ADVERTISEMENT

ಬಯೋಮೆಟ್ರಿಕ್ ವ್ಯವಸ್ಥೆ: ಚಾಲನೆ ಜ.14ಕ್ಕೆ

ಶೃಂಗೇರಿಯಲ್ಲಿ ಸೌಲಭ್ಯ ಅಳವಡಿಕೆ- ಸಚಿವ ಜೀವರಾಜ್

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 7:05 IST
Last Updated 27 ಡಿಸೆಂಬರ್ 2012, 7:05 IST
ನರಸಿಂಹರಾಜಪುರ ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ಆವರಣದಲ್ಲಿ ಮಂಗಳವಾರ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನಾ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಎನ್.ಜೀವರಾಜ್ ಉದ್ಘಾಟಿಸಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜೆ.ಜಿ.ನಾಗರಾಜ್, ಜಿಲ್ಲಾ ಪಂಚಾಯಿತಿ ಸದಸ್ಯೆ ಸುಜಾತಾ, ಗ್ರಾ.ಪಂ ಅಧ್ಯಕ್ಷ ರಾಘವೇಂದ್ರ ಮತ್ತಿತರರಿದ್ದರು.
ನರಸಿಂಹರಾಜಪುರ ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ಆವರಣದಲ್ಲಿ ಮಂಗಳವಾರ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನಾ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಎನ್.ಜೀವರಾಜ್ ಉದ್ಘಾಟಿಸಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜೆ.ಜಿ.ನಾಗರಾಜ್, ಜಿಲ್ಲಾ ಪಂಚಾಯಿತಿ ಸದಸ್ಯೆ ಸುಜಾತಾ, ಗ್ರಾ.ಪಂ ಅಧ್ಯಕ್ಷ ರಾಘವೇಂದ್ರ ಮತ್ತಿತರರಿದ್ದರು.   

ಮುತ್ತಿನಕೊಪ್ಪ (ನರಸಿಂಹರಾಜಪುರ):  ಜನವರಿ 14ರಿಂದ ಶೃಂಗೇರಿ ಕ್ಷೇತ್ರದಲ್ಲಿ ಪಡಿತರ ವಿತರಣೆಗೆ ಬಯೋಮೆಟ್ರಿಕ್ ವ್ಯವಸ್ಥೆಗೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಎನ್.ಜೀವರಾಜ್ ತಿಳಿಸಿದರು.

ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ಆವರಣದಲ್ಲಿ ಮಂಗಳವಾರ ನಡೆದ ಪಡಿತರ ಚೀಟಿ ವಿತರಣೆ ಹಾಗೂ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕ್ಷೇತ್ರದಲ್ಲಿ 8400 ಕುಟುಂಬಗಳು ಪಡಿತರ ಚೀಟಿ ಸೌಲಭ್ಯ ಹೊಂದಿದ್ದು ಇವರೆಲ್ಲರಿಗೂ ಕಾಯಂ ಪಡಿತರ ಚೀಟಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು. ಗಂಗಾ ಕಲ್ಯಾಣ ಯೋಜನೆಯನ್ನು ಸಣ್ಣರೈತರಿಗೂ ನೀಡುವ ಯೋಜನೆಯನ್ನು ಜಾರಿಗೆ ತರಲು ಚಿಂತನೆ ನಡೆಸಲಾಗಿದೆ. ಇದರಿಂದ ಸಣ್ಣ ರೈತರು ಕೃಷಿ ಅಭಿವೃದ್ಧಿ ಪಡಿಸಲು ಸಹಾಯಕವಾಗಲಿದೆ ಎಂದರು.ಭದ್ರಾ ಮೇಲ್ದಂಡೆ ಯೋಜನೆಯ ನಿರಾಶ್ರಿತರಿಗೆ ರೂ.12ಲಕ್ಷ ಪರಿಹಾರ ನೀಡಲು ನಿರ್ಧರಿಸಲಾಗಿದೆ. ಇದರಲ್ಲಿ ಈಗಾಗಲೇ ರೂ.7.50ಲಕ್ಷ ಹಣ ವಿತರಿಸಲಾಗಿದೆ.

ಶೀಘ್ರದಲ್ಲೆ ಉಳಿದ ಮೊತ್ತವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು. ಉಂಬಳೆಬೈಲು ಗ್ರಾಮದಿಂದ ಕೊಪ್ಪದವರೆಗೆ ಮಧ್ಯದಲ್ಲಿ ದುರಸ್ತಿಯಾಗದೆ ಇರುವ ರಸ್ತೆಯ ಭಾಗದಲ್ಲಿ ಡಾಂಬರೀಕರಣ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು ಶೀಘ್ರದಲ್ಲೆ ಕಾಮಗಾರಿ ಪ್ರಾರಂಭವಾಗಲಿದೆ. ಬಿ.ಎಚ್.ಕೈಮರದಿಂದ ಎನ್.ಆರ್.ಪುರದವರೆಗೆ ರಸ್ತೆ ವಿಸ್ತರಣೆ ಮಾಡಲಾಗಿದ್ದು ಇದಕ್ಕೆ ಡಾಂಬರೀಕರಣ ಮಾಡುವ ಕಾಮಗಾರಿ ಈಗಾಗಲೇ ಪ್ರಾರಂಭವಾಗಿದೆ ಎಂದರು.

70ಕ್ಕೂ ಹೆಚ್ಚು ಕಾಲೊನಿಗಳಿಗೆ ಕಾಂಕ್ರಿಟ್ ರಸ್ತೆ ನಿರ್ಮಿಸಲಾಗಿದೆ. ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.

ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಇ.ರಾಘವೇಂದ್ರ ಮಾತನಾಡಿ, ತಮ್ಮ ಅಧ್ಯಕ್ಷರ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು  ಸಚಿವರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಸಹಕಾರ ನೀಡಿದ್ದಾರೆ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜೆ.ಜಿ.ನಾಗರಾಜ್, ಸದಸ್ಯರಾದ ನಾಗೇಶ್, ಜಿಲ್ಲಾ ಪಂಚಾಯಿತ್ ಸದಸ್ಯೆ ಸುಜಾತಾ, ಎಸ್.ಎಸ್.ಶಾಂತಕುಮಾರ್, ಕೃಷಿಕ ಸಮಾಜದ ಅಧ್ಯಕ್ಷ ವಿ.ನಿಲೇಶ್, ಪಿಸಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಕೆ.ಪಿ.ಸಂಪತ್ ಕುಮಾರ್ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಎಸ್.ಗೋಪಾಲ್, ನರೇಂದ್ರ, ರಾಜುಪ್ರಸನ್ನ, ಸುಧಾಕರ, ದೀಪಾ ಉಮಾಶಂಕರ್,ಲಲಿತಾ, ಶೇಖರ್, ಸುಜಾತಾ, ಗಂಗಮ್ಮ, ಮಳಲಿ ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಮಂಜುನಾಥ್, ವಿಎಸ್‌ಎಸ್‌ಎನ್ ಅಧ್ಯಕ್ಷ ವಿಜಯ ಕುಮಾರ್, ಸಿಡಿಪಿಒ ಜ್ಯೋತಿಲಕ್ಷ್ಮಿ, ಪರಮೇಶ್ವರ, ಜ್ಯೋತಿ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.