ADVERTISEMENT

ಬೆಂಕಿಯಿಂದ ಶೋಲಾ ಕಾಡು ರಕ್ಷಣೆಗೆ ಅಗ್ನಿರೇಖೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2011, 11:00 IST
Last Updated 25 ಜನವರಿ 2011, 11:00 IST

ಚಿಕ್ಕಮಗಳೂರು (ಆಲ್ದೂರು) : ಜಗತ್ತಿನ 18 ಜೀವ ವೈವಿಧ್ಯ ತಾಣಗಳ ಪೈಕಿ ಒಂದೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪಶ್ಚಿಮ ಘಟ್ಟ ಪ್ರದೇಶ ಅಪಾರ ಜೀವ ಸಂಕುಲಗಳ ಬೀಡು. ಈ ಶೋಲಾ ಕಾಡುಗಳು ಪ್ರತಿವರ್ಷ ಆಕಸ್ಮಿಕವಾಗಿ ಸಂಭವಿಸುವ ಕಾಡ್ಗಿಚ್ಚಿನಿಂದಾಗಿ ಹೊತ್ತಿ ಉರಿದು ನಾಶವಾಗಿರುವ  ಉದಾಹರಣೆಗಳು ಜಿಲ್ಲೆಯಲ್ಲಿ ಸಾಕಷ್ಟಿವೆ.ಇಂತಹ ಬೆಂಕಿ ಅವಘಡಗಳಿಂದ ಶೋಲಾ ಕಾಡುಗಳ ಪ್ರಾಕೃತಿಕ ಸಂಪತ್ತು ಸಂರಕ್ಷಿಸಲು ಜಿಲ್ಲೆಯ ಅರಣ್ಯ ಇಲಾಖೆ ‘ಫೈರ್‌ಲೈನ್’ವಿಧಾನದ ಮೂಲಕ ಕಳೆದ ಮೂರು ವರ್ಷಗಳಿಂದ ಶ್ರಮ ವಹಿಸಿ ಕೆಲಸ ಮಾಡುತ್ತಿದೆ.

ಪ್ರತಿವರ್ಷ ಚಲಿಗಾಲ ಕಳೆಯುತ್ತಿದ್ದಂತೆ ಆರಂಭವಾಗುವ ಬೇಸಿಗೆಯ ಸುಡುಬಿಸಿಲಿಗೆ ಪಶ್ಚಿಮ ಘಟ್ಟದ ಬೆಟ್ಟ ಸಾಲುಗಳಲ್ಲಿನ ಹುಲ್ಲುಗಾವಲು ಸಂಪೂರ್ಣವಾಗಿ ಒಣಗಿ ಹೋಗುತ್ತದೆ. ಒಣಗಿನಿಂತ ಹುಲ್ಲುಗಾವಲಿಗೆ ಆಕಸ್ಮಿಕವಾಗಿ  ಅಥವಾ ಕಿಡಿಗೇಡಿಗಳು ಹಾಕುವ ಬೆಂಕಿಗೆ ಇಡೀ ಹುಲ್ಲುಗಾವಲು ಹೊತ್ತಿ ಉರಿಯುತ್ತದೆ. ಇದರಿಂದ ಪಶ್ಚಿಮಘಟ್ಟದ ವೈವಿಧ್ಯಮಯ ಪ್ರಾಕೃತಿಕ ಸಂಪತ್ತು ಬರಿದಾಗುವ ಆತಂಕ ಎದುರಾಗುತ್ತದೆ.

ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿರುವ ಕುದುರೆಮುಖ, ಮುಳ್ಳಯ್ಯನಗಿರಿ, ಚಾರ್ಮುಡಿ ಘಾಟ್, ಕೆಮ್ಮಣ್ಣುಗುಂಡಿ, ಮೊದಲಾದೆಡೆಗಳಲ್ಲಿನ ಸಾಕಷ್ಟು ಶೋಲಾ ಕಾಡುಗಳು ಹೀಗೆ ಪ್ರತಿವರ್ಷ ಸಂಭವಿಸುವ ಬೆಂಕಿಯ ಕೆನ್ನಾಲಿಗೆಗೆ ಸಿಕ್ಕು ನಾಶವಾಗಿರುವ ಆಹುತಿಯಾಗಿವೆ. ಭ್ರದ್ರಾ ಅಭಯಾರಣ್ಯದಲ್ಲಿ 2004ರಲ್ಲಿ ಸಂಭವಿಸಿದ ಬೆಂಕಿ ಅನಾಹುತ ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ಸಂಭವಿಸಿದ ಅವಗಡದಲ್ಲಿ ದೊಡ್ಡದು. 

