖಲಿಸಲಾಯಿತು. ಆದರೆ, ದೂರಿಗೆ ಲೆಕ್ಕಿಸದೆ ಪ್ರವೀಣ್‌ಭಾಯಿ ತೊಗಾಡಿಯಾ ಹೇಳಿಕೆಯನ್ನು ವಿರೋಧಿಸಿದ್ದೆ. ಇಂದಿಗೂ ಕೂಡ ಅಲ್ಪಸಂಖ್ಯಾತರ ಹಿತಕ್ಕೆ ಧಕ್ಕೆಯಾದರೆ ಸಹಿಸುವುದಿಲ್ಲ’ ಎಂದರು.

ADVERTISEMENT

ವಿಧಾನ ಪರಿಷತ್‌ ಸದಸ್ಯ ಅಬ್ದುಲ್‌ ಜಬ್ಬಾರ್‌ ಮಾತನಾಡಿ, ‘ಈ ಬಾರಿ ರಾಜ್ಯ ಸರ್ಕಾರವು ಅಲ್ಪಸಂಖ್ಯಾತರಿಗೆ ನೀಡಿದಷ್ಟು ಅನುದಾನವನ್ನು ಹಿಂದಿನ ಯಾವುದೇ ಸರ್ಕಾರ ನೀಡಿಲ್ಲ. ಅಲ್ಪಸಂಖ್ಯಾತರ ಧಾರ್ಮಿಕ ಕೇಂದ್ರಗಳಿಗೆ ಅಪಾರವಾದ ಅನುದಾನ ನೀಡಲಾಗಿದೆ. ಅಲ್ಪಸಂಖ್ಯಾತರ ಪರವಾಗಿ ಬಹಿರಂಗವಾಗಿ ಬೆಂಬಲ ನೀಡುವ ವ್ಯಕ್ತಿಯೆಂದರೆ ಸಿದ್ದರಾಮಯ್ಯ ಮಾತ್ರ’ ಎಂದರು.

ಮಾಜಿ ಕೇಂದ್ರ ಸಚಿವೆ ಡಿ.ಕೆ. ತಾರಾದೇವಿ, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಿ. ಮಹಮ್ಮದ್‌, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ನಿಸಾರ್ಅಹಮ್ಮದ್‌, ತಾಲ್ಲೂಕು ಅಧ್ಯಕ್ಷ ಅಕ್ರಂಹಾಜಿ, ಜಿಲ್ಲಾಧ್ಯಕ್ಷ ಡಾ. ವಿಜಯಕುಮಾರ್‌, ಎಂ.ಎಲ್‌. ಮೂರ್ತಿ ಮಾತನಾಡಿದರು. ಪದಾಧಿಕಾರಿಗಳಾದ ಯು.ಎಚ್‌. ಹೇಮಶೇಖರ್‌, ಸಿ.ಕೆ. ಇಬ್ರಾಹಿಂ, ನಯನಜ್ಯೋತಿ, ಸವಿತಾ ರಮೇಶ್‌, ರಮಿಜಾಬಿ, ದಿಲ್‌ದಾರ್‌ ಬೇಗಂ, ಮಹಮ್ಮದ್‌ ಸೇಠ್, ಅಹಮ್ಮದ್‌ ಬಾವಾ, ಇಸಾಕ್‌, ಇರ್ಷಾದ್‌, ಪಟೇಲ್‌ಶಿವಣ್ಣ. ಹೂವಪ್ಪ, ಸುಕುರ್‌, ನಾಗರತ್ನ, ಉದಯಶಂಕರ್‌, ಶಿವನಂದಸ್ವಾಮಿ ಇದ್ದರು.

ಕಣ್ಣೀರಿಟ್ಟ ಮೋಟಮ್ಮ

‘ಇದು ನನ್ನ ರಾಜಕೀಯ ಜೀವನದಲ್ಲಿ ಕೊನೆಯ ಚುನಾವಣೆಯಾಗಿದೆ. 1994ರಲ್ಲಿ ಟಿಕೆಟ್‌ ಕೈ ತಪ್ಪಿದಾಗ ವಿಧಾನ ಪರಿಷತ್‌ ಸದಸ್ಯ ಅಬ್ದುಲ್‌ ಜಬ್ಬಾರ್‌, ಜಾಫರ್‌ ಷರೀಫ್‌ ಬೆನ್ನಿಗೆ ನಿಂತು ಸಹಾಯ ಮಾಡಿದರು. ಅಲ್ಪಸಂಖ್ಯಾತರು ನೀಡಿದ ನೆರವನ್ನು ಎಂದಿಗೂ ಮರೆಯಲಾರೆ’ ಎಂದು ವಿಧಾನ ಪರಿಷತ್‌ ಸದಸ್ಯೆ ಮೋಟಮ್ಮ ವೇದಿಕೆಯಲ್ಲಿ ಭಾವನಾತ್ಮಕವಾಗಿ ಮಾತನಾಡಿ ಕಣ್ಣೀರಿಟ್ಟರು.

**

ದೇಶದಲ್ಲಿ ಅಲ್ಪಸಂಖ್ಯಾತರಿಗೆ ಅಚ್ಛೆ ದಿನ್‌ ಎಂಬುದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ – ಅಕ್ರಂ ಹಾಜಿ, ಅಲ್ಪಸಂಖ್ಯಾತರ ಘಟಕದ ತಾಲ್ಲೂಕು ಅಧ್ಯಕ್ಷ

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.