ADVERTISEMENT

ಬಜೆಟ್-ಜನಪರ ಕಾಳಜಿ ಇರಲಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 5:45 IST
Last Updated 16 ಫೆಬ್ರುವರಿ 2012, 5:45 IST

ಚಿಕ್ಕಮಗಳೂರು:  ಈ ವರ್ಷದ ಮುಂಗಡ ಪತ್ರದಲ್ಲಿ ನೈಜ ಜನಪರ ಕಾಳಜಿ ಪ್ರದರ್ಶಿಸಬೇಕು. ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಒತ್ತಾಯಿಸಿ ಸಿಪಿಐ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿದ ಪ್ರತಿಭಟನಾಕಾರರು, ಬಜೆಟ್ ಕೇವಲ ಸರ್ಕಾರದ ಜನಪ್ರಿಯತೆ ಗಳಿಸುವ ಘೋಷಣೆಗಳನ್ನು ಒಳಗೊಂಡಿರದೆ ಜನಪರ ಕಾಳಜಿ ಬಿಂಬಿಸಬೇಕೆಂದು ಮನವಿ ಮಾಡಿದರು.

ರೈತರಿಗಾಗಿ ಮಂಡಿಸಿದ ಪ್ರತ್ಯೇಕ ಕೃಷಿ ಬಜೆಟ್‌ನಲ್ಲಿ ಸರ್ಕಾರ ಕೃಷಿ ವಲಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ ಎಂದು ಬಿಂಬಿಸಿಕೊಂಡಿತ್ತು. ಆದರೆ ಕೃಷಿ ಬಜೆಟ್ ಎಷ್ಟರ ಮಟ್ಟಿಗೆ ಅನುಷ್ಠಾನಗೊಂಡಿದೆ ಎಂಬುದು ಇದುವರೆಗೂ ರಾಜ್ಯದ ಜನತೆ ಗಮನಕ್ಕೆ ಬಂದಿಲ್ಲ. ಕೇವಲ ವರ್ಷಕ್ಕೊಮ್ಮೆ ಸಾಂಪ್ರದಾಯಿಕ ಬಜೆಟ್ ಮಂಡನೆ ಆಗುತ್ತಿದೆಯೇ ಹೊರತು ಶೇ.100ರಷ್ಟು ಬಜೆಟ್ ಅಂಶಗಳು ಜಾರಿಗೆ ಬರುತ್ತಿಲ್ಲ ಎಂದು ಹೇಳಿದರು.

ಬದುಕಿಗಾಗಿ ಬಡವರು ಸರ್ಕಾರಿ ಭೂಮಿಯನ್ನು ಸಾಗುವಳಿ ಮಾಡಿ ಸಕ್ರಮಗೊಳಿಸಿಕೊಳ್ಳಲು ಫಾರಂ ನಂಬರ್ 50, 53ರಲ್ಲಿ  ಅರ್ಜಿ ಸಲ್ಲಿಸಿ ಹತ್ತಾರು ವರ್ಷ ಕಳೆದಿವೆ. ಆದರೆ ಸರ್ಕಾರ ಇದುವರೆಗೂ ಸಾಗುವಳಿ ಚೀಟಿ ನೀಡಿಲ್ಲ. ಬಡವರ ಭೂಮಿ ಸಕ್ರಮಗೊಳಿಸಲು ಬಜೆಟ್‌ನಲ್ಲಿ ಈ ವಿಷಯಕ್ಕೆ ಆದ್ಯತೆ ನೀಡಬೇಕೆಂದು ಆಗ್ರಹಿಸಿದರು.

ರಾಜ್ಯದ ಬಹುತೇಕ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವಾಸಿಗಳು ನಿವೇಶನ ಇಲ್ಲದೆ ಪರದಾಡುವ ಸ್ಥಿತಿ ಇದೆ. ನಿವೇಶನ ಮತ್ತು ವಸತಿ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿದರೆ ಭೂಮಿ ಇಲ್ಲ ಎಂಬ ಉತ್ತರ ಪಂಚಾಯಿತಿ ಅಧಿಕಾರಿಗಳಿಂದ ಬರುತ್ತಿದೆ. ಕೂಡಲೇ ಸರ್ಕಾರ ಭೂಮಿ ಖರೀದಿಸಿ ನಿವೇಶನ ನೀಡಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಿತಿ ಶೋಚನೀಯವಾಗಿದೆ. ಆಸ್ಪತ್ರೆಗಳು ಸ್ಥಿತಿ ಸುಧಾರಿಸಿ ಅವುಗಳಿಗೆ ವೈದ್ಯರು, ಸಿಬ್ಬಂದಿ ನೇಮಿಸಿ ಮೂಲ ಸೌಕರ್ಯ ಒದಗಿಸಬೇಕೆಂದು ಕೋರಿದರು.

ಸ್ತ್ರೀಶಕ್ತಿ ಮತ್ತು ಸ್ವಸಹಾಯ ಸಂಘಗಳಿಗೆ ಬಡ್ಡಿರಹಿತ ಸಾಲದ ಮಿತಿಯನ್ನು ರೂ.5 ಲಕ್ಷದವರೆಗೆ ಹೆಚ್ಚಿಸಬೇಕು; ಚಿಕ್ಕಮಗಳೂರು ಜಿಲ್ಲೆಯನ್ನು ಪ್ರವಾಸೋದ್ಯಮ ವಲಯವನ್ನಾಗಿ ಘೋಷಿಸಬೇಕು ಎಂದು ಒತ್ತಾಯಿಸಿದರು.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಪರದಾಡುತ್ತಿದ್ದಾರೆ. ಶಾಲೆ, ಕಾಲೇಜುಗಳಿಗೆ ಮೈಲಿ ದೂರ ನಡೆದು ಹೋಗಬೇಕಾಗಿದೆ. ಶಾಲೆ, ಕಾಲೇಜುಗಳನ್ನು ತೆರೆಯಲು ಹೆಚ್ಚಿನ ಆದ್ಯತೆ ನೀಡಬೇಕು. ಮಲೆನಾಡು ಮತ್ತು ಬಯಲು ಸೀಮೆ ಜನರಿಗೆ ಮಾರಕ ಆಗಲಿರುವ ಹುಲಿ ಯೋಜನೆಯನ್ನು ಕೈಬಿಡಬೇಕು. ಚಿಕ್ಕಮಗಳೂರು ತಾಲ್ಲೂಕಿನ ಕರಗಡ ಮತ್ತು ಮಳಲೂರು ಏತನೀರಾವರಿ ಯೋಜನೆ ಕಾರ್ಯಗತಗೊಳಿಸಬೇಕು ಎಂದು ಮನವಿ ಮಾಡಿದರು.

ರಾಜ್ಯ ಸಮಿತಿ ಸದಸ್ಯ ಬಿ.ಅಮ್ಜದ್ ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದರು.
ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಯಿತು.

ಜಿಲ್ಲಾ ಘಟಕ ಸಹ ಕಾರ್ಯದರ್ಶಿ ಜಿ.ರಘು, ತಾಲ್ಲೂಕು ಘಟಕ ಕಾರ್ಯದರ್ಶಿ ಜಾರ್ಜ್ ಆಸ್ಟಿನ್, ಕೋಶಾಧಿಕಾರಿ ಎಚ್.ಕೆ.ಸೋಮೇಗೌಡ, ಎಸ್.ಕೆ.ದಾನು, ಕೆರೆಮಕ್ಕಿ ರಮೇಶ್, ಹೆಡದಾಳ್ ಕುಮಾರ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.