ಬೆಂಕಿ ಅನಾಹುತದಿಂದಾಗಿ ಆಗುತ್ತಿರುವ ನಷ್ಟವನ್ನು ಮನಗಂಡಿರುವ ಜಿಲ್ಲೆಯ ಅರಣ್ಯ ಇಲಾಖೆ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಳೆದ ಮೂರು ವರ್ಷಗಳಿಂದ ಜಿಲ್ಲೆಯಾದ್ಯಂತ  ಶೋಲಾ ಕಾಡುಗಳಿರುವ ಪ್ರದೇಶಗಳಲ್ಲಿ  ಪೈರ್‌ಲೈನ್ (ಬೆಂಕಿರೇಖೆ) ನಿರ್ಮಿಸುವ ನಿಟ್ಟಿನಲ್ಲಿ  ಕಾರ್ಯನಿರ್ವಹಿಸುತ್ತಿದೆ.

ಪಶ್ಚಿಮಘಟ್ಟದ ಮುಳ್ಳಯ್ಯನ ಗಿರಿ, ಕವಿಕಲ್‌ಗಂಡಿ, ದತ್ತಾತ್ರೇಯ ಪೀಠ, ಅತ್ತಿಗುಂಡಿ, ಮಾಣಿಕ್ಯಧಾರ, ಹೊನ್ನಮ್ಮನಹಳ್ಳ, ಕುದುರೆಮುಖ, ಚಾರ್ಮುಡಿ ಘಾಟ್ ಕಡೆಗಳಲ್ಲಿ ಹೆಚ್ಚಾಗಿ ಕಾಣಸಿಗುವ ಶೋಲಾ ಕಾಡುಗಳ ವ್ಯಾಪ್ತಿಯಲ್ಲಿ ಪ್ರಾದೇಶಿಕ ಅರಣ್ಯ ವಿಭಾಗದ ಡಿಫ್‌ಒ ವೆಂಕಟೇಶ್ ಮಾರ್ಗದರ್ಶನದಲ್ಲಿ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಬೇಸಿಗೆ ಆರಂಭವಾಗುತ್ತಿದ್ದಂತೆ ಫೈರ್‌ಲೈನ್ ನಿರ್ಮಿಸುವ ಮೂಲಕ ಬೆಂಕಿ ಬೀಳದಂತೆ ಹಾಗೂ ಬಿದ್ದ ನಂತರ ತಕ್ಷಣಕ್ಕೆ ನಿರ್ವಹಿಸಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುತ್ತ ಕಾರ್ಯಪ್ರವೃತ್ತವಾಗುತ್ತದೆ.

ಶೋಲಾ ಕಾಡುಗಳ ಮಹತ್ವ: ಜೈವಿಕ ವೈವಿಧ್ಯತೆಯ ಭಂಡಾರ. ಬೆಟ್ಟ ಸಾಲಿನ ಇಳಿಜಾರಿನಲ್ಲಿ ಮಾತ್ರ ಕಂಡುಬರುವ ಶೋಲಾ ಕಾಡಿನಲ್ಲಿ  ಒಂದೇ ಜಾತಿಗೆ ಸೇರಿದ ಹೆಚ್ಚು ಎತ್ತರಕ್ಕೆ ಬೆಳೆಯದ ಗಿಡ, ಮರಗಳು ಕಾಣಸಿಗುತ್ತವೆ. 

 ಸೂರ್ಯರಶ್ಮಿಗಳೂ ನೆಲಕ್ಕೆ ತಾಕದಂತೆ ಕಿರಿದಾದ ಗುಂಪಿನಲ್ಲಿ ದಟ್ಟವಾಗಿ ಬೆಳೆಯುವ ಕಾಡುಗಳು ವರ್ಷವಿಡೀ ಹಚ್ಚಹಸಿರಾಗಿರುವ ವಿಶೇಷಗುಣವುಳ್ಳದ್ದು. ಅಪರೂಪದ ಕ್ರಿಮಿ, ಕೀಟ, ಮರಗಪ್ಪೆಗಳ ಪ್ರಬೇಧ ಹಾಗೂ ವಿವಿಧ ಜಾತಿಯ ಹಾವು, ಹಕ್ಕಿ, ಪ್ರಾಣಿಗಳ ಆಶ್ರಯ ತಾಣ. ಮಳೆಗಾಲದಲ್ಲಿ ಬೆಟ್ಟಗುಡ್ಡಗಳ ಮೇಲೆ ಸುರಿಯುವ ಮಳೆನೀರನ್ನು ಗುಡ್ಡಗಳ ಮೇಲಿನ ಹುಲ್ಲುಗಾವಲಿನ ಸಹಾಯದಿಂದ ಶೋಲಾಕಾಡುಗಳು ತನ್ನಲ್ಲಿ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯಹೊಂದಿದೆ. ವರ್ಷವಿಡೀ ಶೋಲಾ ಕಾಡುಗಳ ತಪ್ಪಲಲ್ಲಿ ಹರಿಯುವ ಈ ನೀರು ಮನುಷ್ಯ ಸೇರಿದಂತೆ ಪ್ರಾಣಿ, ಪಕ್ಷಿಗಳಿಗೆ ಜೀವಸೆಲೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.